
ಪಾಕಿಸ್ತಾನ ಸೇನೆ ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಿನ ಅಪವಿತ್ರ ಸಂಬಂಧವನ್ನು ಲಷ್ಕರ್-ಎ-ತೈಬಾ (LeT) ಉಪ ಮುಖ್ಯಸ್ಥ ಹಾಗೂ ಪಹಲ್ಗಾಮ್ ಉಗ್ರರ ದಾಳಿಯ ಸಂಚುಕೋರ ಸೈಫುಲ್ಲಾ ಕಸೂರಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಪಾಕ್ ಸೇನೆಯು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬ ಭಾರತದ ದಶಕಗಳ ಕಾಲದ ಆರೋಪಕ್ಕೆ ಪುರಾವೆ ಸಿಕ್ಕಂತಾಗಿದೆ.
ಪಾಕಿಸ್ತಾನದ ಶಾಲೆಯೊಂದರಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಕಸೂರಿ, “ಪಾಕಿಸ್ತಾನ ಸೇನೆಯು ತನ್ನ ಸೈನಿಕರ ಅಂತ್ಯಕ್ರಿಯೆಯ ಪ್ರಾರ್ಥನೆ ನೆರವೇರಿಸಲು ನನ್ನನ್ನು ಆಹ್ವಾನಿಸುತ್ತದೆ. ಭಾರತಕ್ಕೆ ನನ್ನ ಕಂಡರೆ ಭಯವಿದೆ,” ಎಂದು ಆತ ಹೇಳಿಕೊಂಡಿದ್ದಾನೆ. ಈ ಭಾಷಣದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅತ್ಯಂತ ವಿಚಿತ್ರವೆಂದರೆ ಪಾಕಿಸ್ತಾನದ ಮಕ್ಕಳ ಶಾಲೆಯಲ್ಲಿ ಭಯೋತ್ಪಾದಕ ಗುಂಪಿನ ನಾಯಕನಿಗೆ ಯುವ ಮನಸ್ಸುಗಳನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಲಾಗಿದೆ. ಇದು ಪಾಕಿಸ್ತಾನದ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಪಾಕಿಸ್ತಾನದ ಮಿಲಿಟರಿಯು ಭಯೋತ್ಪಾದಕ ಗುಂಪುಗಗಳಿಗೆ ಬೆಂಬಲಿಸತ್ತಿವೆ ಎಂಬ ಭಾರತದ ದೀರ್ಘಕಾಲದ ಆರೋಪಗಳನ್ನು ಇದು ದೃಢಪಡಿಸಿದೆ.
ಏಪ್ರಿಲ್ 22, 2025 ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ಘಟನೆಗೆ ಪ್ರತಿಯಾಗಿ ಭಾರತವು ‘ಆಪರೇಷನ್ ಸಿಂಧೂರ’ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿತ್ತು.
ಮೇ 7 ರಂದು ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಲಷ್ಕರ್-ಎ-ತೈಬಾದ ಮುರುದ್ಕೆಯಲ್ಲಿರುವ ‘ಮರ್ಕಜ್ ತೈಬಾ’ ಪ್ರಧಾನ ಕಚೇರಿ ಸಂಪೂರ್ಣ ನಾಶವಾಗಿತ್ತು. ಇದೀಗ ಲಷ್ಕರ್ ಸಂಘಟನೆಯು ಈ ಕಟ್ಟಡವನ್ನು ಮರುನಿರ್ಮಾಣ ಮಾಡುತ್ತಿದೆ.
ಫೆಬ್ರವರಿ 5, 2026ರ ಒಳಗೆ (ಕಾಶ್ಮೀರ ಐಕ್ಯತಾ ದಿನ) ಈ ಕೇಂದ್ರವನ್ನು ಪುನರ್ ಆರಂಭಿಸಲು ಉಗ್ರರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಯ ವರದಿ ತಿಳಿಸಿದೆ. ಭಾರತದ ಸೇನಾ ಕಾರ್ಯಾಚರಣೆಯಿಂದ ಕಂಗೆಟ್ಟಿರುವ ಲಷ್ಕರ್ ಸಂಘಟನೆಯು, ಪಾಕ್ ಸೇನೆಯ ನೇರ ಬೆಂಬಲದೊಂದಿಗೆ ಮತ್ತೆ ತನ್ನ ಮೂಲಸೌಕರ್ಯಗಳನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ. ಶಾಲಾ ಮಕ್ಕಳ ಮುಂದೆ ಕಸೂರಿ ನೀಡಿದ ಹೇಳಿಕೆಯು ಪಾಕಿಸ್ತಾನವು ಹೇಗೆ ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಎಂಬುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಸಾಕ್ಷಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ