ಢಾಕಾ: ಜುಲೈ ದಂಗೆಯ ಪ್ರಮುಖ ಸಂಘಟಕ ಹಾಗೂ ‘ಇಂಕ್ವಿಲಾಬ್ ಮಂಚ’ದ ಸಂಚಾಲಕ ಶರೀಫ್ ಉಸ್ಮಾನ್ ಹಾದಿ ಅವರ ನಿಧನದ ಬೆನ್ನಲ್ಲೇ ಬಾಂಗ್ಲಾದೇಶದ ಢಾಕಾ ಮತ್ತು ಚತ್ತೋಗ್ರಾಮ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ.
ಡಿಸೆಂಬರ್ 12 ರಂದು ಢಾಕಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಶರೀಫ್ ಉಸ್ಮಾನ್ ಹಾದಿ ಅವರ ತಲೆಗೆ ಗುಂಡು ಹಾರಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹಾದಿ ಗುರುವಾರ ನಿಧನರಾದರು. ಷರೀಫ್ ಉಸ್ಮಾನ್ ಹಾದಿ ಅವರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಹಿಂಸಾಚಾರ ಮತ್ತು ಧ್ವಂಸ:
ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹಾದಿ ಅವರ ಬೆಂಬಲಿಗರು ಬೀದಿಗಿಳಿದು ಹಂತಕರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಢಾಕಾದ ಕಾರವಾನ್ ಬಜಾರ್ನಲ್ಲಿರುವ ಪ್ರಮುಖ ದಿನಪತ್ರಿಕೆಗಳಾದ ‘ಪ್ರಥಮ ಆಲೋ’ ಮತ್ತು ‘ಡೈಲಿ ಸ್ಟಾರ್’ ಕಚೇರಿಗಳ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಡೈಲಿ ಸ್ಟಾರ್ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಹೀಗಾಗಿ ಶುಕ್ರವಾರ ಪತ್ರಿಕೆಗಳು ಪ್ರಕಟವಾಗಿಲ್ಲ ಎಂದು ವರದಿಯಾಗಿದೆ. ಜನರು ವಿವಿಧ ಮಾಧ್ಯಮ ಸಂಸ್ಥೆಗಳ ಕಚೇರಿಗಳ ಮೇಲೆ ದೊಣ್ಣೆಗಳನ್ನು ಹಿಡಿದು ದಾಳಿ ಮಾಡಿ ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೀಡಿಯೊಗಳು ಕಂಡುಬಂದಿವೆ. ಪ್ರೋಥೋಮ್ ಅಲೋ ಮುಂಭಾಗದ ರಸ್ತೆಯಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ.
ಪ್ರತಿಭಟನೆಗಳ ನಂತರ, ಡೈಲಿ ಸ್ಟಾರ್ ಕಚೇರಿಯಲ್ಲಿ ಸಿಲುಕಿದ್ದ ಪತ್ರಕರ್ತರನ್ನು ಸೈನ್ಯ ಮತ್ತು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ವಿವಿಧ ವರದಿಗಳ ಪ್ರಕಾರ, ಅವರ ಮೃತದೇಹ ಬರುವ ಮುನ್ನ ಢಾಕಾದ ಹಲವಾರು ಪ್ರದೇಶಗಳಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ. ಹಾದಿ ಅವರ ಮೃತದೇಹ ಬಾಂಗ್ಲಾದೇಶದ ರಾಜಧಾನಿಗೆ ಬರಲಿದೆ.
ಇದಲ್ಲದೆ, ಈ ಹಿಂದೆ ಎರಡು ಬಾರಿ ಧ್ವಂಸ ಮಾಡಲಾಗಿದ್ದ ಧನ್ಮೊಂಡಿ -32 ರಲ್ಲಿರುವ ಶೇಖ್ ಮುಜಿಬುರ್ ರೆಹಮಾನ್ ಅವರ ಮನೆಯನ್ನು ಮತ್ತೆ ಧ್ವಂಸಗೊಳಿಸಿ ಬೆಂಕಿ ಹಚ್ಚಲಾಯಿತು. ರಾಜ್ಶಾಹಿಯಲ್ಲಿರುವ ಅವಾಮಿ ಲೀಗ್ ಪಕ್ಷದ ಕಚೇರಿಯನ್ನು ಸಹ ಕೆಡವಲಾಯಿತು.
ಉಸ್ಮಾನ್ ಹಾದಿ ಹತ್ಯೆ
ಮುಂಬರುವ ರಾಷ್ಟ್ರೀಯ ಚುನಾವಣೆಗೆ ಢಾಕಾ -8 ರ ಸಂಭಾವ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗಿದ್ದ ಉಸ್ಮಾನ್ ಹಾದಿ ಅವರ ಮೇಲೆ ಡಿಸೆಂಬರ್ 12 ರ ಶುಕ್ರವಾರ ಢಾಕಾದಲ್ಲಿ ಗುಂಡು ಹಾರಿಸಲಾಯಿತು. ತನಿಖಾಧಿಕಾರಿಗಳ ಪ್ರಕಾರ, ಚುನಾವಣಾ ಪ್ರಚಾರ ನಡೆಸಲು ಬ್ಯಾಟರಿ ಚಾಲಿತ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಆಕ್ರಮಣಕಾರನೊಬ್ಬ ಅವರ ಮೇಲೆ ಮೋಟಾರ್ ಸೈಕಲ್ನಿಂದ ಗುಂಡು ಹಾರಿಸಿದ.
ಅವರನ್ನು ಆರಂಭದಲ್ಲಿ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಅವರ ಸ್ಥಿತಿ ಹದಗೆಟ್ಟ ನಂತರ ಎವರ್ಕೇರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡಿಸೆಂಬರ್ 15 ರಂದು ಸಿಂಗಾಪುರಕ್ಕೆ ವಿಮಾನದ ಮೂಲಕ ಕರೆದೊಯ್ಯಲಾಯಿತು.
ಇಂಕಿಲಾಬ್ ಮಂಚದ ವಕ್ತಾರ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಶುಕ್ರವಾರ, ಡಿಸೆಂಬರ್ 20ರಂದು ಶನಿವಾರ ರಾಷ್ಟ್ರೀಯ ಶೋಕಾಚರಣೆಯ ಘೋಷಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ