ಯೂಟ್ಯೂಬ್ ನೋಡಿಕೊಂಡು ಗರ್ಭಿಣಿಗೆ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ; ಮಹಿಳೆ ಸಾವು

ಭಾಗಲ್ಪುರ (ಬಿಹಾರ): ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಅದನ್ನು ಅರೆಬರೆ ಕಲಿತವರು ಬಳಸಿದರೆ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಬಿಹಾರದ ಈ ಘಟನೆ ಸಾಕ್ಷಿಯಾಗಿದೆ. ಜಿಲ್ಲೆಯ ಕಹಲ್‌ಗಾಂವ್ ಪ್ರದೇಶದಲ್ಲಿ ನಕಲಿ ವೈದ್ಯನೊಬ್ಬ ಯೂಟ್ಯೂಬ್ (YouTube) ವಿಡಿಯೋಗಳನ್ನು ನೋಡಿ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಎಂದು ನ್ಯೂಸ್‌ ೧೮ ವರದಿ ಮಾಡಿದೆ. ಅದೃಷ್ಟವಶಾತ್ ನವಜಾತ ಶಿಶು ಪ್ರಾಣಾಪಾಯದಿಂದ ಪಾರಾಗಿದೆ.
ವರದಿಯ ಪ್ರಕಾರ, ಜಾರ್ಖಂಡ್ ಮೂಲದ ಮಹಿಳೆ ಹೆರಿಗೆಗಾಗಿ ತಮ್ಮ ತವರು ಮನೆಯಾದ ರಸಲ್ಪುರಕ್ಕೆ ಬಂದಿದ್ದರು. ರಾತ್ರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಕುಟುಂಬಸ್ಥರು ಅವರನ್ನು ಹತ್ತಿರದ ಏಕಚಾರಿ ಪಂಚಾಯತ ವ್ಯಾಪ್ತಿಯ ಖಾಸಗಿ ಕ್ಲಿನಿಕ್‌ಗೆ ದಾಖಲಿಸಿದ್ದರು.

ಕ್ಲಿನಿಕ್ ನಡೆಸುತ್ತಿದ್ದ ವ್ಯಕ್ತಿಯು ಅರ್ಹ ವೈದ್ಯನಲ್ಲದಿದ್ದರೂ ಶಸ್ತ್ರಚಿಕಿತ್ಸೆ (Operation) ಅಗತ್ಯವಿದೆ ಎಂದು ಕುಟುಂಬದವರನ್ನು ನಂಬಿಸಿದ್ದಾನೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆ ನಕಲಿ ವೈದ್ಯ ಮತ್ತು ಆತನ ಸಹಾಯಕರು ಪದೇ ಪದೇ ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರಿಯಾದ ವೈದ್ಯಕೀಯ ಜ್ಞಾನ ಮತ್ತು ಮೂಲಸೌಕರ್ಯ ಇಲ್ಲದೆ ನಡೆಸಿದ ಈ ಶಸ್ತ್ರಚಿಕಿತ್ಸೆಯಿಂದಾಗಿ ಮಹಿಳೆಗೆ ಅತಿಯಾದ ರಕ್ತಸ್ರಾವ ಉಂಟಾಗಿ ಶಸ್ತ್ರಚಿಕಿತ್ಸಾ ಮೇಜಿನ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ. ಮಹಿಳೆ ಮೃತಪಡುತ್ತಿದ್ದಂತೆಯೇ ಗಾಬರಿಗೊಂಡ ಆರೋಪಿಗಳು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬದವರಿಗೆ ಸುಳ್ಳು ಹೇಳಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ತಕ್ಷಣವೇ ಕ್ಲಿನಿಕ್ ಮುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಸಮುದ್ರ ಮಟ್ಟ ಏರಿಕೆಯಿಂದ ಮುಂಬೈ, ಕೋಲ್ಕತ್ತಾದ 1.4 ಕೋಟಿ ಜನರು ಮನೆ ಕಳೆದುಕೊಳ್ಳಬಹುದು : ವಿಶ್ವಸಂಸ್ಥೆ ವರದಿ

ಈ ವಿಷಯ ತಿಳಿಯುತ್ತಿದ್ದಂತೆಯೇ ಸಿಟ್ಟಿಗೆದ್ದ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಮೃತದೇಹವನ್ನು ಕ್ಲಿನಿಕ್ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಇಂತಹ ಘಟನೆಗಳು ಈ ಹಿಂದೆಯೂ ಇಲ್ಲಿ ನಡೆದಿವೆ, ಆದರೆ ಅವುಗಳನ್ನು ಮುಚ್ಚಿಹಾಕಲಾಗಿತ್ತು ಎಂದು ಸ್ಥಳೀಯ ನಿವಾಸಿ ರಾಜೇಶಕುಮಾರ ಗಂಭೀರ ಆರೋಪ ಮಾಡಿದ್ದಾರೆ.
ರಸಲ್ಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತಲೆಮರೆಸಿಕೊಂಡಿರುವ ನಕಲಿ ವೈದ್ಯನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement