ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ. 500ರಷ್ಟು ಸುಂಕ ಹೇರುವ ಮಸೂದೆಗೆ ಟ್ರಂಪ್ ಸಮ್ಮತಿ…!

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಮುಂದುವರಿಸುತ್ತಿರುವ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಸುಂಕದ ಕ್ರಮಕ್ಕೆ ಅಮೆರಿಕ ಮತ್ತೆ ಮುಂದಾಗಿದೆ. ರಷ್ಯಾದ ಮೇಲೆ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸುವ ದ್ವಿಪಕ್ಷೀಯ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ.
ಈ ಮಸೂದೆಯು ಕಾನೂನಾಗಿ ಜಾರಿಗೆ ಬಂದರೆ, ರಷ್ಯಾದಿಂದ ತೈಲ ಅಥವಾ ಯುರೇನಿಯಂ ಖರೀದಿಸುವ ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳ ಮೇಲೆ ಅಮೆರಿಕ ಬರೋಬ್ಬರಿ ಶೇ. 500ರಷ್ಟು ಆಮದು ಸುಂಕ (Tariff) ವಿಧಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ “ಯುದ್ಧ”ಕ್ಕೆ ಆರ್ಥಿಕ ನೆರವು ಸಿಗದಂತೆ ತಡೆಯುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ರಷ್ಯಾದಿಂದ ಅಗ್ಗದ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಿಗೆ ಈ ಮಸೂದೆ ದೊಡ್ಡ ಹೊಡೆತ ನೀಡಲಿದ್ದು, ಸುಂಕ ಏರಿಕೆಯ ಮೂಲಕ ಆ ದೇಶಗಳು ರಷ್ಯಾದಿಂದ ತೈಲ ಸೇರಿದಂತೆ ಯಾವುದೇ ವಸ್ತುಗಳನ್ನು ಖರೀದಿಸದಂತೆ ತಡೆಯುವ ತಂತ್ರವನ್ನು ಅಮೆರಿಕ ಹೂಡಿದೆ.
ಬುಧವಾರ ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾದ ನಂತರ ಲಿಂಡ್ಸೆ ಗ್ರಹಾಂ, ಮಸೂದೆಗೆ ಅಧ್ಯಕ್ಷರ ಪೂರ್ಣ ಬೆಂಬಲವಿದೆ ಎಂದು ಖಚಿತಪಡಿಸಿದ್ದಾರೆ. ಶ್ವೇತಭವನದ ಅಧಿಕಾರಿಗಳೂ ಈ ಬೆಳವಣಿಗೆಯನ್ನು ಅನುಮೋದಿಸಿದ್ದಾರೆ.
ಈ ಮಸೂದೆಯು ಮುಂದಿನ ವಾರವೇ ಅಮೆರಿಕದ ಸೆನೆಟ್‌ನಲ್ಲಿ ಮತದಾನಕ್ಕೆ ಬರುವ ಸಾಧ್ಯತೆಯಿದೆ.
ಉಕ್ರೇನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಆಡಳಿತವು ಶಾಂತಿ ಮಾತುಕತೆಗಳನ್ನು ನಡೆಸುತ್ತಿದೆ. ಈ ಮಾತುಕತೆಗಳ ವೇಳೆ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರಲು ಈ ಕಠಿಣ ಮಸೂದೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಅಮೆರಿಕ ನಿರ್ಧರಿಸಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement