ತೆಹ್ರಾನ್ : ಇರಾನಿನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ನೇತೃತ್ವದ ಇಸ್ಲಾಮಿಕ್ ಆಡಳಿತದ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳು ತೀವ್ರಗೊಂಡಿವೆ. ದಿನೇ ದಿನೇ ಕುಸಿಯುತ್ತಿರುವ ಆರ್ಥಿಕತೆ, ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ ಮತ್ತು ಭದ್ರತಾ ಪಡೆಗಳ ದಮನಕಾರಿ ನೀತಿಯಿಂದ ಆಕ್ರೋಶಗೊಂಡ ಸಾವಿರಾರು ಇರಾನಿಯನ್ನರು ರಾಜಧಾನಿ ತೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೀದಿಗಿಳಿದು ಆಡಳಿತದ ವಿರುದ್ಧ ಘೋಷಣೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಗುರುವಾರ ರಾತ್ರಿಯ ಹೊತ್ತಿಗೆ ಪ್ರತಿಭಟನೆಗಳು ಉಗ್ರರೂಪ ಪಡೆಯುತ್ತಿದ್ದಂತೆ, ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರ ಸರ್ಕಾರವು ದೇಶಾದ್ಯಂತ ಇಂಟರ್ನೆಟ್ ಸೇವೆ ಮತ್ತು ಅಂತಾರಾಷ್ಟ್ರೀಯ ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಿದೆ. ಪ್ರತಿಭಟನಾಕಾರರು ಸಂಘಟಿತರಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಇರಾನ್‌ನ ನ್ಯಾಯಾಂಗ ಇಲಾಖೆಯ ಮುಖ್ಯಸ್ಥರು “ಸ್ವಾತಂತ್ರ್ಯ”ಕ್ಕಾಗಿ ಆಗ್ರಹಿಸುತ್ತಿರುವ ಪ್ರತಿಭಟನಾಕಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ರಾಜಮನೆತನದಿಂದ ಪ್ರತಿಭಟನೆಗೆ ಕರೆ:
ಗಡೀಪಾರು ಮಾಡಲ್ಪಟ್ಟಿರುವ ಇರಾನ್‌ನ ಯುವರಾಜ ರೆಜಾ ಪಹ್ಲವಿ ಅವರು ನೀಡಿದ್ದ ಪ್ರತಿಭಟನಾ ಕರೆಗೆ ಜನರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ಮೊದಲು ದೇಶದಿಂದ ಪಲಾಯನ ಮಾಡಿದ್ದ ಶಾ (Shah) ಅವರ ಮಗ ಪಹ್ಲವಿ, ಗುರುವಾರ ಮತ್ತು ಶುಕ್ರವಾರ ರಾತ್ರಿ 8 ಗಂಟೆಗೆ ಪ್ರತಿಭಟನೆ ನಡೆಸಲು ಕರೆ ನೀಡಿದ್ದರು. “ಸರ್ವಾಧಿಕಾರಿಗೆ ಸಾವು” ಮತ್ತು “ಇಸ್ಲಾಮಿಕ್ ಗಣರಾಜ್ಯಕ್ಕೆ ಸಾವು” ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುವುದರ ಜೊತೆಗೆ, ಈ ಬಾರಿ “ಇದು ಕೊನೆಯ ಹೋರಾಟ, ಪಹ್ಲವಿ ಮರಳಲಿದ್ದಾರೆ” ಎಂಬ ಘೋಷಣೆಗಳನ್ನೂ ಕೂಗುತ್ತಿದ್ದಾರೆ.
ಹಿಂದೆ ಈ ರೀತಿಯ ಘೋಷಣೆಗಳನ್ನು ಕೂಗುವುದು ಮರಣದಂಡನೆಗೆ ಕಾರಣವಾಗುತ್ತಿತ್ತು, ಆದರೆ ಈಗ ಜನತೆ ಪ್ರಾಣದ ಹಂಗು ತೊರೆದು ಆಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ.
ಪ್ರತಿಭಟನೆಯ ವಿಸ್ತಾರ ಮತ್ತು ಸಾವು-ನೋವು
ಅಮೆರಿಕಾ ಮೂಲದ ಮಾನವ ಹಕ್ಕುಗಳ ಸಂಸ್ಥೆಗಳ ವರದಿಯ ಪ್ರಕಾರ ಸಂಘರ್ಷದಲ್ಲಿ ಈವರೆಗೆ ಕನಿಷ್ಠ 42 ಜನರು ಸಾವನ್ನಪ್ಪಿದ್ದಾರೆ. ಸುಮಾರು 2,270ಕ್ಕೂ ಹೆಚ್ಚು ಜನರನ್ನು ಭದ್ರತಾ ಪಡೆಗಳು ಬಂಧಿಸಿವೆ. ಕೇವಲ ನಗರಗಳಲ್ಲದೆ, ಗ್ರಾಮೀಣ ಭಾಗಗಳಿಗೂ ಪ್ರತಿಭಟನೆ ಹರಡಿದೆ. ಪ್ರಮುಖ ಮಾರುಕಟ್ಟೆಗಳು ಮತ್ತು ‘ಬಜಾರ್’ಗಳು ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
ಇರಾನ್‌ನ ಇಂದಿನ ಈ ಸ್ಥಿತಿಗೆ ಆರ್ಥಿಕ ಅಧೋಗತಿಯೇ ಮುಖ್ಯ ಕಾರಣವಾಗಿದೆ. ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ 52% ತಲುಪಿದೆ. ಇರಾನ್‌ನ ‘ರಿಯಾಲ್’ ಮೌಲ್ಯ ಪಾತಾಳಕ್ಕೆ ಕುಸಿದಿದ್ದು, ಪ್ರಸ್ತುತ 1 ಅಮೆರಿಕನ್ ಡಾಲರ್‌ಗೆ 1.4 ಮಿಲಿಯನ್ (14 ಲಕ್ಷ) ರಿಯಾಲ್ ಮೌಲ್ಯವಿದೆ. ಪಾಶ್ಚಾತ್ಯ ರಾಷ್ಟ್ರಗಳ ಕಠಿಣ ಆರ್ಥಿಕ ನಿರ್ಬಂಧಗಳು ಮತ್ತು ಸರ್ಕಾರದ ದುರಾಡಳಿತದಿಂದಾಗಿ ಸಾಮಾನ್ಯ ಜನರಿಗೆ ಜೀವನ ನಡೆಸುವುದು ಅಸಾಧ್ಯವಾಗಿದೆ.
ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇರಾನ್ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಶಾಂತಿಯುತ ಪ್ರತಿಭಟನಾಕಾರರನ್ನು ಹಿಂಸಾತ್ಮಕವಾಗಿ ಕೊಂದರೆ, ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ. ಆದರೆ ಯುವರಾಜ ಪಹ್ಲವಿ ಅವರನ್ನು ಭೇಟಿ ಮಾಡುವ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಇರಾನ್‌ನ ಈ ಜನಾಂದೋಲನವು ಇಸ್ಲಾಮಿಕ್ ಆಡಳಿತದ ಭದ್ರ ಬುನಾದಿಯನ್ನು ಅಲುಗಾಡಿಸುತ್ತಿದೆ. ಸರ್ಕಾರವು ದಮನಕಾರಿ ನೀತಿ ಅನುಸರಿಸುತ್ತದೆಯೇ ಅಥವಾ ಜನರ ಬೇಡಿಕೆಗಳಿಗೆ ಮಣಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ