ಕಾರವಾರ: ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಂದು ಒಪ್ಪಂದವಾಗಿದೆ. ಹೈಕಮಾಂಡ್ ಒಂದು ಒಪ್ಪಂದಕ್ಕೆ ತಂದಿದೆ. ಆ ಪ್ರಕಾರ ನಾವಿಬ್ಬರೂ ಮುಂದೆ ಹೋಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ಗೋಕರ್ಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ನಾನು ಅವರು ಐದು ವರ್ಷ ಇರಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತಿದೆ. ಹೈಕಮಾಂಡ್ ಅವರ ಪರವಾಗಿ ಇರುವುದರಿಂದಲೇ ಅವರು ಆ ಸ್ಥಾನದಲ್ಲಿದ್ದಾರೆ. ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ. ನಾವಿಬ್ಬರೂ ಈ ಬಗ್ಗೆ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್ ಒಪ್ಪಂದಕ್ಕೆ ತಂದಿದೆ. ಅದರಂತೆ ನಡೆದುಕೊಳ್ಳುತ್ತೇವೆ ” ಎಂದು ಮಾರ್ಮಿಕವಾಗಿ ಹೇಳಿದರು.
ಮುಖ್ಯಮಂತ್ರಿ ಹುದ್ದೆ ಹಾಗೂ ಸಮಸ್ಯೆ ಪರಿಹಾರಕ್ಕೆ ದಿನಾಂಕ ನಿಗದಿಯಾಗಿದೆಯೇ ಎಂಬ ಮಾಧ್ಯಮಗಳ ನೇರ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡದೆ, ಕೇವಲ ಮುಗುಳು ನಕ್ಕು ನಿರ್ಗಮಿಸಿದರು.
ದೇಗುಲಗಳಿಗೆ ಭೇಟಿ:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ಉತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆ ಗೋಕರ್ಣಕ್ಕೆ ಆಗಮಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರೊಂದಿಗೆ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರಿಗೆ ಬಿಲ್ವಪತ್ರೆ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿ, ಆತ್ಮಲಿಂಗದ ದರ್ಶನ ಪಡೆದರು. ಬಳಿಕ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಂಕೋಲಾದ ಆಂದ್ಲೆ ಶ್ರೀ ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಆಂದ್ಲೆ ಗ್ರಾಮದ ಶ್ರೀ ಜಗದೀಶ್ವರಿ ಅಮ್ಮನವರ ಸನ್ನಿಧಿಗೆ ಭೇಟಿ ನೀಡಿದ ಅವರು, ಒಂದೂವರೆ ತಾಸಿಗೂ ಅಧಿಕ ಕಾಲ ದೇವಸ್ಥಾನದಲ್ಲಿ ಕುಳಿತು ಅರ್ಚಕರ ಮೂಲಕ ‘ಪ್ರಶ್ನಾ ಕಾರ್ಯ’ ನಡೆಸಿದರು. ನಾಗದೇವತೆ ಹಾಗೂ ತುಳಸಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ದೇವಿಯ ಆಶೀರ್ವಾದ ಪಡೆದರು.
“ಐದು ವರ್ಷಗಳ ಹಿಂದೆ ಕುಟುಂಬದ ಕೆಲಸಕ್ಕಾಗಿ ಇಲ್ಲಿಗೆ ಬಂದು ಪ್ರಾರ್ಥಿಸಿದ್ದೆ, ಅದು ಈಡೇರಿದೆ. ಹಾಗಾಗಿ ಮತ್ತೆ ಬರುತ್ತೇನೆ ಎಂದು ಹರಕೆ ಹೊತ್ತಿದ್ದೆ, ಇಂದು ಬಂದಿದ್ದೇನೆ. ತಾಯಿ ಮತ್ತೆ ಆಶೀರ್ವಾದ ಮಾಡಲಿ ಎಂದು ಕೇಳಿಕೊಂಡಿದ್ದೇನೆ,” ಎಂದರು.
ಕಳೆದ ಬಾರಿ ಬಂದಾಗ ನಿಮ್ಮ ಇಷ್ಟಾರ್ಥ ಸಿದ್ಧಿಯಾಗಿತ್ತು ಎಂದು ಹೇಳಿದ್ದೀರಿ, ಈ ಬಾರಿಯೂ ಆಗುವುದೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲವನ್ನು ನಾನು ಹೇಳುವುದಿಲ್ಲ. ಇದು ನನ್ನ ಹಾಗೂ ಆ ತಾಯಿ ಮಧ್ಯೆ ಇರುವ ವಿಚಾರ, ಭಕ್ತ ಹಾಗೂ ಭಗವಂತನ ಮಧ್ಯದ ವಿಚಾರ. ವಿಘ್ನ ನಿವಾರಕ ವಿಘ್ನೇಶ್ವರನ ದರ್ಶನ ಪಡೆದಿದ್ದೇನೆ. ಮಹಾಬಲೇಶ್ವರನಿಗೆ ಪೂಜೆ ಮಾಡಿದ್ದೇನೆ, ಗಂಗಾಧರೇಶ್ವರನಿಗೆ ಪ್ರಾರ್ಥನೆ ಮಾಡಿದ್ದೇನೆ. ಗೋಕರ್ಣಕ್ಕೆ ಬಂದಿದ್ದು ದೇವರ ದರ್ಶನ ಭಾಗ್ಯ ನನಗೆ ಸಿಕ್ಕಿದೆ. ಐದು ವರ್ಷಗಳ ಹಿಂದೆ ಆಂದ್ಲೆ ಜಗದೇಶ್ವರಿ ತಾಯಿಯ ಬಳಿಗೆ ಬಂದು, ನಮ್ಮ ಕುಟುಂಬದ ವಿಚಾರವಾಗಿ ಪ್ರಾರ್ಥನೆ ಮಾಡಿದ್ದೆ. ಮತ್ತೆ ಇಲ್ಲಿಗೆ ಬರುವುದಾಗಿ ಪ್ರಾರ್ಥಿಸಿದ್ದೆ. ಅದರಂತೆ ಬಂದು ಜಗದೇಶ್ವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಮಾಡು ತಾಯಿ ಎಂದು ಪ್ರಾರ್ಥನೆ ಮಾಡಿರುವೆ. ನನಗೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವೆ. ಹಸನ್ಮುಖಿಯಾಗಿ ಇಲ್ಲಿಂದ ತೆರಳುತ್ತಿದ್ದೇನೆ ಎಂದು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ