ಸಿಎಂ ಮಮತಾ ಬ್ಯಾನರ್ಜಿಯಿಂದ ತನಿಖೆಗೆ ‘ಅಡ್ಡಿ’ ; ಹೈಕೋರ್ಟ್ ಮೆಟ್ಟಿಲೇರಿದ ಇ.ಡಿ.

ಕೋಲ್ಕತ್ತಾ: 2020ರ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED) ಗುರುವಾರ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದೆ.
ಗುರುವಾರ ಬೆಳಿಗ್ಗೆ ಐ-ಪ್ಯಾಕ್ (I-PAC) ಸಂಸ್ಥೆಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾಗ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡಿದ್ದಾರೆ ಎಂದು ಇಡಿ ಅರ್ಜಿಯಲ್ಲಿ ತಿಳಿಸಿದೆ ಎಂದು ಲೈವ್‌ ಲಾ ವರದಿ ಮಾಡಿದೆ.
ಐ-ಪ್ಯಾಕ್ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸ ಮತ್ತು ಸಾಲ್ಟ್ ಲೇಕ್ ಕಚೇರಿಯಲ್ಲಿ ತಪಾಸಣೆ ನಡೆಯುತ್ತಿದ್ದಾಗ, ಮುಖ್ಯಮಂತ್ರಿಗಳು ಅಲ್ಲಿಗೆ ಆಗಮಿಸಿ ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಇ.ಡಿ. ಗಂಭೀರ ಆರೋಪ ಮಾಡಿದೆ.

ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಐ-ಪ್ಯಾಕ್ ಮುಖ್ಯಸ್ಥರ ನಿವಾಸದಲ್ಲಿ ಇ.ಡಿ. ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಐ-ಪ್ಯಾಕ್ ಮುಖ್ಯಸ್ಥರ ನಿವಾಸ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಖ್ಯಮಂತ್ರಿಗಳು ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳೊಂದಿಗೆ ಆಗಮಿಸುವವರೆಗೆ ಮತ್ತು ಭೌತಿಕ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗುವವರೆಗೆ ಪ್ರಕ್ರಿಯೆಗಳು ಶಾಂತಿಯುತವಾಗಿ ಮತ್ತು ವೃತ್ತಿಪರವಾಗಿ ನಡೆದಿದ್ದವು ಎಂದು ಇ.ಡಿ. ತಿಳಿಸಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಮಮತಾ ಬ್ಯಾನರ್ಜಿ ವಾಗ್ದಾಳಿ…
ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, “ತೃಣಮೂಲ ಕಾಂಗ್ರೆಸ್‌ನ ಚುನಾವಣಾ ಪ್ರಚಾರವನ್ನು ನಿರ್ವಹಿಸುವ ಐ-ಪ್ಯಾಕ್ ಕಚೇರಿಯಿಂದ ಚುನಾವಣೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಲು ಕೇಂದ್ರವು ತನಿಖಾ ಸಂಸ್ಥೆಯನ್ನು ಬಳಸಿಕೊಳ್ಳುತ್ತಿದೆ” ಎಂದು ಹೇಳಿದ್ದಾರೆ.
2020ರ ಕಲ್ಲಿದ್ದಲು ಕಳ್ಳಸಾಗಣೆಗೆ ಸಂಬಂಧಿಸಿದ ಹವಾಲಾ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ. ಈ ಪ್ರಕರಣವು ಪಶ್ಚಿಮ ಬಂಗಾಳದ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ECL) ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಲ್ಲಿದ್ದಲು ಕಳ್ಳತನಕ್ಕೆ ಸಂಬಂಧಿಸಿದ್ದಾಗಿದೆ. ಅನೂಪ್ ಮಾಜಿ ಎಂಬಾತನ ನೇತೃತ್ವದ ಸಿಂಡಿಕೇಟ್ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸಿ ಅದನ್ನು ವಿವಿಧ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿತ್ತು. ಈ ಅಕ್ರಮ ಹಣವು ‘ಹವಾಲಾ’ ಜಾಲದ ಮೂಲಕ ಐ-ಪ್ಯಾಕ್ (I-PAC) ಸಂಸ್ಥೆಗೆ ವರ್ಗಾವಣೆಯಾಗಿದೆ ಎಂಬುದು ಇ.ಡಿ. ಶಂಕೆ ವ್ಯಕ್ತಪಡಿಸಿದೆ.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಈ ಸಂಘರ್ಷ ತಾರಕಕ್ಕೇರಿದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement