ಶಿರಸಿ: ನದಿಗಳ ರಕ್ಷಣೆಯ ಈ ಹೋರಾಟದಲ್ಲಿ ಉತ್ತರ ಜಿಲ್ಲೆಯ ಜನರಲ್ಲಿ ಒಗ್ಗಟ್ಟು ಅನಿವಾರ್ಯ. ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸದಿದ್ದರೆ, ಅವೈಜ್ಞಾನಿಕವಾಗಿ ಜಾರಿಗೆ ತರಲು ಉದ್ದೇಶಿಸಿರುವ ಅಘನಾಶಿನಿ ಮತ್ತು ಬೇಡ್ತಿ ನದಿ ತಿರುವು ಯೋಜನೆಯನ್ನು ಕೈಬಿಡದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ. ಒಂದು ವೇಳೆ ರಾಜಕಾರಣಿಗಳು ಪಕ್ಷಾತೀತವಾಗಿ ಸಂಘಟಿತರಾಗದಿದ್ದರೆ, ಮುಂಬರುವ ದಿನಗಳಲ್ಲಿ ಸಾಮೂಹಿಕವಾಗಿ ಚುನಾವಣೆಗಳನ್ನು ಬಹಿಷ್ಕರಿಸುವ ಕಾಲ ಬರಬಹುದು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನಗರದ ಎಂ.ಇ.ಎಸ್. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೇಡ್ತಿ-ಅಘನಾಶಿನಿ ಜನ ಸಮಾವೇಶದ ಸಮಾರೋಪ ಭಾಷಣ ಮಾಡಿದ ಅವರು, ನದಿಗಳು ಕೇವಲ ನೀರಿನ ಮೂಲಗಳಲ್ಲ, ಅವುಗಳು ಜೀವಂತ ದೇವತೆಗಳು. ಪರಮಾತ್ಮನು ನದಿಗಳಿಗೆ ಸಹಜವಾಗಿ ಹರಿಯುವ ಸ್ವಾತಂತ್ರ್ಯವನ್ನು ನೀಡಿದ್ದಾನೆ. ನಾವು ಆ ಹರಿವಿನ ದಿಕ್ಕನ್ನು ಬದಲಿಸಲು ಹೋದರೆ, ಅದು ಸಾಕ್ಷಾತ್ ಭಗವಂತನ ಆಜ್ಞೆಯನ್ನೇ ಉಲ್ಲಂಘಿಸಿದಂತೆ. ಮಾನವರಾದ ನಮಗೆ ಹೇಗೆ ಸ್ವತಂತ್ರವಾಗಿ ಬದುಕುವ ಹಕ್ಕು ಹೇಗೆ ಇದೆಯೋ, ಅದೇ ರೀತಿ ನದಿಗಳಿಗೂ ತಮ್ಮ ನೈಸರ್ಗಿಕ ಹಾದಿಯಲ್ಲಿ ಹರಿಯುವ ಹಕ್ಕಿದೆ ಎಂದು ಹೇಳಿದರು.
ಜೀವವೈವಿಧ್ಯಕ್ಕೆ ಆತಂಕ ಉಂಟಾಗದ ರೀತಿಯಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಬೇಕು. ನದಿ ತಿರುವು ಯೋಜನೆಯ ಬಗ್ಗೆ ಪ್ರಾಮಾಣಿಕ ಮತ್ತು ವಸ್ತುನಿಷ್ಠ ಚಿಂತನೆ ನಡೆಯಬೇಕು. ತಜ್ಞರಾದವರು ಹಾಗೂ ತ ರಾಜಕಾರಣಿಗಳ ಅಥವಾ ಇನ್ಯಾರದ್ದೋ ಪ್ರಭಾವಕ್ಕೆ ಒಳಗಾಗಬಾರದು. ಒಂದು ವೇಳೆ ವೈಜ್ಞಾನಿಕವಾಗಿ ಮತ್ತು ತಟಸ್ಥವಾಗಿ ಚಿಂತನೆ ನಡೆದರೆ, ಇಂತಹ ಯೋಜನೆಗಳು ಕಾರ್ಯರೂಪಕ್ಕೆ ಬರಲು ಸಾಧ್ಯವೇ ಇಲ್ಲ. ನಮ್ಮ ಈ ಜನಾಂದೋಲನಕ್ಕೆ ಕಾನೂನಾತ್ಮಕ ಬಲ ಸೇರಿದರೆ ಯೋಜನೆ ಸ್ಥಗಿತವಾಗುವುದು ಖಂಡಿತ ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರಾಮಾಣಿಕ ಅಧ್ಯಯನ ನಡೆದರೆ ಯೋಜನೆ ಅಸಾಧ್ಯ
ಸರ್ಕಾರವು ನೀರಾವರಿ ಯೋಜನೆಗಳನ್ನು ರೂಪಿಸುವಾಗ ಪ್ರಾಮಾಣಿಕ ಮತ್ತು ವೈಜ್ಞಾನಿಕ ಚಿಂತನೆ ನಡೆಸಬೇಕು. ವಿಜ್ಞಾನಿಗಳ ಮೇಲೆ ಯಾವುದೇ ರಾಜಕೀಯ ಅಥವಾ ಬಾಹ್ಯ ಪ್ರಭಾವ ಬೀರದೇ ಸ್ವತಂತ್ರವಾಗಿ ಅಧ್ಯಯನ ನಡೆಸಲು ಅವಕಾಶ ನೀಡಬೇಕು. ಒಂದು ವೇಳೆ ಅಘನಾಶಿನಿ ಮತ್ತು ಬೇಡ್ತಿ ಕಣಿವೆಗಳಲ್ಲಿ ಪ್ರಾಮಾಣಿಕವಾಗಿ ವೈಜ್ಞಾನಿಕ ಅಧ್ಯಯನ ನಡೆದರೆ, ಈ ನದಿ ತಿರುವು ಯೋಜನೆ ತಾಂತ್ರಿಕವಾಗಿ ಮತ್ತು ಪಾರಿಸರಿಕವಾಗಿ ‘ಅಸಾಧ್ಯ’ ಎಂಬ ವರದಿ ಬರುವುದು ಖಚಿತ ಎಂದು ಶ್ರೀಗಳು ಭರವಸೆ ವ್ಯಕ್ತಪಡಿಸಿದರು.
ಪರ್ಯಾಯ ಮಾರ್ಗಗಳಿಲ್ಲವೇ..?
ನೀರಾವರಿ ಅಗತ್ಯ ಎಂಬುದನ್ನು ಒಪ್ಪುತ್ತೇವೆ, ಆದರೆ ಅದಕ್ಕಾಗಿ ಮುಳುಗಡೆ ಮತ್ತು ಅಪಾರ ಜೀವವೈವಿಧ್ಯತೆಯ ನಾಶ ಅನಿವಾರ್ಯವಲ್ಲ. ಪರಿಸರಕ್ಕೆ ಹಾನಿಯಾಗದಂತೆ, ಕಾಡು ಮುಳುಗಡೆಯಾಗದ ರೀತಿಯಲ್ಲಿ ನೀರಾವರಿ ಸೌಲಭ್ಯ ನೀಡಲು ಪರ್ಯಾಯ ಮಾರ್ಗಗಳತ್ತ ನೋಡಬೇಕು. ಮತ್ತು ಸರ್ಕಾರ ಅಂತಹ ಪರ್ಯಾಯ ಮಾರ್ಗಗಳತ್ತ ಗಮನಹರಿಸಬೇಕು. ಪಶ್ಚಿಮ ಘಟ್ಟದ ಉಳಿವಿನ ಕುರಿತು ಪ್ರಾಮಾಣಿಕ ಪ್ರಯತ್ನ ನಡೆದಾಗ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ. ಅಗತ್ಯ ಬಿದ್ದರೆ ಜಿಲ್ಲೆಯ ಜನರು ಪಕ್ಷಾತೀತವಾಗಿ ಒಗ್ಗೂಡಿ ಮುಂಬರುವ ಚುನಾವಣೆ ಸಾಮೂಹಿಕವಾಗಿ ಬಹಿಷ್ಕರಿಸುವ ಕಾಲವೂ ಬರಬಹುದು ಎಂದು ಸ್ವರ್ಣವಲ್ಲಿ ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ