ವೀಡಿಯೊಗಳು..| ₹12 ಸಾವಿರ ಕೊಟ್ರೂ ಮೆಸ್ಸಿ ನೋಡಲು ಸಾಧ್ಯವಾಗದೆ ನಿರಾಶೆ: ಕೋಲ್ಕತ್ತಾ ಸ್ಟೇಡಿಯಂನಲ್ಲಿ ದಾಂಧಲೆ

ಕೊಲ್ಕತ್ತಾ: ವಿಶ್ವದ ಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ₹5,000 ರಿಂದ ಹಿಡಿದು ₹12,000 ವರೆಗೆ ಟಿಕೆಟ್‌ಗಳನ್ನು ಖರೀದಿಸಿದ್ದ ಅಭಿಮಾನಿಗಳಿಗೆ ಈ ಭೇಟಿ ಜೀವನದ ಮರೆಯಲಾಗದ ಕ್ಷಣವಾಗಬೇಕಿತ್ತು. ಆದರೆ, ಕೊಲ್ಕತ್ತಾದ ವಿವೇಕಾನಂದ ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಈ ಘಟನೆ ಸಂಪೂರ್ಣ ಗೊಂದಲ ಮತ್ತು ಅವ್ಯವಸ್ಥೆಗೆ ತಿರುಗಿತು.
ಅನೇಕ ದಿನಗಳಿಂದ ಮೆಸ್ಸಿ ಅವರನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳು ಕೇವಲ 10 ನಿಮಿಷಗಳಲ್ಲಿ ಅರ್ಜೆಂಟೀನಾದ ಈ ಐಕಾನ್ ಕ್ರೀಡಾಂಗಣಕ್ಕೆ ಬಂದು ಹೋಗಿದ್ದು ತೀವ್ರ ನಿರಾಶೆಗೆ ಕಾರಣವಾಯಿತು. ವಿಪರೀತ ಜನಸಂದಣಿ ಮತ್ತು ಅವ್ಯವಸ್ಥೆಯಿಂದಾಗಿ ಇಡೀ ಪರಿಸ್ಥಿತಿ ಕೈಮೀರಿ ಹೋಯಿತು.
ಭಾರೀ ಜನಸಂದಣಿ ಮತ್ತು ಮೆಸ್ಸಿ ಅವರನ್ನು ನೋಡಲು ಸಾಧ್ಯವಾಗದ ಕಾರಣ ಕ್ರೀಡಾಂಗಣದಲ್ಲಿ ವ್ಯಾಪಕ ಕೋಪ ಮತ್ತು ಅಶಾಂತಿಗೆ ಕಾರಣವಾಯಿತು.

ಕೋಪಗೊಂಡ ಅಭಿಮಾನಿಗಳು ಮೈದಾನಕ್ಕೆ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದರು, ಪ್ರತಿಭಟನೆಯ ಸಂಕೇತವಾಗಿ ಕುರ್ಚಿಗಳನ್ನು ಸಹ ತೂರಿದ್ದಾರೆ. ಭಾರತದಾದ್ಯಂತ ಜಿಒಎಟಿ (GOAT) ಪ್ರವಾಸವನ್ನು ಉತ್ತೇಜಿಸುವ ಪೋಸ್ಟರ್‌ಗಳು ಸೇರಿದಂತೆ ಮೆಸ್ಸಿಯ ಪೋಸ್ಟರ್‌ಗಳನ್ನು ಹರಿದು ಮೈದಾನದಾದ್ಯಂತ ಚೆಲ್ಲಾಪಿಲ್ಲಿ ಮಾಡಲಾಗಿದೆ. ಮೆಸ್ಸಿ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಕೈತಪ್ಪಿದ ಕಾರಣ ತಮ್ಮ ದುಬಾರಿ ಟಿಕೆಟ್‌ಗಳು ವ್ಯರ್ಥವಾಯಿತು ಎಂದು ಅನೇಕ ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ.
ಮೈದಾನದಲ್ಲಿ ಮೆಸ್ಸಿ ಸುತ್ತ ಜನಸಂದಣಿ ಎಷ್ಟು ಹೆಚ್ಚಿತ್ತು ಎಂದರೆ, ಗ್ಯಾಲರಿಯಲ್ಲಿ ಇದ್ದ ಪ್ರೇಕ್ಷಕರಿಗೆ ಅವರನ್ನು ನೋಡಲು ಸಾಧ್ಯವಾಗಲೇ ಇಲ್ಲ. ನಿರಾಶೆಯು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು, ನೀರು ತುಂಬಿದ ಬಾಟಲಿಗಳನ್ನು ಮೈದಾನಕ್ಕೆ ಗುರಿಯಿಟ್ಟು ಎಸೆಯಲಾಯಿತು. ಈ ಅಡಚಣೆಯಿಂದಾಗಿ ಮೆಸ್ಸಿ ಯೋಜಿಸಿದ್ದಕ್ಕಿಂತ ಮುಂಚಿತವಾಗಿ ಸ್ಥಳದಿಂದ ಹೊರಡಬೇಕಾಯಿತು.

ಗಣ್ಯರ ಮಧ್ಯೆ ಸಿಲುಕಿ ಅಭಿಮಾನಿಗಳಿಂದ ದೂರವಾದ ಮೆಸ್ಸಿ
ಕ್ರೀಡಾಂಗಣವನ್ನು ಮೆಸ್ಸಿ ಸುತ್ತು ಹಾಕುವ (Lap of Honour) ಕಾರ್ಯಕ್ರಮ ಸರಿಯಾಗಿ ಜಾರಿಯಾಗಲೇ ಇಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವರು ಮೈದಾನಕ್ಕೆ ಕಾಲಿಡುತ್ತಿದ್ದಂತೆಯೇ, ರಾಜಕಾರಣಿಗಳು, ಅಧಿಕಾರಿಗಳು, ಗಣ್ಯರು ಹಾಗೂ ಅವರ ಕುಟುಂಬ ಸದಸ್ಯರು ಮೆಸ್ಸಿಯನ್ನು ಸುತ್ತುವರೆದರು. ಅಲ್ಲದೇ, ಅತಿಯಾದ ಪಾಪರಾಜಿಗಳ ಉಪಸ್ಥಿತಿಯಿಂದಾಗಿ ದಟ್ಟಣೆ ಹೆಚ್ಚಾಯಿತು. ಮೆಸ್ಸಿ ಸುತ್ತಲೂ ಅಷ್ಟೊಂದು ಜನಂದಣಿಯಯಾದ ಕಾರಣ, ಅವರ ಭದ್ರತಾ ತಂಡವು ಮೈದಾನವನ್ನು ಸುತ್ತು ಹಾಕುವ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕಾಯಿತು. ಮೆಸ್ಸಿ ಹೆಚ್ಚು ಹೊತ್ತು ಇರುವುದಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಗ್ಯಾಲರಿಗಳಲ್ಲಿ ಅಸಮಾಧಾನ ಸ್ಫೋಟಗೊಂಡಿತು.

10 ನಿಮಿಷದಲ್ಲೇ ನಿರ್ಗಮಿಸಿದ ಮೆಸ್ಸಿ 
ಮೆಸ್ಸಿ ಕೇವಲ 10 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲೇ ಮೈದಾನದಿಂದ ನಿರ್ಗಮಿಸುತ್ತಿದ್ದಂತೆ ಅಭಿಮಾನಿಗಳ ಆಕ್ರೋಶವು ತಾರಕಕ್ಕೇರಿತು. ಮುಂಜಾನೆಯಿಂದಲೇ ಕ್ರೀಡಾಂಗಣಕ್ಕೆ ಆಗಮಿಸಿದ್ದ ಅಭಿಮಾನಿಗಳು, ಇಷ್ಟೊಂದು ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿದರೂ ಸರಿಯಾಗಿ ಮೆಸ್ಸಿಯನ್ನು ನೋಡಲು ಸಾಧ್ಯವಾಗದ ಬಗ್ಗೆ ಸಂಘಟಕರ ವ್ಯವಸ್ಥೆ ಹಾಗೂ ಕಾರ್ಯಕ್ರಮ ನಿರ್ವಹಣೆಯನ್ನು ತೀವ್ರವಾಗಿ ಪ್ರಶ್ನಿಸಿದರು.
ಆಕ್ರೋಶಗೊಂಡ ಅಭಿಮಾನಿಗಳು ನೀರಿನ ಬಾಟಲಿಗಳನ್ನು ಎಸೆದರು, ಜಾಹೀರಾತು ಫಲಕಗಳನ್ನು ಹಾನಿಗೊಳಿಸಿದರು. ಪ್ರತಿಭಟನೆ ಭುಗಿಲೆದ್ದ ಕಾರಣ ಕ್ರೀಡಾಂಗಣದ ಒಳಗೆ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಯಿತು. ಭಾರೀ ಭದ್ರತೆಯೊಂದಿಗೆ ಇತರೆ ವಿವಿಐಪಿಗಳ ಜೊತೆಗೂಡಿ ವಿಶ್ವಕಪ್ ವಿಜೇತ ಮೆಸ್ಸಿ ಕ್ರೀಡಾಂಗಣದಿಂದ ನಿರ್ಗಮಿಸಿದರು, ಸಾವಿರಾರು ಬೆಂಬಲಿಗರು ದಂಗಾದರು, ನಿರಾಶರಾದರು.
ಅಭಿಮಾನಿಗಳು ಕೋಪದಿಂದ ಆಟದ ಮೈದಾನದೊಳಕ್ಕೆ ನುಗ್ಗಿದರು,ಅಧಿಕಾರಿಗಳಿಗೆ ನಿಯಂತ್ರಣ ಕಾಯ್ದುಕೊಳ್ಳುವುದು ಅಸಾಧ್ಯವಾಯಿತು. ಅಲ್ಲದೆ, ಕೋಪದಲ್ಲಿ ಅಭಿಮಾನಿಗಳು ಗೋಲ್‌ಪೋಸ್ಟ್ ಅನ್ನು ಮುರಿಯಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಮೂಲಸೌಕರ್ಯಗಳಿಗೆ ಹಾನಿ ಮಾಡುವ ಪ್ರಯತ್ನಗಳು ಸಹ ಕಂಡುಬಂದವು. ಪ್ರೇಕ್ಷಕರು ಮೈದಾನಕ್ಕೆ ನುಗ್ಗಿದ್ದರಿಂದ ಗ್ಯಾಲರಿಗಳು ಬೇಗನೆ ಖಾಲಿಯಾದವು, ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ನಿರ್ವಹಿಸಲಾಗದ ಸ್ಥಿತಿಗೆ ತಳ್ಳಿತು.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

“ನಮ್ಮ ಹಣ, ಸಮಯ ವ್ಯರ್ಥವಾಯಿತು”
ಸಾಲ್ಟ್ ಲೇಕ್ ಕ್ರೀಡಾಂಗಣದಿಂದ ಹೊರಬಂದ ಅಭಿಮಾನಿಯೊಬ್ಬರು, “ನಾಯಕರು ಮತ್ತು ನಟರು, ವಿವಿಐಪಿಗಳು ಮಾತ್ರ ಮೆಸ್ಸಿಯನ್ನು ಸುತ್ತುವರೆದಿದ್ದರು. ಹಾಗಾದರೆ ನಮ್ಮನ್ನು ಏಕೆ ಕರೆದರು? ನಾವು ₹12 ಸಾವಿರ ಕೊಟ್ಟು ಟಿಕೆಟ್ ಪಡೆದಿದ್ದರೂ, ನಮಗೆ ಅವರ ಮುಖವನ್ನೂ ನೋಡಲು ಆಗಲಿಲ್ಲ,” ಎಂದು ಅಳಲು ತೋಡಿಕೊಂಡರು.
ಮತ್ತೊಬ್ಬ ಅಭಿಮಾನಿ, “ಇದು ಸಂಪೂರ್ಣ ಅಸಹ್ಯಕರ ಕಾರ್ಯಕ್ರಮ. ಅವರು ಕೇವಲ ಹತ್ತು ನಿಮಿಷ ಬಂದರು. ಎಲ್ಲ ರಾಜಕಾರಣಿಗಳು, ಸಚಿವರು ಮತ್ತು ಕಾರ್ಪೊರೇಟ್ ಅಧಿಕಾರಿಗಳು ಅವರನ್ನು ಸುತ್ತುವರೆದ ಕಾರಣ ನಮಗೆ ಏನನ್ನೂ ನೋಡಲು ಸಾಧ್ಯವಾಗಲಿಲ್ಲ. ಅವರು ಒಂದೇ ಒಂದು ಕಿಕ್ ಅಥವಾ ಪೆನಾಲ್ಟಿ ಕೂಡ ಹೊಡೆಯಲಿಲ್ಲ.ಮೆಸ್ಸಿಯನ್ನು ಕೇವಲ ಹತ್ತು ನಿಮಿಷ ಕರೆತಂದು ಕಳುಹಿಸಿದರು – ಇದು ಸಂಪೂರ್ಣ ವಂಚನೆ. ಜನರ ಹಣ, ಭಾವನೆ ಮತ್ತು ಸಮಯ ವ್ಯರ್ಥವಾಯಿತು,” ಎಂದು ಕೋಪ ವ್ಯಕ್ತಪಡಿಸಿದರು.
ಈ ಗಂಭೀರ ಗೊಂದಲವು ಸಂಘಟನೆ ಮತ್ತು ಜನಸಂದಣಿ ನಿರ್ವಹಣೆಯಲ್ಲಿನ ಗಂಭೀರ ಸಮಸ್ಯೆಗಳನ್ನು ಎತ್ತಿ ತೋರಿಸಿದೆ, ಮೆಸ್ಸಿ ಸುತ್ತಲು ಜನರ ದಟ್ಟಣೆಯಿಂದಾಗಿ ಅನೇಕರಿಗೆ ಫುಟ್‌ಬಾಲ್ ಐಕಾನ್‌ ಅನ್ನು ಒಂದು ಕ್ಷಣವನ್ನೂ ನೋಡಲು ಸಾಧ್ಯವಾಗಲಿಲ್ಲ, ಇದು ಅಶಾಂತಿಗೆ ಪ್ರಮುಖ ಕಾರಣ ಎಂದು ವರದಿಗಳು ಸೂಚಿಸಿವೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕ್ಷಮೆಯಾಚನೆ, ತನಿಖೆಗೆ ಆದೇಶ
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಅವ್ಯವಸ್ಥೆ ಮತ್ತು ಮೆಸ್ಸಿಯ ಅಕಾಲಿಕ ನಿರ್ಗಮನದ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಕ್ಸ್ (X) ಮೂಲಕ ಕ್ಷಮೆಯಾಚಿಸಿದ್ದಾರೆ. ಮೆಸ್ಸಿ ಮತ್ತು ಅವರನ್ನು ನೋಡಲು ಸಾಧ್ಯವಾಗದ ಕೊಲ್ಕತ್ತಾದ ಫುಟ್‌ಬಾಲ್ ಅಭಿಮಾನಿಗಳಿಗೆ ಅವರು ವಿಷಾದ ವ್ಯಕ್ತಪಡಿಸಿದರು.
“ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಅವ್ಯವಸ್ಥೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ ಮತ್ತು ನೊಂದುಕೊಂಡಿದ್ದೇನೆ. ನಾನು ಕೂಡಾ ಸಾವಿರಾರು ಕ್ರೀಡಾಪ್ರೇಮಿಗಳೊಂದಿಗೆ ನನ್ನ ನೆಚ್ಚಿನ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯವರನ್ನು ನೋಡಲು ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ ” ಎಂದು ಮಮತಾ ಬ್ಯಾನರ್ಜಿ ಪೋಸ್ಟ್ ಮಾಡಿದ್ದಾರೆ.
“ಈ ದುರದೃಷ್ಟಕರ ಘಟನೆಗಾಗಿ ನಾನು ಲಿಯೋನೆಲ್ ಮೆಸ್ಸಿ ಹಾಗೂ ಎಲ್ಲಾ ಕ್ರೀಡಾ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ಈ ಅವ್ಯವಸ್ಥೆಯ ಕುರಿತು ತನಿಖಾ ಸಮಿತಿಯನ್ನು ರಚಿಸುವುದಾಗಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. “ನಿವೃತ್ತ ನ್ಯಾಯಮೂರ್ತಿ ಅಶಿಮ್ ಕುಮಾರ ರೇ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿಯು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿ, ಜವಾಬ್ದಾರಿಯನ್ನು ನಿಗದಿಪಡಿಸುತ್ತದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಕ್ರಮಗಳನ್ನು ಶಿಫಾರಸು ಮಾಡುತ್ತದೆ,” ಎಂದು ಅವರು ಹೇಳಿದ್ದಾರೆ.
ಮೆಸ್ಸಿಯವರು ನಿಗದಿತ ಸಮಯಕ್ಕಿಂತ ಮೊದಲೇ ಕ್ರೀಡಾಂಗಣದಿಂದ ನಿರ್ಗಮಿಸಿ ಹೈದರಾಬಾದ್‌ಗೆ ಹೊರಟ ಕಾರಣ, ಮಮತಾ ಬ್ಯಾನರ್ಜಿ ಮತ್ತು ಮಾಜಿ ಭಾರತೀಯ ನಾಯಕ ಸೌರವ್ ಗಂಗೂಲಿ ಅವರೊಂದಿಗಿನ ಉಳಿದ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಯಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement