
2012ರ ಪುಣೆ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಸ್ಲಂ ಶಬ್ಬೀರ್ ಶೇಖ್ ಅಲಿಯಾಸ್ ಬಂಟಿ ಜಹಾಗೀರ್ದಾರ್ ಎಂಬಾತನನ್ನು ಬುಧವಾರ ಮಹಾರಾಷ್ಟ್ರದ ಶ್ರೀರಾಂಪುರದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಬಂಟಿ ಜಹಾಗೀರ್ದಾರ್ ಅಂತ್ಯಕ್ರಿಯೆಯೊಂದರಲ್ಲಿ ಪಾಲ್ಗೊಳ್ಳಲು ಶ್ರೀರಾಂಪುರಕ್ಕೆ ಆಗಮಿಸಿದ್ದ. ಸ್ಮಶಾನದಿಂದ ವಾಪಸ್ ಬರುತ್ತಿದ್ದಾಗ, ಜರ್ಮನ್ ಆಸ್ಪತ್ರೆಯ ಮುಖ್ಯ ದ್ವಾರದ ಬಳಿ ಹೊಂಚು ಹಾಕಿದ್ದ ಇಬ್ಬರು ದುಷ್ಕರ್ಮಿಗಳು ಅತಿ ಸಮೀಪದಿಂದ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ ಎಂದು ಅಹಲ್ಯಾನಗರ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘಾರ್ಗೆ ತಿಳಿಸಿದ್ದಾರೆ.
ಆಗಸ್ಟ್ 1, 2012 ರಂದು ಪುಣೆಯ ಜಂಗ್ಲಿ ಮಹಾರಾಜ ರಸ್ತೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ (ATS) ಈತನನ್ನು ಬಂಧಿಸಿತ್ತು. ಈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಈತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಹೇಳಲಾಗಿದೆ. ಹತ್ಯೆಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಜಹಾಗೀರ್ದಾರ್ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳು ಅಹಲ್ಯಾನಗರ ಜಿಲ್ಲೆಯಲ್ಲಿ ದಾಖಲಾಗಿದ್ದವು ಎಂದು ಹೇಳಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ