ಬೇಡ್ತಿ, ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಭಾನುವಾರ (ಜ.11) ಬೃಹತ್‌ ಸಮಾವೇಶ

ಶಿರಸಿ : ಪಶ್ಚಿಮಘಟ್ಟ ಪ್ರದೇಶದ ಪ್ರಮುಖ ನದಿಗಳಾದ ಬೇಡ್ತಿ, ಅಘನಾಶಿನಿ ನದಿಗಳ ಜೋಡಣೆ ಹಾಗೂ ಶರವಾತಿ ಭೂಗತ ಜಲವಿದ್ಯುತ್‌ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಸ್ವರ್ಣವಲ್ಲೀ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಎಂಇಎಸ್ ಕಾಲೇಜು ಮೈದಾನದಲ್ಲಿ ಭಾನುವಾರ (ಜನವರಿ11) ಮಧ್ಯಾಹ್ನ 2 ಗಂಟೆಯಿಂದ ನಡೆಯುವ ಬೃಹತ್ ಜನಸಮಾವೇಶಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ.
ಮೈದಾನದಲ್ಲಿ 45 ಸಾವಿರ ಚದರಿ ಅಡಿ ಸ್ಥಳದಲ್ಲಿ ವಿಶಾಲವಾಗಿ ಶಾಮಿಯಾನ ಹಾಕಲಾಗಿದ್ದು, ಸುಮಾರು9 ಸಾವಿರಕ್ಕೂ ಹೆಚ್ಚಿನ ಕುರ್ಚಿಗಳನ್ನು ಹಾಕಲಾಗಿದೆ. ಅಲ್ಲದೆ ಭಾರತೀಯ ಆಸನ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ ಶಾಮಿಯಾನದ ಇಕ್ಕೆಲಗಳಲ್ಲಿ ಸ್ಥಳವಿದೆ. ಸಂಘಟಕರು ಸುಮಾರು 20 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಮಧ್ಯಾಹ್ನ ಲಘು ಉಪಾಹಾರ ವ್ಯವಸ್ಥೆಯನ್ನು ಮಾಡಲಾಗಿದೆ. 40 ಅಡಿ ಉದ್ದ ಹಾಗೂ 20 ಅಡಿ ಅಗಲದ ವೇದಿಕೆ ಸಿದ್ಧಪಡಿಸಲಾಗಿದೆ. ಸಮಾವೇಶಕ್ಕೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಸ್ವರ್ಣವಲ್ಲೀ ಮಠದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಗೌರವ ಮಾರ್ಗದರ್ಶಕರಾದ ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು, ಸೋದೆ ವಾದಿರಾಜ ಮಠದ  ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸೋಂದಾ ಶ್ರೀ ಕ್ಷೇತ್ರ ಸ್ವಾದೀ ದಿಗಂಬರ ಜೈನ ಮಠದ ಶ್ರೀ ಫಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳು, ಜಡೆಯ ಶ್ರೀ ಮಹಾಂತ ಮಹಾಸ್ವಾಮಿಗಳು, ಶಿರಳಗಿಯ ಚೈತನ್ಯ ರಾಜಾರಾಮ ಆಶ್ರಮದ ಶ್ರೀ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು ಸಾನಿಧ್ಯ ಈ ಬೃಹತ್‌ ಸಮಾವೇಶದ ಸಾನಿಧ್ಯ ವಹಿಸಲಿದ್ದಾರೆ. ತಜ್ಞ ಉಪನ್ಯಾಸಕರಾಗಿ ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಸಂತೋಷ ಹೆಗ್ಡೆ, ತಜ್ಞರಾದ ಪ್ರೊ.. ಬಿ.ಎಂ. ಕುಮಾರಸ್ವಾಮಿ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ಆರ್‌.ವಿ.ದೇಶಪಾಂಡೆ, ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ, ಸತೀಶ ಸೈಲ್‌, ವಿಧಾನ ಪರಿಷತ್‌ ಸದಸ್ಯರಾದ ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಸ್ವರ್ಣವಲ್ಲೀ ಶ್ರೀಗಳಿಂದ ವೀಕ್ಷಣೆ…
 ಶನಿವಾರ ಸಂಜೆ ಮೈದಾನಕ್ಕೆ ಆಗಮಿಸಿದ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಬೃಹತ್‌ ಜನ ಸಮಾವೇಶದ ಸಿದ್ಧತೆಗಳನ್ನು ವೀಕ್ಷಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವರ್ಣವಲ್ಲೀ ಶ್ರೀಗಳು, ನದಿ ಜೋಡಣೆಗೆ ಸರಕಾರ ಡಿಪಿಆರ್ ಮಾಡಲು ಮುಂದಾಗುತ್ತಿದ್ದು ಜನರು ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ. ಇದನ್ನು ವಿರೋಧಿಸಿ ಜನಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಬೇಕು. ಸಭೆ ಆರಂಭಕ್ಕಿಂತ ಮುಂಚೆಯೇ ಜನ ಆಗಮಿಸಬೇಕು. ಜನರು ವಾಹನ ಸಂದಣಿಯಿಂದ ತೊಂದರೆಯಾಗದಂತೆ ವ್ಯವಸ್ಥೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಅನಂತಮೂರ್ತಿ ಹೆಗಡೆ, ದೀಪಕ ದೊಡ್ಡೂರು ಮೊದಲಾದವರು ಇದ್ದರು.
 ವಾಹನ ನಿಲುಗಡೆಗೆ ಸ್ಥಳ
ಶಿರಸಿ: ಜನಸಮಾವೇಶಕ್ಕೆ ಆಗಮಿಸುವ ಜನರಿಗೆ ಬೈಕ್ ಹಾಗೂ ಕಾರು ಮುಂತಾದ ವಾಹನ ನಿಲುಗಡೆ ಸ್ಥಳ ನಿಗದಿಪಡಿಸಲಾಗಿದೆ. ಸಿದ್ದಾಪುರ  ಭಾಗದಿಂದ ಬರುವ ಎಲ್ಲಾ ವಾಹನಗಳು ನಿಲೇಕಣಿ ಐದು ರಸ್ತೆ, ಯಲ್ಲಾಪುರ ನಾಕಾ ಮಾರ್ಗವಾಗಿ ಬಂದು ಎಂಇಎಸ್ ಚೈತನ್ಯ ಕಾಲೇಜು ಗ್ರೌಂಡ್ ನಲ್ಲಿ ಪಾರ್ಕಿಂಗ್ ಮಾಡಬೇಕು.
ಯಲ್ಲಾಪುರ ಭಾಗದಿಂದ ಬರುವ ವಾಹನಗಳು ಎಂಇಎಸ್  ಕಾಮರ್ಸ್ ಕಾಲೇಜ್‌ನ ಗ್ರೌಂಡ್‌ನಲ್ಲಿ ಪಾರ್ಕಿಂಗ್ ಮಾಡಬೇಕು,  ಇಸಳೂರು ಹುಬ್ಬಳ್ಳಿ ರಸ್ತೆಯ ಜನರಿಗೆ ಚಿಪಗಿ ಟ್ರೆೈನಿಂಗ್ ಸೆಂಟರ್ ಹತ್ತಿರ ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ.
ಬನವಾಸಿ ಹಾಗೂ ದೊಡ್ನಳ್ಳಿ ರಸ್ತೆಯಿಂದ ಬರುವ ವಾಹನ ಸವಾರರು ಕೆಎಚ್‌ಬಿ ಕಾಲೋನಿ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.
ಇನ್ನುಳಿದ ಭಾಗದಿಂದ ಬರುವ ಎಲ್ಲಾ ವಾಹನಗಳಿಗೆ ಕಾಲೇಜ್ ರಸ್ತೆಯ ಅಕ್ಕಪಕ್ಕದಲ್ಲಿ  ಹಾಗೂ ಮಾರಿಕಾಂಬಾ ಕ್ರೀಡಾಂಗಣದ ಸುತ್ತಲಿನ ಸ್ಥಳ ನಿಗದಿ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ  ಮಾರಿಕಾಂಬಾ ಕ್ರೀಡಾಂಗಣದ ಮುಂಭಾಗವನ್ನು ಸೂಚಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement