ಬಾಂಗ್ಲಾದೇಶ ಕ್ರಿಕೆಟಿಗರಿಗೆ ಬಿಗ್ ಶಾಕ್ : ಹಲವು ಆಟಗಾರರ ಪ್ರಾಯೋಜಕತ್ವ ರದ್ದು ; ವರದಿ

 ನವದೆಹಲಿ/ಢಾಕಾ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಮತ್ತು ಕ್ರೀಡಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಕ್ರಿಕೆಟಿಗರು ಈಗ ತಮ್ಮ ಪ್ರಾಯೋಜಕರನ್ನು ಬದಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತದ ಪ್ರಮುಖ ಕ್ರೀಡಾ ಪರಿಕರ ತಯಾರಿಕಾ ಸಂಸ್ಥೆಯಾದ ಎಸ್‌ಜಿ (SG – Sanspareils Greenlands), ಬಾಂಗ್ಲಾ ಆಟಗಾರರೊಂದಿಗಿನ ತನ್ನ ಪ್ರಾಯೋಜಕತ್ವದ ಒಪ್ಪಂದವನ್ನು ಮುಂದುವರಿಸದೇ ಇರಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
 ಈ ಎಲ್ಲ ಬೆಳವಣಿಗೆಗಳ ಹಿಂದೆ ಐಪಿಎಲ್ ಮತ್ತು ಭದ್ರತೆಯ ವಿಚಾರಗಳಿವೆ.  ಬಿಸಿಸಿಐ (BCCI) ನಿರ್ದೇಶನದಂತೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ಸ್ಟಾರ್ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು.
ಇದಕ್ಕೆ ಪ್ರತಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮುಸ್ತಾಫಿಜುರ್ ಅವರಿಗೆ ಐಪಿಎಲ್ ಆಡಲು ನಿರಾಕ್ಷೇಪಣಾ ಪತ್ರ (NOC) ನೀಡಲು ನಿರಾಕರಿಸಿತು.
ಅಲ್ಲದೆ,  ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ 2026ರ ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು ಐಸಿಸಿಗೆ (ICC) ಮನವಿ ಮಾಡಿದೆ. ಭಾರತದಲ್ಲಿ ಆಟಗಾರರ ಭದ್ರತೆಗೆ ಆತಂಕವಿದೆ ಎಂದು ಬಾಂಗ್ಲಾದೇಶದ ವಾದಿಸಿದೆ.
ಆಟಗಾರರಿಗೆ ಆರ್ಥಿಕ ಹೊಡೆತ
ಪ್ರಸ್ತುತ ಬಾಂಗ್ಲಾದೇಶ ತಂಡದ ನಾಯಕ ಲಿಟ್ಟನ್ ದಾಸ್, ಯಾಸಿರ್ ರಬ್ಬಿ ಮತ್ತು ಮೊಮಿನುಲ್ ಹಕ್ ಅವರಂತಹ ಪ್ರಮುಖ ಆಟಗಾರರಿಗೆ ಎಸ್‌ಜಿ ಸಂಸ್ಥೆ ಪ್ರಾಯೋಜಕತ್ವ ನೀಡುತ್ತಿದೆ. ಒಪ್ಪಂದ ನವೀಕರಣಗೊಳ್ಳುವುದಿಲ್ಲ ಎಂಬ ಸುಳಿವು ಆಟಗಾರರ ಏಜೆಂಟ್‌ಗಳಿಗೆ ಸಿಕ್ಕಿದ್ದು, ಇದು ಬಾಂಗ್ಲಾ ಕ್ರೀಡಾ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೆ, ಇತರ ಭಾರತೀಯ ಕಂಪನಿಗಳು ಕೂಡ ಇದೇ ಹಾದಿ ಹಿಡಿಯುವ ಆತಂಕ ವ್ಯಕ್ತವಾಗಿದೆ.
ಮುಂಬರುವ ಪಂದ್ಯಗಳ ವೇಳಾಪಟ್ಟಿ
ಟಿ20 ವಿಶ್ವಕಪ್ 2026ರ ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಮನವಿಗೆ ಐಸಿಸಿಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಸದ್ಯದ ವೇಳಾಪಟ್ಟಿಯಂತೆ ಬಾಂಗ್ಲಾದೇಶ ತಂಡವು ಗ್ರೂಪ್ ‘ಸಿ’ ನಲ್ಲಿದ್ದು, ಭಾರತದಲ್ಲಿ ನಾಲ್ಕು ಪಂದ್ಯಗಳನ್ನು ಆಡಬೇಕಿದೆ.
ಫೆಬ್ರವರಿ 7ರಂದು ವೆಸ್ಟ್ ಇಂಡೀಸ್ ವಿರುದ್ಧ (ಕೋಲ್ಕತ್ತಾ), ಫೆಬ್ರವರಿ 9ರಂದು ಇಟಲಿ ವಿರುದ್ಧ (ಕೋಲ್ಕತ್ತಾ), ಫೆಬ್ರವರಿ 14ರಂದು ಇಂಗ್ಲೆಂಡ್ ವಿರುದ್ಧ (ಕೋಲ್ಕತ್ತಾ) ಹಾಗೂ ಫೆಬ್ರವರಿ 17ರಂದು ನೇಪಾಳ ವಿರುದ್ಧ (ಮುಂಬೈ) ಪಂದ್ಯಗಳನ್ನು ಆಡಬೇಕಿದೆ. ಈಗ ಐಸಿಸಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯವಾಗಲಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement