ನವದೆಹಲಿ: “ಅಮೆರಿಕದ ಪಾಲಿಗೆ ಭಾರತಕ್ಕಿಂತ ಅತ್ಯಗತ್ಯವಾದ ದೇಶ ಮತ್ತೊಂದಿಲ್ಲ,” ಎಂದು ಭಾರತಕ್ಕೆ ಅಮೆರಿಕದ ನಿಯೋಜಿತ ರಾಯಭಾರಿಯಾಗಿರುವ ಸೆರ್ಗಿಯೋ ಗೋರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಮುಂದಿನ ಹಂತದ ವ್ಯಾಪಾರ ಒಪ್ಪಂದದ ಮಾತುಕತೆಗಳು ಮಂಗಳವಾರದಿಂದ (ಜನವರಿ 13) ಪುನರಾರಂಭಗೊಳ್ಳಲಿವೆ ಎಂದು ಅವರು ಪ್ರಕಟಿಸಿದ್ದಾರೆ.
ಅಮೆರಿಕದ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ವರ್ಷದ ವೇಳೆಗೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂಬ ಮಹತ್ವದ ಸುಳಿವು ನೀಡಿದ್ದಾರೆ.
ನರೇಂದ್ರ ಮೋದಿ – ಟ್ರಂಪ್ ನಡುವೆ ‘ನಿಜವಾದ ಸ್ನೇಹ’
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸ್ನೇಹವು ಕೇವಲ ರಾಜತಾಂತ್ರಿಕವಲ್ಲ, ಅದು “ನಿಜವಾದ ಸ್ನೇಹ” ಎಂದು ಗೋರ್ ಬಣ್ಣಿಸಿದ್ದಾರೆ. “ನಿಜವಾದ ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅವರು ಅಂತಿಮವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ (ಅಮೆರಿಕ) ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವದ (ಭಾರತ) ನಡುವಿನ ಸಂಬಂಧವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವುದು ನನ್ನ ಗುರಿ ಎಂದು ಅವರು ಹೇಳಿದರು.
ವ್ಯಾಪಾರ ಮತ್ತು ಭದ್ರತೆ ಕುರಿತು ಚರ್ಚೆ
ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಿದ ಅವರು, “ಭಾರತವು ವಿಶ್ವದ ಅತಿದೊಡ್ಡ ರಾಷ್ಟ್ರವಾಗಿದೆ, ಹೀಗಾಗಿ ಒಪ್ಪಂದವನ್ನು ಅಂತಿಮ ಹಂತಕ್ಕೆ ತರುವುದು ಸುಲಭದ ಕೆಲಸವಲ್ಲ. ಆದರೆ ನಾವು ಇದನ್ನು ಪೂರ್ಣಗೊಳಿಸಲು ಬದ್ಧರಾಗಿದ್ದೇವೆ. ವ್ಯಾಪಾರದ ಜೊತೆಗೆ ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಎರಡೂ ದೇಶಗಳು ನಿಕಟವಾಗಿ ಕೆಲಸ ಮಾಡುತ್ತಿವೆ,” ಎಂದರು.
ಪ್ಯಾಕ್ಸ್ ಸಿಲಿಕಾ ಮೈತ್ರಿಕೂಟ
ಭಾರತವು ‘ಪ್ಯಾಕ್ಸ್ ಸಿಲಿಕಾ’ (Pax Silica) ಮೈತ್ರಿಕೂಟದ ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರವಾಗಿ ಮುಂದಿನ ತಿಂಗಳು ಸೇರ್ಪಡೆಯಾಗಲಿದೆ ಎಂದು ಗೋರ್ ಘೋಷಿಸಿದ್ದಾರೆ.
“ಮುಂದಿನ ತಿಂಗಳು ಈ ರಾಷ್ಟ್ರಗಳ ಗುಂಪಿಗೆ ಪೂರ್ಣ ಸದಸ್ಯರಾಗಿ ಸೇರಲು ಭಾರತವನ್ನು ಆಹ್ವಾನಿಸಲಾಗುವುದು ಎಂದು ಘೋಷಿಸಲು ನನಗೆ ಸಂತೋಷವಾಗಿದೆ” ಎಂದು ಅವರು ಹೇಳಿದರು.
ಪ್ಯಾಕ್ಸ್ ಸಿಲಿಕಾ ಅಂದರೆ ಇದು ಸುರಕ್ಷಿತ ಮತ್ತು ಸ್ಥಿತಿಸ್ಥಾಪಕ ಸಿಲಿಕಾನ್ ಪೂರೈಕೆ ಸರಪಳಿಯನ್ನು (Silicon Supply Chain) ನಿರ್ಮಿಸಲು ಅಮೆರಿಕ ನೇತೃತ್ವದಲ್ಲಿ ರೂಪಿಸಲಾದ ಕಾರ್ಯತಂತ್ರದ ಮೈತ್ರಿಕೂಟವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ