ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆಗೆ ಉತ್ತರ ಕನ್ನಡ ಜಿಲ್ಲೆ ಜನಪ್ರತಿನಿಧಿಗಳ ಒಕ್ಕೊರಲ ವಿರೋಧ

 ಶಿರಸಿ: “ಉತ್ತರ ಕನ್ನಡ ಜಿಲ್ಲೆಗೆ ಬೇಡವಾದ ಹಾಗೂ ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆಗೂ ನಮ್ಮ ಸಂಪೂರ್ಣ ವಿರೋಧವಿದೆ.ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಯೋಜನೆಗಳನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು. ಈ ಯೋಜನೆಗಳನ್ನು ಕೈಬಿಡಬೇಕು ಎಂಬುದು ನಮ್ಮ ಆಗ್ರಹ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನಗರದ ಎಂ.ಇ.ಎಸ್. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೇಡ್ತಿ-ಅಘನಾಶಿನಿ ಜನ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಜಿಲ್ಲೆಯ ಹಿತಾಸಕ್ತಿಯೇ ಮೊದಲು. ಜಿಲ್ಲೆಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳಾದ ನಮ್ಮ ಜವಾಬ್ದಾರಿ. 23 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಜನರ ತೆರಿಗೆ ಹಣವಾಗಿದ್ದು, ಜನರ ಹಣದಲ್ಲೇ ಜನರಿಗೆ ತೊಂದರೆ ಕೊಡುವ ಪರಿಸ್ಥಿತಿ ಬರಬಾರದು. ಹೀಗಾಗಿ ಪಕ್ಷಾತೀತವಾಗಿ ಈ ಯೋಜನೆ ವಿರೋಧಿಸಬೇಕಿದೆ ಎಂದರು.
“ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ೨೦೨೧ರ ಬಜೆಟ್‌ನಲ್ಲಿ ಈ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆಗಿದ್ದರು. ಆ ಸಮಯದಲ್ಲಿ ಯಾರೂ ಇದರ ವಿರುದ್ಧ ಧ್ವನಿ ಎತ್ತಲಿಲ್ಲ. ಆಗಲೇ ಇದನ್ನು ಅಲ್ಲಿಯೇ ವಿರೋಧಿಸಿದ್ದರೆ, ಇಂದು ಸ್ವಾಮೀಜಿಗಳು ಹೋರಾಟ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
 ಈ ಯೋಜನೆಯ ಕುರಿತು ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಲು ಮತ್ತು ಈಗ ಎದುರಾಗಿರುವ ಸಮಸ್ಯೆ ಎದುರಿಸಲು ನಾನು ಸಹ ಹೋರಾಟದ ಜೊತೆಗಿದ್ದೇನೆ. ಜಿಲ್ಲೆಯ ಜನಪ್ರತಿನಿಧಿಗಳು ಒಟ್ಟಿಗೆ ನಿಂತು, ಈ ಯೋಜನೆ ನಿಲ್ಲಿಸಲು ಗುರುಗಳ ಸಮ್ಮುಖದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಮಂಕಾಳು ವೈದ್ಯ ಭರವಸೆ ನೀಡಿದರು.
ಉಪನ್ಯಾಸ ನೀಡಿದ ಹಿರಿಯ ಪರಿಸರ ತಜ್ಞ ಪ್ರೊ. ಬಿ. ಎಂ. ಕುಮಾರಸ್ವಾಮಿ, ಉತ್ತರ ಕನ್ನಡ ಜನರು ಕೇಳದಿದ್ದರೂ ಕೈಗಾ ಅಣುಸ್ಥಾವರ, ನೌಕಾನೆಲೆ ಇತ್ಯಾದಿ ಯೋಜನೆಗಳನ್ನು ಸರ್ಕಾರ ಕೊಟ್ಟಿದೆ. ಆದರೆ, ಬದುಕಲು ಒಂದು ಸುಸಜ್ಜಿತ ಆಸ್ಪತ್ರೆ ಕೇಳಿದರೆ ಸರ್ಕಾರ ಇನ್ನೂ ಕೊಡಲಿಲ್ಲ.  ಈಗ ಕುಡಿಯುವ ನೀರು ಮತ್ತು ನೀರಾವರಿ ನೆಪವೊಡ್ಡಿ ಉತ್ತರ ಕನ್ನಡದ ಜೀವನದಿಗಳನ್ನು ʼಅಪಹರಣʼ ಮಾಡಲು ಸರ್ಕಾರ ಹೊರಟಿದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಆಗುವ ಅನಾಹುತ ಸಮಗ್ರ ದಕ್ಷಿಣ ಭಾರತದ ಪರಿಸರಕ್ಕಾಗುವ ಅನಾಹುತ ಎಂದು ಕೇಂದ್ರ ಹಾಗೂ ರಾಜ್ಯ  ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನದಿ ತಿರುವು ಯೋಜನೆಗಳು ಹೇಗೆ ಅವೈಜ್ಞಾನಿಕ ಎಂಬುದನ್ನು ಅಂಕಿಅಂಶಗಳ ಸಹಿತ ವಿವರಿಸಿದ ಅವರು,  ಭಾರತದ ನದಿ ಜೋಡಣೆ ಯೋಜನೆಯ ಭಾಗವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಣೆಕಟ್ಟು ಕಟ್ಟಿ ತಿರುಗಿಸುವ ಸಂಚು ನಡೆದಿದೆ ಎಂದರು.
 ದೇಶದಲ್ಲಿ 5334 ದೊಡ್ಡ ಅಣೆಕಟ್ಟುಗಳಿವೆ.  ಅವುಗಳಲ್ಲಿ 2000ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ಮಹಾರಾಷ್ಟ್ರ ದೇಶದಲ್ಲಿ ಅತಿ ಹೆಚ್ಚು ಬರಗಾಲ ಪೀಡಿತ ರಾಜ್ಯದಲ್ಲಿ ಒಂದಾಗಿದೆ. ಹೀಗಿರುವಾಗ ಅಣೆಕಟ್ಟುಗಳಿಂದ ಜಲಸಮೃದ್ಧಿ ಸಾಧ್ಯ ಎಂಬುದು ಸುಳ್ಳು ಎಂಬುದು ಸಾಬೀತಾಗಿದೆ ಎಂದು ಅವರು ಪ್ರತಿಪಾದಿಸಿದರು.
6 ಕೋಟಿ ಜನರ ಬದುಕು ಅತಂತ್ರ
ಅಭಿವೃದ್ಧಿಯ ಹೆಸರಿನಲ್ಲಿ ಜಾರಿಗೆ ಬಂದ ಇಂತಹ ಯೋಜನೆಗಳಿಂದ ದೇಶದಲ್ಲಿ ಇದುವರೆಗೆ ಸುಮಾರು 6 ಕೋಟಿ ಜನ ನಿರಾಶ್ರಿತರಾಗಿದ್ದಾರೆ. ಇವರಲ್ಲಿ ಕೇವಲ 1.5 ಕೋಟಿ ಜನರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದ 4.5 ಕೋಟಿ ಜನರಿಗೆ ಸಣ್ಣ ಮೊತ್ತದ ಪರಿಹಾರವೂ ಸಿಕ್ಕಿಲ್ಲ. ಹೀಗೆ ನಿರ್ಗತಿಕರಾದವರಲ್ಲಿ ಬಹುತೇಕರು ಬುಡಕಟ್ಟು ಜನಾಂಗದವರು, ದಲಿತರು ಮತ್ತು ಹಿಂದುಳಿದ ವರ್ಗದವರು. ಈ ಯೋಜನೆಗಳೂ ಬಡವರನ್ನು ಮತ್ತು ಅರಣ್ಯವಾಸಿಗಳನ್ನು ಬೀದಿಗೆ ತರಲಿದೆ ಎಂದು ಅವರು ಟೀಕಿಸಿದರು.
ಇದು ನಮ್ಮ ದುರ್ದೈವ…
ನದಿ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥ ಎಂದು ಹೇಳುವ ವಿಜ್ಞಾನಿ ಯಾರಿದ್ದಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, “ನದಿ ನೀರು ಸಮುದ್ರ ಸೇರುವುದು ನಿಸರ್ಗದ ಸಹಜ ಜಲಚಕ್ರ (Water Cycle). ನದಿಯಿಂದ ಸಮುದ್ರಕ್ಕೆ ನೀರು, ಸಮುದ್ರದಿಂದ ಆವಿಯಾಗಿ ಮಳೆ, ಮಳೆಯಿಂದ ನದಿ ಹಾಗೂ ಪುನಃ ನದಿಯಿಂದ ಸಮುದ್ರ ಹೀಗೆ ಜಲಚಕ್ರ ನಡೆಯುತ್ತದೆ. ಆದರೆ ನಮ್ಮ ರಾಜಕಾರಣಿಗಳು ಈ ನೀರು ಸಮುದ್ರಕ್ಕೇ ಹೋಗಬಾರದು ಎಂದು ಹಠ ಹಿಡಿದಿದ್ದಾರೆ. ಪ್ರಕೃತಿಗಿಂತ ತಾವೇ ಬುದ್ಧಿವಂತರು ಎಂದುಕೊಂಡಿರುವ ಇಂತಹ ಅವೈಜ್ಞಾನಿಕ ರಾಜಕಾರಣಿಗಳನ್ನು ಪಡೆದಿರುವುದು ನಮ್ಮ ದುರ್ದೈವ  ಎಂದರು.
ಉತ್ತರ ಕನ್ನಡಕ್ಕೆ ಕೊಡುಗೆ ಏನು?
ಉತ್ತರ ಕನ್ನಡದ ನದಿಗಳನ್ನು ಬಯಲುಸೀಮೆಗೆ ತಿರುಗಿಸುತ್ತೀರಿ. ಆದರೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ  ನೀರು ಎಲ್ಲಿಂದ ಕೊಡುತ್ತೀರಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಉತ್ತರ ಕನ್ನಡ ಜನರು ತಾಜ್‌ ಮಹಲ್ ಕೇಳಲಿಲ್ಲ, ಕೇವಲ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೇಳಿದರು. ಮಂಗನ ಕಾಯಿಲೆಗೆ ಶಾಶ್ವತ ಪರಿಹಾರ ಕೇಳಿದರು. ಆದರೆ ಅದ್ಯಾವುದಕ್ಕೂ ಸ್ಪಂದಿಸಿದ ಸರ್ಕಾರ ಇಂತಹ ಜಿಲ್ಲೆಗೆ ಬೇಡ ಯೋಜನೆಗಳನ್ನು ಹೇರುತ್ತಿದೆ ಎಂದು ಕಿಡಿಕಾರಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಹಲವು ಯೋಜನೆಗಳಗೆ ಜಿಲ್ಲೆಯ ಜನರು ತ್ಯಾಗ ಮಾಡಿದ್ದಾರೆ. ಅದರ ದುಷ್ಪರಿಣಾಮವನ್ನೂ ಎದುರಿಸುತ್ತಿದ್ದಾರೆ. ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗಲೇಬೇಕು. ಪರಿಸರಕ್ಕೆ ಮಾರಕವಾಗುವಂಥ ಯೋಜನೆಗಳಿಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದೇನೆ. ಈಗಲೂ ನನ್ನ ವಿರೋಧ ಇದೇ ಇದೆ. ನಿಯೋಗದೊಂದಿಗೆ ಬನ್ನಿ.  ಫೆಬ್ರವರಿ ಮೊದಲ ವಾರದಲ್ಲಿ ಪರಿಸರ ಖಾತೆ ಸಚಿವರೂ ಸೇರಿದಂತೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ, ಯೋಜನೆ ಸ್ಥಗಿತಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಯಾವುದೇ ಕಾರಣಕ್ಕೆ ಈ ಯೋಜನೆ ಆಗಬಾರದು. ಇದಕ್ಕೆ ಶಾಶ್ವತವಾಗಿ ಇತಿಶ್ರೀ ಹಾಡಬೇಕು. ಯೋಜನೆಗಳ ಬದಲು ಜಿಲ್ಲೆಯವಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಲಿ. ಈ ಬಗ್ಗೆ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಜನರು ರಾಜ್ಯದ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅರಣ್ಯ, ಭೂಮಿ ಮತ್ತು ಜೀವನವನ್ನೇ ಧಾರೆ ಎರೆದಿದ್ದೇವೆ. ಇನ್ನಾದರೂ ನಮ್ಮ ಜಿಲ್ಲೆಯ ಜನರನ್ನು ನೆಮ್ಮದಿಯಿಂದ ಬದುಕಲು ಬಿಡಿ. ಈ ಯೋಜನೆಯ ಸಾಧಕ-ಬಾಧಕಗಳನ್ನು ಮತ್ತು ಜಿಲ್ಲೆಯ ಜನರ ಆಕ್ರೋಶವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಸಂಘಟಿತ ಪ್ರಯತ್ನ ಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ನಿಯೋಗ ತೆರಳಿ ವಸ್ತುಸ್ಥಿತಿಯನ್ನು ವಿವರಿಸಬೇಕಿದೆ. ಹಾಗೂ ವಿಧಾನಸಭೆ ಹಾಗೂ ಸಂಸತ್ತಿನಲ್ಲಿಯೂ ಈ ಬಗ್ಗೆ ಧ್ವನಿ ಎತ್ತಬೇಕಿದೆ. ಎರಡೂ ಸರ್ಕಾರಗಳ ಮಟ್ಟದಲ್ಲಿ ಯೋಜನೆಯನ್ನು ಕೈಬಿಡುವಂತೆ ಒತ್ತಡ ಹೇರಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ,  ಮಾರಕ ಯೋಜನೆಗಳಿಂದ ವನವಾಸಿಗಳೂ ಸೇರಿ ಎಲ್ಲರೂ ಒಟ್ಟಿಗೆ ವಿರೋಧಿಸುತ್ತೇವೆ. ಯೋಜನೆಗಳಿಂದ ಮನೆ‌ಮಠ ಕಳೆದುಕೊಳ್ಳುವ ಸ್ಥಿತಿ ಇದೆ. ಹೀಗಾಗಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದರು. ಸಮಾವೇಶದಲ್ಲಿ ಬೃಹತ್‌ ಜನಸ್ತೋಮವೇ ನೆರೆದಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement