ಶೂಟ್ ಮಾಡಿಕೊಂಡು ಪಂಜಾಬ್‌ ಮಾಜಿ ಐಪಿಎಸ್ ಅಧಿಕಾರಿ ಆತ್ಮಹತ್ಯೆಗೆ ಯತ್ನ : ಸ್ಥಿತಿ ಗಂಭೀರ

ಪಟಿಯಾಲ: ಪಂಜಾಬ್ ಕೆಡರ್‌ನ ನಿವೃತ್ತ ಐಪಿಎಸ್ ಅಧಿಕಾರಿ ಅಮರ ಸಿಂಗ್ ಚಾಹಲ್ ಅವರು ಸೋಮವಾರ ಪಟಿಯಾಲದಲ್ಲಿರುವ ತಮ್ಮ ನಿವಾಸದಲ್ಲಿ ತಾವೇ ಗುಂಡು ಹಾರಿಸಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ.
ಆನ್‌ಲೈನ್ ವಂಚನೆಯೇ ಕಾರಣ?
ಘಟನೆಗೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಆದರೆ, ಸ್ಥಳದಲ್ಲಿ ಪತ್ತೆಯಾಗಿರುವ ಡೆತ್‌ನೋಟ್‌ನಲ್ಲಿ ಆನ್‌ಲೈನ್ ವಂಚನೆಯಿಂದ ಉಂಟಾದ ಭಾರಿ ಆರ್ಥಿಕ ನಷ್ಟ ಮತ್ತು ಅದರಿಂದ ಎದುರಾದ ಮಾನಸಿಕ ಒತ್ತಡದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಪೂರ್ಣ ಪ್ರಮಾಣದ ತನಿಖೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ.
ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ವರುಣ ಶರ್ಮಾ ಮಾತನಾಡಿ, “ಗುಂಡೇಟಿನ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಚಾಹಲ್ ಅವರನ್ನು ಆಸ್ಪತ್ರೆಗೆ ಸಾಗಿಸಿದೆ. ವೈದ್ಯರು ಅವರ ಪ್ರಾಣ ಉಳಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿವಾದಾತ್ಮಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಚಾಹಲ್
ನಿವೃತ್ತ ಐಜಿಪಿ (IGP) ಆಗಿರುವ ಅಮರ್ ಸಿಂಗ್ ಚಾಹಲ್ ಅವರು 2015ರ ಬಹುಚರ್ಚಿತ ಬೆಹ್ಬಲ್ ಕಲಾನ್ ಮತ್ತು ಕೋಟ್‌ಕಪುರ ಗುಂಡಿನ ದಾಳಿ ಪ್ರಕರಣಗಳ ಪ್ರಮುಖ ಆರೋಪಿಗಳಲ್ಲಿ ಒಬ್ಬರು.
2023ರಲ್ಲಿ, ಎಡಿಜಿಪಿ ಎಲ್.ಕೆ. ಯಾದವ್ ನೇತೃತ್ವದ ವಿಶೇಷ ತನಿಖಾ ತಂಡ (SIT) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಸುಖ್ಬೀರ್ ಸಿಂಗ್ ಬಾದಲ್ ಮತ್ತು ಚಾಹಲ್ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.
ಪ್ರಸ್ತುತ ಚಾಹಲ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement