ನವದೆಹಲಿ: ಹಿಂದಿ ಸಾಹಿತ್ಯ ಲೋಕದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿನೋದಕುಮಾರ ಶುಕ್ಲಾ (89) ಅವರು ವಯೋಸಹಜ ಕಾಯಿಲೆಯಿಂದಾಗಿ ಮಂಗಳವಾರ ಸಂಜೆ ರಾಯ್ಪುರದಲ್ಲಿ ನಿಧನರಾದರು.
ಛತ್ತೀಸ್‌ಗಢ ಮೂಲದವರಾದ ಶುಕ್ಲಾ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಡಿಸೆಂಬರ್ 2 ರಂದು ಅವರನ್ನು ರಾಯ್‌ಪುರದ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 4:48ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಶಾಶ್ವತ್ ಶುಕ್ಲಾ ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಹಿಂದಿ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ವಿನೋದಕುಮಾರ ಶುಕ್ಲಾ ಅವರಿಗೆ ಈ ವರ್ಷದ ನವೆಂಬರ್ 21 ರಂದು ದೇಶದ ಅತ್ಯುನ್ನತ ಸಾಹಿತ್ಯ ಗೌರವವಾದ 59ನೇ ಜ್ಞಾನಪೀಠ ಪ್ರಶಸ್ತಿಯನ್ನು ಅವರ ರಾಯ್‌ಪುರದ ನಿವಾಸದಲ್ಲೇ ಪ್ರದಾನ ಮಾಡಲಾಗಿತ್ತು. ಈ ಪ್ರಶಸ್ತಿ ಪಡೆದ ಛತ್ತೀಸ್‌ಗಢದ ಮೊದಲ ಲೇಖಕ ಎಂಬ ಹೆಗ್ಗಳಿಕೆ ಇವರದ್ದಾಗಿತ್ತು.
ಸಾಹಿತ್ಯ ಲೋಕದ ಸಾಧನೆ:
‘ನೌಕರ್ ಕಿ ಕಮೀಜ್’, ‘ಖಿಲೇಗಾ ತೋ ದೇಖೇಂಗೆ’, ‘ದೀವಾರ್ ಮೇ ಏಕ್ ಖಿಡ್ಕಿ ರೆಹ್ತಿ ಥಿ’ ಮತ್ತು ʼಏಕ್ ಚುಪ್ಪಿ ಜಗಹ್ʼ ಸೇರಿದಂತೆ ಇವು ಇವರ ಪ್ರಸಿದ್ಧ ಕಾದಂಬರಿಗಳಾಗಿವೆ. ಸರಳತೆ ಮತ್ತು ಭಾವನಾತ್ಮಕತೆಯಿಂದ ಕೂಡಿದ ಇವರ ಸಾಹಿತ್ಯ ಶೈಲಿ ಅಪಾರ ಓದುಗರನ್ನು ಸೆಳೆದಿದೆ. ಇವರ ‘ನೌಕರ್ ಕಿ ಕಮೀಜ್’ ಕಾದಂಬರಿಯನ್ನು ಮಣಿ ಕೌಲ್ ಅವರು ಚಲನಚಿತ್ರವಾಗಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ: ವಿನೋದಕುಮಾರ ಶುಕ್ಲಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. “ಹಿಂದಿ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಳಿಗಾಗಿ ಅವರು ಸದಾ ಸ್ಮರಣೀಯರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂವೇದನೆಗಳು,” ಎಂದು ಪ್ರಧಾನಿ ಎಕ್ಸ್ (ಟ್ವಿಟರ್) ಮೂಲಕ ಕಂಬನಿ ಮಿಡಿದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ