ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಅವರ ವಿದೇಶ ಪ್ರವಾಸಗಳ ಕಟ್ಟುನಿಟ್ಟಾದ ಮತ್ತು ಅತಿ ಗೋಪ್ಯ ಭದ್ರತಾ ಕ್ರಮಗಳು ಮತ್ತೊಮ್ಮೆ ವಿಶ್ವದ ಗಮನ ಸೆಳೆದಿವೆ. ಆತಿಥೇಯ ರಾಷ್ಟ್ರವು ತನ್ನದೇ ಆದ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಿದರೂ, ಪುತಿನ್ ಅವರ ವಿದೇಶ ಪ್ರಯಾಣದ ಭದ್ರೆತೆಯು ಪರಮ ಎಚ್ಚರಿಕೆ, ಕಟ್ಟುನಿಟ್ಟಿನ ವ್ಯವಸ್ಥಾಪನಾ ನಿಯಂತ್ರಣ ಮತ್ತು ಸಾರ್ವಜನಿಕ ದೃಷ್ಟಿಗೆ ಸಿಗದ ಭದ್ರತಾ ಜಾಲದಿಂದ ನಿರೂಪಿಸಲ್ಪಟ್ಟಿದೆ.
ಈ ಎಲ್ಲ ವ್ಯವಸ್ಥೆಗಳನ್ನು ರಷ್ಯಾದ ಅತ್ಯಂತ ರಹಸ್ಯ ಭದ್ರತಾ ಏಜೆನ್ಸಿಗಳಲ್ಲಿ ಒಂದಾದ ಫೆಡರಲ್ ಪ್ರೊಟೆಕ್ಟಿವ್ ಸರ್ವಿಸ್ (FSO) ನೋಡಿಕೊಳ್ಳುತ್ತದೆ. ಅವರ ಪ್ರಯಾಣದಿಂದ ಹಿಡಿದು ವೈಯಕ್ತಿಕ ಸುರಕ್ಷತೆಯವರೆಗಿನ ಪ್ರತಿಯೊಂದು ವಿವರವು ಹೊರಹೋಗದಂತೆ ಅದು ಕಟ್ಟುನಿಟ್ಟಾಗಿ ನೋಡಿಕೊಳ್ಳುತ್ತದೆ.
ಅದೃಶ್ಯ ಭದ್ರತಾ ಜಾಲ (Invisible Security Web)
ಪುತಿನ್ ಅವರ ಸುತ್ತ ಕಾಣಿಸುವ ಅಂಗರಕ್ಷಕರು ಕೇವಲ ಅತ್ಯಂತ ಸಂಕೀರ್ಣವಾದ ರಕ್ಷಣಾ ಜಾಲದ ಮೇಲ್ಮೈ ಮಾತ್ರ, ಅಂದರೆ ಹೊರಗೆ ಕಾಣುವವರು ಮಾತ್ರ. ಕೆಜಿಬಿ ಪ್ರೋಟೋಕಾಲ್ಗಳ ಆಧಾರದ ಮೇಲೆ ರೂಪುಗೊಂಡಿರುವ ಎಫ್ಎಸ್ಒ (FSO), ವಿಸ್ತಾರವಾದ ಭದ್ರತಾ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅನೇಕ ಮಾಧ್ಯಮ ವರದಿಗಳಿವೆ.
ಅವರ ವೈಯಕ್ತಿಕ ಅಂಗರಕ್ಷಕರು ಗಣ್ಯ ಅಧ್ಯಕ್ಷೀಯ ಭದ್ರತಾ ಸೇವೆ (SBP) ಯಿಂದ ಬಂದವರಾಗಿದ್ದು, ಅತ್ಯಂತ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆಯ ಮೂಲಕ ಅವರನ್ನು ಆರಿಸಲಾಗುತ್ತದೆ. ಆಯ್ಕೆಯಾಗಲು ಅಭ್ಯರ್ಥಿಗಳು 35 ವರ್ಷದೊಳಗಿರಬೇಕು, ಅವರ ಎತ್ತರ 180 ಸೆಂ.ಮೀ.ಗಿಂತ ಹೆಚ್ಚಿರಬೇಕು. ದೈಹಿಕವಾಗಿ ಸದೃಢರಾಗಿರಬೇಕು ಮತ್ತು ಯುದ್ಧ ಸನ್ನದ್ಧರಾಗಿರಬೇಕು. ಹಾಗೂ ಮಾನಸಿಕವಾಗಿ ದೃಢವಾಗಿರಬೇಕು. ಅಲ್ಲದೆ, ವಿದೇಶಿ ಭಾಷಾ ಕೌಶಲ್ಯಗಳು, ಕೂಲಂಕಷ ಹಿನ್ನೆಲೆ ಪರಿಶೀಲನೆ ಮತ್ತು ಅವರ ನಿಷ್ಠೆ ಪರೀಕ್ಷೆಗಳು ಕಡ್ಡಾಯವಾಗಿರುತ್ತವೆ.
2023 ರಲ್ಲಿ ರಷ್ಯಾದಿಂದ ಪಲಾಯನ ಮಾಡಿದ ಮಾಜಿ ಅಂಗರಕ್ಷಕ ಗ್ಲೆಬ್ ಕರಾಕುಲೋವ್ ಅವರು ಪುತಿನ್ ಅವರ “ಗೌಪ್ಯ” ಜೀವನಶೈಲಿಯನ್ನು ವಿವರಿಸಿದ್ದಾರೆ. ಅವರು ಮೊಬೈಲ್ ಫೋನ್ಗಳನ್ನು ಬಳಸುವುದಿಲ್ಲ ಮತ್ತು ಕೆಲವೊಮ್ಮೆ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಈ ಭದ್ರತಾ ಜಾಲದಲ್ಲಿ ಸ್ನೈಪರ್ಗಳು, ಡ್ರೋನ್ ನಿರ್ವಹಣೆ ಮಾಡುವವರು, ಎಲೆಕ್ಟ್ರಾನಿಕ್-ಗುಪ್ತಚರ ತಜ್ಞರು ಮತ್ತು ಸಂವಹನ ಘಟಕಗಳು (communication units) ಸಹ ಇರುತ್ತವೆ.
ಆಹಾರ, ಪ್ರಯೋಗಾಲಯ ಮತ್ತು ನೈರ್ಮಲ್ಯದ ಕಟ್ಟುನಿಟ್ಟು ನಿಯಮಗಳು
ಅಧ್ಯಕ್ಷ ಪುತಿನ್ ಅವರ ವೈಯಕ್ತಿಕ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ನಿಯಮಗಳು ಅತ್ಯಂತ ಕಠಿಣವಾಗಿವೆ. ಅವರ ವಿದೇಶ ಪ್ರವಾಸದಲ್ಲಿಯೂ ಅಡುಗೆ ಘಟಕ ಅವರೊಂದಿಗೆ ಇರುತ್ತದೆ. ಅಡುಗೆ ಮುಖ್ಯಸ್ಥರು ಕೈಗವಸುಗಳನ್ನು ಧರಿಸಬೇಕು, ಸಮವಸ್ತ್ರಗಳನ್ನು ದಿನಕ್ಕೆ ಹಲವಾರು ಬಾರಿ ಬದಲಾಯಿಸಬೇಕು ಮತ್ತು ಅವರ ಕೈಗಳಿಗೆ ಗಾಯಗಳಿವೆಯೇ ಪರಿಶೀಲಿಸಲಾಗುತ್ತದೆ. ಅಧ್ಯಕ್ಷರ ಅಡುಗೆಮನೆಗೆ ಪ್ರವೇಶಿಸುವ ಪ್ರತಿಯೊಂದು ಪದಾರ್ಥವನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತದೆ.
ಆಹಾರದ ಮೇಲೆ ಈ ಎಲ್ಲ ಕಟ್ಟುನಿಟ್ಟಿನ ನಿಯಂತ್ರಣಗಳ ಹೊರತಾಗಿಯೂ, ಅಧ್ಯಕ್ಷರಿಗಾಗಿ ತಯಾರಿಸಿದ ಎಲ್ಲ ಭಕ್ಷ್ಯಗಳನ್ನು ಮೊದಲು ಅವರ ಅಂಗರಕ್ಷಕರು ಸವಿಯುತ್ತಾರೆ. ವಿಷಪೂರಿತ ಆಹಾರವು ಸಿದ್ಧವಾಗಿದ್ದರೆ, ಅದು ಪುತಿನ್ ಅವರಿಗೆ ತಲುಪುವ ಮೊದಲು ಅಂಗರಕ್ಷಕರ ಮೇಲೆ ಅದು ಪರಿಣಾಮ ಬೀರಬೇಕು ಎಂಬುದು ಇದರ ಹಿಂದಿನ ಉದ್ದೇಶ. ಅಂಗರಕ್ಷಕರು ಸೇವಿಸಿದ ನಂತರವೇ ಪುತಿನ್ ಅದನ್ನು ತಿನ್ನುತ್ತಾರೆ.
ಆಹಾರದ ಆಯ್ಕೆಗಳು: ಪುತಿನ್ ಅವರು ಫಾಸ್ಟ್ ಫುಡ್ಗಳನ್ನು ತಿನ್ನುವುದಿಲ್ಲ ಮತ್ತು ರಾತ್ರಿಯ ಊಟದಲ್ಲಿ ಮಾಂಸ ಸೀಮಿತ. ಬದನೆಕಾಯಿ ಅಪೆಟೈಜರ್ಗಳು, ಆಲಿವಿಯರ್ ಸಲಾಡ್ ಮತ್ತು ಬೇಟೆ ಪ್ರಾಣಿಯ ಯಕೃತ್ತನ್ನು ಇಷ್ಟಪಡುತ್ತಾರೆ. ಅಧಿಕೃತ ಕಾರ್ಯಕ್ರಮಗಳಲ್ಲಿ ರೋಸ್ಹಿಪ್ (rosehip) ಅಥವಾ ಶುಂಠಿ ಚಹಾವನ್ನು ಕುಡಿಯುತ್ತಾರೆ ಮತ್ತು ಅಪರೂಪಕ್ಕೆ ಮಾತ್ರ ಮದ್ಯ ಸೇವಿಸುತ್ತಾರೆ.
ವಾಹನಗಳು ಮತ್ತು ವಿಮಾನ ಭದ್ರತೆ
ವಿದೇಶಗಳಲ್ಲಿ, ಪುತಿನ್ ಅವರು ಬುಲೆಟ್ಪ್ರೂಫ್ ಔರಸ್ ಸೆನಾಟ್ (Aurus Senat) ಲಿಮೋಸಿನ್ ವಾಹನದಲ್ಲಿ ಪ್ರಯಾಣಿಸುತ್ತಾರೆ. ಇದು ಗ್ರೆನೇಡ್ ಪ್ರತಿರೋಧಕ, ತುರ್ತು ಆಮ್ಲಜನಕ ಪೂರೈಕೆ, ಅಗ್ನಿಶಾಮಕ ವ್ಯವಸ್ಥೆ ಮತ್ತು ಸುಧಾರಿತ ಸಂವಹನ ವ್ಯವಸ್ಥೆಗಳನ್ನು ಹೊಂದಿದೆ.
ಅವರ ಇಲ್ಯುಶಿನ್ IL-96-300PU ವಿಮಾನಕ್ಕೆ “ಫ್ಲೈಯಿಂಗ್ ಪ್ಲುಟಾನ್” ಅಥವಾ “ಫ್ಲೈಯಿಂಗ್ ಕ್ರೆಮ್ಲಿನ್” ಎಂದೂ ಹೆಸರಿದೆ. ಇದು ಸುರಕ್ಷಿತ ಸಂವಹನ ವ್ಯವಸ್ಥೆಗಳು, ಜಿಮ್, ವೈದ್ಯಕೀಯ ಕೇಂದ್ರ, ಸಮ್ಮೇಳನ ಕೊಠಡಿಗಳು ಮತ್ತು ಪರಮಾಣು ದಾಳಿ ಸಾಧನಗಳನ್ನು ಒಳಗೊಂಡಿದೆ.
‘ಪೂಪ್ ಸೂಟ್ಕೇಸ್’ ಪ್ರೋಟೋಕಾಲ್
ಪುತಿನ್ ಅವರ ಪ್ರಯಾಣದ ದಿನಚರಿಯ ಅತ್ಯಂತ ಅಸಾಮಾನ್ಯ ಅಂಶಗಳಲ್ಲಿ ಒಂದು. ಅವರ ಮಲ ಸೇರಿದಂತೆ ಅವರ ತ್ಯಾಜ್ಯ ವಿಸರ್ಜನೆಯ ನಿರ್ವಹಣೆ ಮಾಡಲಾಗುತ್ತದೆ. ಅವರ ಮಲ-ಮೂತ್ರವನ್ನು ಸಂಗ್ರಹಿಸಿ, ಅದನ್ನು ಸೀಲ್ ಮಾಡಿ ವಿಮಾನದ ಮೂಲಕ ರಷ್ಯಾಕ್ಕೆ ಒಯ್ಯಲಾಗುತ್ತದೆ ಎಂದು ವರದಿಗಳಿವೆ.
ವಿದೇಶಿ ಗುಪ್ತಚರ ಸಂಸ್ಥೆಗಳು ಅವರ ಆರೋಗ್ಯದ ಸ್ಥಿತಿಯನ್ನು ವಿಶ್ಲೇಷಿಸುವುದು ಅಥವಾ ಪತ್ತೆ ಹೆಚ್ಚುವುದನ್ನು ತಡೆಯುವುದೇ ಇದರ ಮುಖ್ಯ ಉದ್ದೇಶ. ಅಂಗರಕ್ಷಕರು ಇದನ್ನು ನಿರ್ವಹಿಸುತ್ತಾರೆ ಮತ್ತು ಅದನ್ನು ಮೊಹರು ಮಾಡಿದ ಬ್ರೀಫ್ಕೇಸ್ನಲ್ಲಿ ಇರಿಸಿ ಮಾಸ್ಕೋಗೆ ಒಯ್ಯುತ್ತಾರೆ. ಈ ಪದ್ಧತಿಯನ್ನು ಪುತಿನ್ ಅವರ 2017 ರ ಫ್ರಾನ್ಸ್ ಭೇಟಿ, 2019 ರ ಸೌದಿ ಅರೇಬಿಯಾ ಪ್ರವಾಸ ಮತ್ತು ಇತ್ತೀಚಿನ ಅಲಸ್ಕಾ ಶೃಂಗಸಭೆಯ ಸಮಯದಲ್ಲಿ ಗಮನಿಸಲಾಗಿದೆ.
ಮಾಜಿ ಬಿಬಿಸಿ ಪತ್ರಕರ್ತೆ ಫರೀದಾ ರುಸ್ತಮೋವಾ ಅವರು ಇದನ್ನು ದೃಢಪಡಿಸಿದ್ದು, ಅವರು ವಿದೇಶ ಪ್ರವಾಸದ ಸಮಯದಲ್ಲಿ ಪೋರ್ಟಬಲ್ ಶೌಚಾಲಯವನ್ನು ಒಳಗೊಂಡಿರುವ ಖಾಸಗಿ ಬಾತ್ ರೂಮ್ ಅನ್ನು ಬಳಸುತ್ತಾರೆ. 1999 ರಲ್ಲಿ ಪುತಿನ್ ನಾಯಕರಾದಾಗಿನಿಂದ ಈ ಪದ್ಧತಿ ಅನುಸರಣೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಆಂತರಿಕ ಭದ್ರತಾ ತಂಡವು ವಿದೇಶ ಪ್ರಯಾಣದ ಸಂದರ್ಭದಲ್ಲಿ ಅನುಸರಿಸುವ ಈ ಬಿಗಿಯಾದ ಭದ್ರತಾ ಪ್ರೋಟೋಕಾಲ್ಗಳಿವೆ. ವಿದೇಶಿ ಪ್ರವಾಸಗಳ ಸಮಯದಲ್ಲಿ ಪುತಿನ್ ಅವರು ಹೋಟೆಲ್ ರೂಂ ಸೇವೆಗಳು, ಪಾತ್ರೆಗಳು ಅಥವಾ ಸ್ಥಳೀಯ ನೀರನ್ನು ಬಳಸುವುದಿಲ್ಲ ಎಂಬ ವರದಿಗಳಿವೆ. ಅವರ ವೈಯಕ್ತಿಕ ಭದ್ರತಾ ತಂಡವು ರಷ್ಯಾದಿಂದಲೇ ಬಾಟಲಿ ನೀರು, ನೈರ್ಮಲ್ಯ ಕಿಟ್ಗಳು ಮತ್ತು ವೈದ್ಯಕೀಯ ತಜ್ಞರನ್ನು ಎಲ್ಲೆಡೆ ಕೊಂಡೊಯ್ಯುತ್ತದೆ.
ಅವರ ಭದ್ರತಾ ತಂಡವು ಪೂರ್ವಭಾವಿಯಾಗಿ ಆ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ನೈರ್ಮಲ್ಯೀಕರಿಸಿ ಮತ್ತು ಕ್ರೆಮ್ಲಿನ್ ಭದ್ರತೆಯಿಂದ ಅನುಮೋದನೆಗೊಂಡ ವಸ್ತುಗಳನ್ನು ಮಾತ್ರ ಬದಲಾಯಿಸುತ್ತಿತ್ತು. ಪುಟಿನ್ ಅವರ ‘ಜೈವಿಕ ಶೀಲ್ಡ್’ (Biological-shield) ಪರಿಕಲ್ಪನೆಯು ಪ್ರಾರಂಭವಾದದ್ದು ಇದೇ ಅವಧಿಯಲ್ಲಿ.
ಉಕ್ರೇನ್ ಯುದ್ಧದ ನಂತರದ ಅತಿ-ರಹಸ್ಯ ಭದ್ರತಾ ವ್ಯವಸ್ಥೆ
2022 ರಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಪ್ರಾರಂಭವು ಅಧ್ಯಕ್ಷ ಪುತಿನ್ ಅವರಿಗೆ ಅತಿ-ಸುರಕ್ಷಿತ ಭದ್ರತಾ ಕವಚದ ಅಗತ್ಯವನ್ನು ತಂದಿತು. ವಿದೇಶ ಪ್ರವಾಸಗಳು ತೀವ್ರವಾಗಿ ಸೀಮಿತಗೊಂಡವು. ಅಸ್ತಿತ್ವದಲ್ಲಿರುವ ಪ್ರೋಟೋಕಾಲ್ಗಳ ಡಬಲ್ ಲೇಯರ್ ಜಾರಿಗೆ ತರಲಾಯಿತು. ಇದೇ ಅವಧಿಯಲ್ಲಿ ಅಧ್ಯಕ್ಷ ಪುತಿಟಿನ್ ಅವರಂತೆ ಕಾಣುವ ಪ್ರತಿರೂಪಿಗಳು (Body Clones/Doubles) ಇರುವ ಬಗ್ಗೆಯೂ ವರದಿಗಳು ಹೊರಬಂದವು. ಪುತಿನ್ ಅವರು ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುವ ಪ್ರದೇಶಗಳಲ್ಲಿ ಸಂಪೂರ್ಣ ಚಲನವಲನ ನಿರ್ಬಂಧವನ್ನು ಅನುಸರಿಸಲಾಯಿತು.
2024–2025: ವಿಸ್ತೃತ ಆರೋಗ್ಯ ಗುಪ್ತತೆ ಕ್ರಮಗಳು
ಕಳೆದ ಎರಡು ವರ್ಷಗಳು ಅಧ್ಯಕ್ಷ ಪುತಿನ್ ಅವರ ಪ್ರಯಾಣದ ಸಮಯದಲ್ಲಿ ಅವರ ಕಾರ್ಯಕ್ರಮಗಳ ಸುತ್ತಲೂ ಹೆಚ್ಚಿದ ಭದ್ರತೆ ಮತ್ತು ಗುಪ್ತತೆಯನ್ನು ಈಗ ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ. ಪೂಪ್ ಸೂಟ್ಕೇಸ್, ಮೊಬೈಲ್ ಆಹಾರ ಪ್ರಯೋಗಾಲಯಗಳು, ಪ್ರತಿ-ಜೈವಿಕ ಭದ್ರತೆ ಮತ್ತು ದೇಹದ ಪ್ರತಿರೂಪಿಗಳಂತಹ ಎಲ್ಲಾ ಪ್ರೋಟೋಕಾಲ್ಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈಗ ರಷ್ಯಾ ಅಧ್ಯಕ್ಷರ ಭದ್ರತಾವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಅತ್ಯಾಧುನಿಕ, ವಿಸ್ತೃತ ಮತ್ತು ರಹಸ್ಯವಾದದ್ದು ಆಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ