‘ಭಾರತೀಯರ ಕೆಲಸದ ಪರವಾನಗಿ ರದ್ದುಗೊಳಿಸಿ’: ಬಾಂಗ್ಲಾದೇಶ ಸರ್ಕಾರಕ್ಕೆ ಉಸ್ಮಾನ್ ಹಾದಿ ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ

ನವದೆಹಲಿ: ಅರಾಜಕತೆಯಿಂದ ಬಳಲುತ್ತಿರುವ ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಭಾರತೀಯರ ವರ್ಕ್ ಪರ್ಮಿಟ್ (ಕೆಲಸದ ಪರವಾನಗಿ) ರದ್ದುಗೊಳಿಸುವಂತೆ ಅಲ್ಲಿನ ತೀವ್ರಗಾಮಿ ಸಂಘಟನೆ ‘ಇಂಕ್ವಿಲಾಬ್ ಮಂಚ’ ಮಧ್ಯಂತರ ಸರ್ಕಾರವನ್ನು ಒತ್ತಾಯಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ ಭಾರತದ ವಿರುದ್ಧವೇ ಈ ಸಂಘಟನೆ ಈಗ ವಿಷ ಕಾರುತ್ತಿದೆ. ಈ ಸಂಘಟನೆಯನ್ನು ಸ್ಥಾಪಿಸಿದ್ದ ಶರೀಫ್ ಉಸ್ಮಾನ್ ಬಿನ್ ಹಾದಿ ಎಂಬಾತ ಈ ತಿಂಗಳ ಆರಂಭದಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಡೇಟಿಗೆ ಸಾವಿಗೀಡಾಗಿದ್ದರು.
ಭಾರತದ ವಿರುದ್ಧ ತೀವ್ರ ಟೀಕಾಕಾರನಾಗಿದ್ದ ಹಾದಿಯ ಕೊಲೆಗಾರರು ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಬಾಂಗ್ಲಾದೇಶ ಪೊಲೀಸರು ಹೇಳಿದ ನಂತರ ಈ ಒತ್ತಾಯ ಬಂದಿದೆ. ಡಿಸೆಂಬರ್ 12 ರ ದಾಳಿಯ ನಂತರ ಶಂಕಿತರಾದ ಫೈಸಲ್ ಕರೀಮ್ ಮಸೂದ್ ಮತ್ತು ಅಲಮ್‌ಗೀರ್ ಶೇಖ್ ಹಲುಘಾಟ್ ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದಾರೆ ಎಂದು ಢಾಕಾದ ಹಿರಿಯ ಪೊಲೀಸ್ ಅಧಿಕಾರಿ ಎಸ್.ಎನ್. ನಜ್ರುಲ್ ಇಸ್ಲಾಂ ಭಾನುವಾರ ಹೇಳಿದ್ದಾರೆ.
ಪೊಲೀಸ್ ಹೇಳಿಕೆಯ ಸ್ವಲ್ಪ ಸಮಯದ ನಂತರ, ಹಾದಿ ಅವರ ವಿದ್ಯಾರ್ಥಿ ವೇದಿಕೆಯಾದ ಇಂಕಿಲಾಬ್ ಮೊಂಚೊ ಮಧ್ಯಂತರ ಸರ್ಕಾರಕ್ಕೆ ನಾಲ್ಕು ಅಂಶಗಳ ಅಂತಿಮ ಎಚ್ಚರಿಕೆಯನ್ನು ನೀಡಿತು. ಹಾದಿ ಅವರ ಹಂತಕರ ವಿರುದ್ಧದ ವಿಚಾರಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ 24 ದಿನಗಳ ಗಡುವು ಕೂಡ ಬೇಡಿಕೆಗಳಲ್ಲಿ ಸೇರಿದೆ.
ಹಾದಿ ಹಂತರಕರನ್ನು ಭಾರತವು ಶಂಕಿತರನ್ನು 24 ಗಂಟೆಗಳ ಒಳಗೆ ಹಿಂತಿರುಗಿಸದಿದ್ದರೆ ಅಥವಾ ಅವರು ಭಾರತದಲ್ಲಿ ವಾಸಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡದಿದ್ದರೆ, ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳ ಕೆಲಸದ ಪರವಾನಗಿಗಳನ್ನು ರದ್ದುಗೊಳಿಸಬೇಕು ಎಂದು ಗುಂಪು ಬೆದರಿಕೆ ಹಾಕಿದೆ.
ಬಾಂಗ್ಲಾದೇಶದಾದ್ಯಂತ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಬಗ್ಗೆ ಮೌನ ವಹಿಸಿರುವ ಈ ಸಂಘಟನೆ, ಭಾರತದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ICJ) ಮೊಕದ್ದಮೆ ಹೂಡುವಂತೆ ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದೆ.
2026ರ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಬಾಂಗ್ಲಾದೇಶದಲ್ಲಿ ಅರಾಜಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತೀವ್ರಗಾಮಿ ಗುಂಪುಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹದಗೆಡಿಸುತ್ತಿವೆ ಎಂದು ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾದಿ ಕೊಲೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಬಾಂಗ್ಲಾದೇಶದ ಅಪಪ್ರಚಾರವನ್ನು ಭಾರತ ಈಗಾಗಲೇ ತಳ್ಳಿಹಾಕಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪ್ರತಿಕ್ರಿಯಿಸಿದ್ದು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಆರೋಪಗಳು ಆಧಾರರಹಿತ ಎಂದು ಹೇಳಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement