ವೀಡಿಯೊ…| ರಸಗುಲ್ಲಾ ಕಡಿಮೆ ಬಿದ್ದಿದ್ದಕ್ಕೆ ಮದುವೆ ಮನೆಯಲ್ಲಿ ಹೊಡೆದಾಟ…ಕುರ್ಚಿ, ಪಾತ್ರೆಗಳಲ್ಲೇ ಬಡಿದಾಟ…!

ಅಸಾಮಾನ್ಯ ಘಟನೆಯಲ್ಲಿ, ಬಿಹಾರದ ಬೋಧ ಗಯಾದಲ್ಲಿ ನಡೆದ ಮದುವೆಯ ಸಮಾರಂಭವೊಂದರಲ್ಲಿ, ರಸಗುಲ್ಲಾ ಸಿಹಿ ತಿನಿಸು ಕಡಿಮೆ ಬಿದ್ದಿದ್ದಕ್ಕೆ ವಧು ಮತ್ತು ವರನ ಕಡೆಯ ಕುಟುಂಬಗಳ ನಡುವೆ ಹೊಡೆದಾಟ ನಡೆದು ಯುದ್ಧಭೂಮಿಯಾಗಿ ಮಾರ್ಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಎರಡೂ ಕಡೆಯ ಕುಟುಂಬ ಸದಸ್ಯರು ಮತ್ತು ಅತಿಥಿಗಳು ಪರಸ್ಪರ ಬಡಿದಾಡುವುದು, ತಳ್ಳುವುದು ಕಂಡುಬಂದಿದ್ದು, ಕೆಲವರು ಕೆಂಪು ಪ್ಲಾಸ್ಟಿಕ್ ಕುರ್ಚಿಗಳನ್ನು ತೆಗೆದುಕೊಂಡು ಅವುಗಳನ್ನು ಆಯುಧಗಳಂತೆ ಬಳಸಿ ಇತರರಿಗೆ ಹೊಡೆದಿದ್ದಾರೆ.
NDTV ವರದಿಯ ಪ್ರಕಾರ, ರಸಗುಲ್ಲಾ ಕಡಿಮೆ ಬಿದ್ದಿದ್ದಕ್ಕೆ ನಡೆದ ಜಗಳದ ಪರಿಣಾಮವಾಗಿ ಮದುವೆ ರದ್ದಾದ ನಂತರ, ವಧುವಿನ ಕುಟುಂಬವು ವರನ ಕಡೆಯವರ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದೆ.

ಘಟನೆಯ ವಿವರ
ಘಟನೆಯು ನವೆಂಬರ್ 29 ರಂದು ಬೋಧ್ ಗಯಾದ ಒಂದು ಹೋಟೆಲ್‌ನಲ್ಲಿ ನಡೆದಿದೆ. ವಧುವಿನ ಕುಟುಂಬವು ಹೋಟೆಲ್‌ನಲ್ಲಿ ತಂಗಿತ್ತು. ವರ ಮತ್ತು ಅವನ ಕುಟುಂಬದವರು ಸಮೀಪದ ಹಳ್ಳಿಯಿಂದ ಅಲ್ಲಿಗೆ ಬಂದಿದ್ದರು.
ಮದುವೆಯ ವಿಧಿವಿಧಾನಗಳು ಮುಗಿದ ನಂತರ, ರಸಗುಲ್ಲಾ ಕೊರತೆಯಿಂದಾಗಿ ವಧುವಿನ ಕುಟುಂಬವು ಗಲಾಟೆ ಶುರುಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಟಿವಿಯಲ್ಲಿ ಆರಂಭದಲ್ಲಿ ಜನರು ಆಹಾರದ ಮಳಿಗೆಗಳ ಬಳಿ ಜಮಾಯಿಸಿದ್ದು, ಯಾವುದೇ ಅಹಿತಕರ ಘಟನೆ ಇರಲಿಲ್ಲ.ಆದರೆ, ಇದ್ದಕ್ಕಿದ್ದಂತೆ ಜಗಳ ಪ್ರಾರಂಭವಾಯಿತು. ಹಲವರು ಪರಸ್ಪರ ಹೊಡೆಯಲು ಕೈಗೆ ಸಿಕ್ಕಿದ್ದ ಕುರ್ಚಿಗಳು, ತಟ್ಟೆಗಳು, ಪಾತ್ರೆಗಳು ಸೇರಿದಂತೆ ಎಲ್ಲವನ್ನೂ ಬಳಸಿದ್ದಾರೆ.
ಎರಡೂ ಕಡೆಯ ಅನೇಕರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಧಾನಗಳ ನಂತರ ದಂಪತಿ ಮದುವೆ ಮಂಟಪಕ್ಕೆ ಹೊರಟಿದ್ದಾಗ ಈ ಗಲಾಟೆ ಶುರುವಾಗಿದೆ.

ವರನ ತಂದೆ ಈ ಜಗಳಕ್ಕೆ ರಸಗುಲ್ಲಾ ಕೊರತೆಯೇ ಕಾರಣ ಎಂದು ದೃಢಪಡಿಸಿದರು. ಆದರೆ, ಘಟನೆಯ ನಂತರ ವಧುವಿನ ಕುಟುಂಬವು ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿದೆ ಎಂದು ಅವರು ಆರೋಪಿಸಿದ್ದಾರೆ.
ವರನ ಕುಟುಂಬ ಮದುವೆ ಮುಂದುವರೆಸಲು ಒಪ್ಪಿದ್ದರೂ, ವಧುವಿನ ಕುಟುಂಬವು ಮದುವೆ ಮಾಡದಿರಲು ನಿರ್ಧರಿಸಿದೆ.
ವರನ ತಾಯಿ ಮುನ್ನಿ ದೇವಿ, ಜಗಳ ನಡೆಯುತ್ತಿದ್ದಾಗ ವಧುವಿನ ಕಡೆಯವರು ಆಕೆ ಉಡುಗೊರೆಯಾಗಿ ತಂದಿದ್ದ ಆಭರಣಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೋಟೆಲ್ ಬುಕಿಂಗ್ ಕೂಡ ವರನ ಕುಟುಂಬವೇ ಮಾಡಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
“ಮದುವೆಯನ್ನು ಮುಂದುವರೆಸುವಂತೆ ನಾವು ವಧುವಿನ ಕುಟುಂಬದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದೆವು. ಆದರೆ ಅದು ಫಲ ನೀಡಲಿಲ್ಲ,” ಎಂದು ವರನ ಸೋದರಸಂಬಂಧಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲು ಸಿದ್ಧ ಎಂದ ಪತ್ನಿ ; ಆದರೆ ಅದಕ್ಕೆ ಎರಡು ಷರತ್ತುಗಳು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement