ಪ್ರಶ್ನೆ ಕೇಳಿದ ಯುವ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನೆಯ ವಕ್ತಾರ: ವೀಡಿಯೊ ವೈರಲ್‌ ; ತೀವ್ರ ಆಕ್ರೋಶ

ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಹಿಳಾ ಪತ್ರಕರ್ತರೊಬ್ಬರಿಗೆ ಕಣ್ಣು ಹೊಡೆದ ವೀಡಿಯೊ ವೈರಲ್ ಆದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದು “ವೃತ್ತಿಪರವಲ್ಲದ ನಡವಳಿಕೆ”ಯಾಗಿದೆ ಎಂದು ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ಆದ ವಿಡಿಯೋದಲ್ಲಿ, ಪತ್ರಕರ್ತೆಯೊಬ್ಬರು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು “ರಾಷ್ಟ್ರೀಯ ಭದ್ರತೆಗೆ ಬೆದರಿಕೆ,” “ರಾಷ್ಟ್ರ ವಿರೋಧಿ,” ಮತ್ತು “ದೆಹಲಿಯ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ” ಎಂದು ಹಣೆಪಟ್ಟಿ ಕಟ್ಟಿರುವ ಆರೋಪಗಳ ಬಗ್ಗೆ ಚೌಧರಿ ಅವರನ್ನು ಪ್ರಶ್ನಿಸಿದ್ದಾರೆ. ಹಾಗೂ ಈ ಹೇಳಿಕೆಗಳು ಹಿಂದಿನ ನಿಲುವುಗಳಿಂದ ಬದಲಾವಣೆಯನ್ನು ಸೂಚಿಸುತ್ತವೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಚೌಧರಿ, “ಇದಕ್ಕೆ ನಾಲ್ಕನೇ ಅಂಶವನ್ನೂ ಸೇರಿಸಿ, ಅವರು ಒಬ್ಬ ಜೆಹ್ನಿ ಮರೀಝ್ (ಮಾನಸಿಕ ರೋಗಿ) ಕೂಡ,” ಎಂದು ಹೇಳಿ, ತಕ್ಷಣವೇ ಪತ್ರಕರ್ತೆಯತ್ತ ಕಣ್ಣು ಹೊಡೆದಿದ್ದಾರೆ. ಅವರ ಈ ಸನ್ನೆ ಆನ್‌ಲೈನ್‌ನಲ್ಲಿ ತಕ್ಷಣವೇ ಆಕ್ರೋಶಕ್ಕೆ ಕಾರಣವಾಗಿದೆ. ಸೇನೆಯ ಮಾಧ್ಯಮ ವಿಭಾಗದ ಈ ಕೃತ್ಯವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು “ಕೀಳು ಮಟ್ಟ” ಎಂದು ಕರೆದಿದ್ದಾರೆ.
ಒಬ್ಬ ಬಳಕೆದಾರರು, “ಅಹ್ಮದ್ (ಅಲ್ಲ) ಷರೀಫ್ ಚೌಧರಿ (Ahmed (Not) Sharif Chaudhary),” ಎಂದು ಬರೆದರೆ, ಮತ್ತೊಬ್ಬರು, “ಡಿಜಿ ಐಎಸ್‌ಪಿಆರ್ ಮಹಿಳಾ ಪತ್ರಕರ್ತಿಗೆ ಕಣ್ಣು ಹೊಡೆಯುವುದೇ? ಇದು ವೃತ್ತಿಪರತೆಯ ಸಮಾಧಿ. ಇದು ಪತ್ರಿಕಾಗೋಷ್ಠಿಯೋ ಅಥವಾ ಅಗ್ಗದ ಫ್ಲರ್ಟಿಂಗ್‌ (ಸಂಭಾಷಣೆಯೋ)?” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಘಟನೆಯು ಲಿಂಗ ತಾರತಮ್ಯ, ನಡವಳಿಕೆಯ ಮಾನದಂಡಗಳು ಮತ್ತು ಅಧಿಕೃತ ಹೇಳಿಕೆಗಳಲ್ಲಿ ಹೆಚ್ಚುತ್ತಿರುವ ಹಗೆತನದ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತಿದೆ.

ಇತ್ತೀಚೆಗೆ ‘ಆಪರೇಷನ್ ಸಿಂಧೂರ’ ಸೇರಿದಂತೆ ಹಲವು ಸಂದರ್ಭಗಳಲ್ಲಿ ಭಾರತದ ಕುರಿತು ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿ ಗಡಿಯಾಚೆಗೂ ಸುದ್ದಿಯಾಗಿದ್ದರು. ಆದರೆ, ವಿವಾದದ ಬಗ್ಗೆ ಟೀಕೆಗಳು ಹೆಚ್ಚುತ್ತಿದ್ದರೂ, ಪಾಕಿಸ್ತಾನ ಸೇನೆಯು ಈ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ನಡೆಸಿಕೊಂಡ ರೀತಿ ಭಾರಿ ವಿವಾದ ಸೃಷ್ಟಿಸಿದೆ. ಇಮ್ರಾನ್ ಖಾನ್ ಹತ್ಯೆಗೆ ಪಾಕಿಸ್ತಾನ ಸೇನೆ ಪ್ರಯತ್ನಿಸಿತ್ತು ಎಂಬ ಆರೋಪ ಭುಗಿಲೇಳುತ್ತಿದ್ದಂತೆ ಪಾಕಿಸ್ತಾನದಾದ್ಯಂತ ಕೋಲಾಹಲ ಸೃಷ್ಟಿಯಾಗಿತ್ತು. ಈ ಕುರಿತು ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಅಹಮ್ಮದ್ ಶರೀಫ್ ಚೌಧರಿ ಪ್ರತಿಕ್ರಿಯೆ ನೀಡಿದ್ದರು. ಜೈಲಿನಲ್ಲಿರುವ ಇಮ್ರಾನ್ ಖಾನ್‌ಗೆ ಭಾರತ ಆರ್ಥಿಕ ನೆರವು ನೀಡುತ್ತಿದೆ. ಭಾರತದ ನೆರವಿನಿಂದ ಇಮ್ರಾನ್ ಖಾನ್ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಕುರಿತಂತೆ ಅಹಮ್ಮದ್ ಶರೀಫ್ ಚೌಧರಿಗೆ ಪತ್ರಕರ್ತೆ ಪ್ರಶ್ನಿಸಿದ್ದರು.

ಪ್ರಮುಖ ಸುದ್ದಿ :-   ವಿಡಿಯೋ | ಅಮೆರಿಕ ಯುದ್ಧನೌಕೆಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನಿನ 3 ತೈಲ ಟ್ಯಾಂಕರ್‌ ಧ್ವಂಸಗೊಳಿಸಿದ ಅಮೆರಿಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement