ವೀಡಿಯೊ..| ಇಂಡಿಗೋ ವಿಮಾನ ರದ್ದು : ತನ್ನದೇ ಮದುವೆ ಆರತಕ್ಷತೆಗೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾದ ಹುಬ್ಬಳ್ಳಿ ಯುವತಿ

ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನಗಳು ವ್ಯಾಪಕವಾಗಿ ರದ್ದುಗೊಂಡ ಪರಿಣಾಮ, ನವದಂಪತಿ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ತಮ್ಮ ಆರತಕ್ಷತೆ ಸಮಾರಂಭಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದೆ, ವರ್ಚುಯಲ್ (ಆನ್‌ಲೈನ್) ಮೂಲಕ ಭಾಗವಹಿಸಿದ ಅನಿರೀಕ್ಷಿತ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿಯ ಮೇಧಾ ಮತ್ತು ಒಡಿಶಾದ ಭುವನೇಶ್ವರದ ಸಂಗಮ ದಾಸ್ ಅವರ ಆರತಕ್ಷತೆ ಸಮಾರಂಭವನ್ನು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಏರ್ಪಡಿಸಲಾಗಿತ್ತು. ಭುವನೇಶ್ವರದಲ್ಲಿ ನವೆಂಬರ್ 23 ರಂದು ವಿವಾಹವಾಗಿದ್ದ ಈ ದಂಪತಿ, ವಧುವಿನ ಊರಾದ ಹುಬ್ಬಳ್ಳಿಯಲ್ಲಿ ಬುಧವಾರ ಔಪಚಾರಿಕ ಆರತಕ್ಷತೆ ಸಮಾರಂಭವನ್ನು ನಿಗದಿಪಡಿಸಿದ್ದರು.
ಆದರೆ, ದೇಶಾದ್ಯಂತ ಪೈಲಟ್‌ಗಳ ಕೊರತೆಯಿಂದಾಗಿ ಇಂಡಿಗೋ (IndiGo) ವಿಮಾನಯಾನ ಸಂಸ್ಥೆ ಹಲವಾರು ವಿಮಾನಗಳನ್ನು ರದ್ದುಗೊಳಿಸಿದ ಕಾರಣ, ಈ ಕಾರ್ಯಕ್ರಮ ಅಸಾಮಾನ್ಯ ತಿರುವು ಪಡೆದುಕೊಂಡಿತು.

ವಿಮಾನ ವಿಳಂಬ, ನಂತರ ರದ್ದು: ನವಜೋಡಿಗೆ ಸಂಕಷ್ಟ
ಡಿಸೆಂಬರ್ 2 ರಂದು ಭುವನೇಶ್ವರದಿಂದ ಬೆಂಗಳೂರಿಗೆ, ಮತ್ತು ಅಲ್ಲಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದ ವಧು-ವರರು ಮಂಗಳವಾರ ಬೆಳಿಗ್ಗೆ 9 ರಿಂದ ಮರುದಿನ ಮುಂಜಾನೆಯವರೆಗೆ ಪುನಃ ಪುನಃ ವಿಮಾನ ವಿಳಂಬಗೊಂಡು ಅಂತಿಮವಾಗಿ ಡಿಸೆಂಬರ್‌ 3 ರಂದು ವಿಮಾನ ರದ್ದುಗೊಂಡ ಕಾರಣ ಮಾರ್ಗಮಧ್ಯದಲ್ಲೇ ಸಿಲುಕಿಕೊಂಡರು. ಭುವನೇಶ್ವರ-ಮುಂಬೈ-ಹುಬ್ಬಳ್ಳಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಹಲವಾರು ಸಂಬಂಧಿಕರ ವಿಮಾನಗಳೂ ರದ್ದಾದವು.
ಆದರೆ ಹುಬ್ಬಳ್ಳಿಯಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡು ಕಾರ್ಯಕ್ರಮಕ್ಕೆ ಅತಿಥಿಗಳು ಆಗಮಿಸಿದ್ದರು. ಹೀಗಾಗಿ ಈ ಬಗ್ಗೆ ಚರ್ಚೆ ನಡೆದು ಕೊನೆಯಲ್ಲಿ ವಧುವಿನ ಪೋಷಕರು ನವ ದಂಪತಿಗೆ ಕಾಯ್ದಿರಿಸಿದ ಆಸನಗಳಲ್ಲಿ ಕುಳಿತು, ಔಪಚಾರಿಕ ವಿಧಿ-ವಿಧಾನಗಳನ್ನು ನೆರವೇರಿಸಲು ನಿರ್ಧರಿಸಲಾಯಿತು. ನವ ದಂಪತಿ ವರ್ಚುವಲ್‌ನಲ್ಲಿ ಪಾಲ್ಗೊಳ್ಳುವಂತಾಗಲು ಕಾರ್ಯಕ್ರಮದಲ್ಲಿ ದೊಡ್ಡ ಟಿವಿ ಪರದೆ ಹಾಕಲಾಯಿತು. ವಿವಾಹದ ಉಡುಪುಗಳನ್ನು ಧರಿಸಿದ್ದ ನವದಂಪತಿ ಭುವನೇಶ್ವರದಿಂದಲೇ ವೀಡಿಯೊ ಕಾನ್ಫರೆನ್ಸಿಂಗ್ (Video Conferencing) ಮೂಲಕ ಆರತಕ್ಷತೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ನಾವು ಬಹಳಷ್ಟು ಸಂಬಂಧಿಕರನ್ನು ಆಹ್ವಾನಿಸಿದ್ದೆವು, ಮತ್ತು ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸುವುದು ಅಸಾಧ್ಯವಾಗಿತ್ತು. ಹಾಗಾಗಿ, ನಾವು ಕುಟುಂಬ ಸಭೆಯಲ್ಲಿ ಚರ್ಚಿಸಿ, ದಂಪತಿ ಆನ್‌ಲೈನ್ ಮೂಲಕ ಭಾಗವಹಿಸಲು ಮತ್ತು ಅವರ ಪಾಲ್ಗೊಳ್ಳುವುದನ್ನು ಪರದೆಯ ಮೇಲೆ ಪ್ರಸಾರ ಮಾಡಲು ನಿರ್ಧರಿಸಿದೆವು ಎಂದು ವಧುವಿನ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸರ್ಕಾರದ ಹೊಸ ನಿಯಮಗಳನ್ನು ಅಳವಡಿಸಲು ತನ್ನ ರೋಸ್ಟರ್ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲು ವಿಫಲವಾದ ಕಾರಣ, ಇಂಡಿಗೋ ಈ ವಾರ ದೇಶಾದ್ಯಂತ ನೂರಾರು ವಿಮಾನಗಳನ್ನು ರದ್ದುಗೊಳಿಸಿದೆ.
ದೆಹಲಿ, ಜೈಪುರ, ಭೋಪಾಲ್, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಇತರೆ ನಗರಗಳಲ್ಲಿ ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಿದ್ದು, ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುವ ಇಂಡಿಗೋ, ಗುರುವಾರ ತನ್ನ 20 ವರ್ಷಗಳ ಇತಿಹಾಸದಲ್ಲಿ ಒಂದು ದಿನದಲ್ಲಿ ಅತ್ಯಧಿಕ, ಅಂದರೆ 500 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement