ಮೇಜರ್ ಮೋಹಿತ್ ಶರ್ಮಾ ; ಭಯೋತ್ಪಾದಕ ಸಂಘಟನೆಯೊಳಗೆ ನುಸುಳಿ ಭೀಕರ ಭಯೋತ್ಪಾದಕರನ್ನೇ ಕೊಂದ ಭಾರತದ ಧೈರ್ಯಶಾಲಿ ಸೇನಾಧಿಕಾರಿ…

ನವದೆಹಲಿ : ನಟ ರಣವೀರ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಧುರಂಧರ್’  ಸಿನೆಮಾದ ಪಾತ್ರ ಮತ್ತು ಕಥಾವಸ್ತುವಿನ ಸುತ್ತಲಿನ ವಿವಾದವು ತೀವ್ರಗೊಂಡಿದೆ. ಈ ಚಿತ್ರವು ಹುತಾತ್ಮ ಯೋಧ, ಮೇಜರ್ ಮೋಹಿತ್ ಶರ್ಮಾ ಅವರ ನಿಜ ಜೀವನದ ಘಟನೆಗಳನ್ನು ಆಧರಿಸಿದೆ ಎಂದು ಹಲವರು ಆರೋಪಿಸಿದ್ದಾರೆ. ಇದೀಗ, ಮೇಜರ್ ಶರ್ಮಾ ಅವರ ಕುಟುಂಬವು ತಮ್ಮ ಅನುಮತಿಯಿಲ್ಲದೆ ತಮ್ಮ ಪುತ್ರನ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿದೆ.  ಆದರೆ ಚಿತ್ರದ ನಿರ್ದೇಶಕರು ತಮ್ಮ ಸ್ಪೈ ಥ್ರಿಲ್ಲರ್ ಚಿತ್ರ ಮೇಜರ್ ಮೋಹಿತ್‌ ಶರ್ಮಾ ಜೀವನವನ್ನು ಆಧರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಮೇಜರ್ ಮೋಹಿತ್ ಶರ್ಮಾ ಅವರ ಸಾಹಸದ ಬಗೆಗಿನ ಚರ್ಚೆಗಳು ಮುನ್ನೆಲೆಗೆ ಬಂದಿವೆ.
 ಯಾರು ಈ ಮೇಜರ್ ಮೋಹಿತ್ ಶರ್ಮಾ?
ಮೇಜರ್ ಮೋಹಿತ್ ಶರ್ಮಾ ಅವರು ಭಾರತೀಯ ಸೇನೆಯ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಮತ್ತು ಗೌರವಯುತ ಅಧಿಕಾರಿಗಳಲ್ಲಿ ಒಬ್ಬರು. ಅವರು 1978 ರಲ್ಲಿ ಹರಿಯಾಣದ ರೋಹ್ಟಕ್‌ನಲ್ಲಿ ಜನಿಸಿದರು. 1995 ರಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA)ಗೆ ಸೇರಿದರು. 1999 ರ ಡಿಸೆಂಬರ್‌ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ (IMA) ಯಿಂದ ಉತ್ತೀರ್ಣರಾದ ನಂತರ, ಅವರು ಮದ್ರಾಸ್ ರೆಜಿಮೆಂಟ್‌ನ 5 ನೇ ಬೆಟಾಲಿಯನ್‌ಗೆ ನಿಯೋಜನೆಗೊಂಡರು.
ನಂತರ ಅವರು ಭಾರತೀಯ ಸೇನೆಯ ಅತ್ಯಂತ ತರಬೇತಿ ಪಡೆದ ಮತ್ತು ರಹಸ್ಯ ಕಾರ್ಯಾಚರಣೆಗಳನ್ನು ನಿಭಾಯಿಸುವ 1 ಪ್ಯಾರಾ ಸ್ಪೆಷಲ್ ಫೋರ್ಸಸ್ Para Special Force) ಎಲೈಟ್‌ ಕಮಾಂಡೋ ಆದರು.
 ಮೋಹಿತ್ ಶರ್ಮಾ ಇಫ್ತಿಕಾರ್ ಭಟ್ ಆದಾಗ 
ಮೇಜರ್ ಮೋಹಿತ್ ಶರ್ಮಾ ಅವರ ವೃತ್ತಿಜೀವನದ ಅತ್ಯಂತ ದಿಟ್ಟ ಮತ್ತು ಅಪಾಯಕಾರಿ ಕಾರ್ಯಾಚರಣೆ ಎಂದರೆ ಗುಪ್ತಚರ ಪಾತ್ರದಲ್ಲಿ ಭಯೋತ್ಪಾದಕ ಸಂಘಟನೆ ಒಳಗೆ ನುಸುಳಿದ್ದು. 2004 ರಲ್ಲಿ, ಅವರು ‘ಇಫ್ತಿಕಾರ್ ಭಟ್’ ಎಂಬ ನಕಲಿ ಪಾತ್ರ ಸೃಷ್ಟಿಸಿದರು. ತನ್ನ ಸಹೋದರನನ್ನು ಭಾರತೀಯ ಸೇನೆ ಕೊಂದಿದೆ ಎಂದು ನಂಬಿಸಿ, ಸೇನೆಯ ಬಗ್ಗೆ ದ್ವೇಷವಿರುವ ಸ್ಥಳೀಯನಂತೆ ನಟಿಸಿದರು. ಅವರು ಉದ್ದನೆಯ ಕೂದಲು, ದಟ್ಟವಾದ ಗಡ್ಡವನ್ನು ಬೆಳೆಸಿ, ಸ್ಥಳೀಯರಂತೆ ಉಡುಗೆ ತೊಟ್ಟು ಕಾಶ್ಮೀರದ ಉಗ್ರಗಾಮಿ ವಲಯಕ್ಕೆ ಪ್ರವೇಶಿಸಿ, ಹಿಜ್ಬುಲ್ ಮುಜಾಹಿದ್ದೀನ್ ಗುಂಪಿಗೆ ರಹಸ್ಯವಾಗಿ ಸೇರಿಕೊಂಡರು. ಮೇಜರ್ ಮೋಹಿತ್ ಶರ್ಮಾ 2004 ರಲ್ಲಿ ತನ್ನ ಪ್ರಸಿದ್ಧ ರಹಸ್ಯ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಗ್ಯಾಂಗ್ ಅನ್ನು ಯಶಸ್ವಿಯಾಗಿ ನುಸುಳಿದ ನಂತರ ಇಬ್ಬರು ಶಂಕಿತ ಭಯೋತ್ಪಾದಕರನ್ನು ಕೊಂದರು.
ಈ ಗುಪ್ತಚರ ಕಾರ್ಯಾಚರಣೆಯಿಂದ ಸೇನೆಗೆ ನಿರ್ಣಾಯಕ ಮಾಹಿತಿ ಲಭ್ಯವಾಯಿತು ಮತ್ತು ಪ್ರಮುಖ ಉಗ್ರರ ಗುರಿಗಳ ಮೇಲೆ ಯಶಸ್ವಿ ದಾಳಿ ಮಾಡಲು ಸಾಧ್ಯವಾಯಿತು. ಈ ಶೌರ್ಯಕ್ಕಾಗಿ ಅವರಿಗೆ ಸೇನಾ ಪದಕ (Sena Medal) ನೀಡಿ ಗೌರವಿಸಲಾಯಿತು.
ಪರಮೋಚ್ಚ ತ್ಯಾಗ ; ಅಶೋಕ ಚಕ್ರ ಪುರಸ್ಕೃತ 
ಐದು ವರ್ಷಗಳ ನಂತರ, 2009 ರ ಮಾರ್ಚ್‌ನಲ್ಲಿ, ಕಾಶ್ಮೀರದ ಕುಪ್ವಾರ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಮೇಜರ್ ಮೋಹಿತ್ ಶರ್ಮಾ ಮತ್ತೊಂದು ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಪ್ರದೇಶವು ನುಸುಳುಕೋರರ ಮಾರ್ಗಗಳಿಗೆ ಕುಖ್ಯಾತವಾಗಿತ್ತು.
ಕಾರ್ಯಾಚರಣೆಯ ಸಮಯದಲ್ಲಿ, ಅವರು ಉಗ್ರರ ಗುಂಡಿನ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡರು. ತೀವ್ರ ಗಾಯಗೊಂಡಿದ್ದರೂ, ಅವರು ಹಿಂಜರಿಯದೆ ತಮ್ಮ ತಂಡವನ್ನು ಮುನ್ನಡೆಸಿದರು, ಹತ್ತಿರದ ಗುಂಡಿನ ಚಕಮಕಿಯಲ್ಲಿ ನಾಲ್ಕು ಭಯೋತ್ಪಾದಕರನ್ನು ಯಶಸ್ವಿಯಾಗಿ ಹೊಡೆದುರುಳಿಸಿದರು.
 ನಂತರ ಅವರು ತಮ್ಮ ಗಾಯಗಳಿಂದಾಗಿ ಹುತಾತ್ಮರಾದರು. ಅವರ ಅಸಾಧಾರಣ ಶೌರ್ಯ, ಸಮಯ ಪ್ರಜ್ಞೆ ಮತ್ತು ದೇಶಕ್ಕಾಗಿ ಮಾಡಿದ ಪರಮೋಚ್ಚ ತ್ಯಾಗವನ್ನು ಗುರುತಿಸಿ, ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ (Ashoka Chakra) ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.
 ‘ಧುರಂಧರ್’  
‘ಧುರಂಧರ್’ ಚಿತ್ರವನ್ನು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ಆದಿತ್ಯ ಧರ್ ಅವರು ನಿರ್ದೇಶಿಸಿದ್ದಾರೆ. ಕಾಶ್ಮೀರದಲ್ಲಿ ಉಗ್ರಗಾಮಿ ಗುಂಪುಗಳ ಒಳಗೆ ನುಸುಳಿದ ಭಾರತೀಯ ಸೈನಿಕನ ಕಥೆಯ ಸುತ್ತ ಚಿತ್ರವು ಕೇಂದ್ರೀಕೃತವಾಗಿದೆ. ಇದು ಮೇಜರ್ ಮೋಹಿತ್ ಶರ್ಮಾ ಅವರ ಕಥೆಗೆ ಹೋಲಿಕೆ ಹೊಂದಿದೆ ಎಂಬುದು ಹಲವರ ವಾದವಾಗಿದೆ. .ಆದರೆ ಚಿತ್ರದ ನಿರ್ದೇಶಕರು ತಮ್ಮ ಸ್ಪೈ ಥ್ರಿಲ್ಲರ್ ಚಿತ್ರ ಮೇಜರ್ ಮೋಹಿತ್‌ ಶರ್ಮಾ ಜೀವನ ಆಧರಿಸಿ ನಿರ್ಮಿಸಿದ್ದಲ್ಲ ಎಂದು ಹೇಳಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement