ವೀಡಿಯೊ..| ಕಚ್ಚಿದ ಹಾವನ್ನು ತೋರಿಸಲು ಜೀವಂತ ನಾಗರಹಾವನ್ನು ಜೇಬಿನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ಇ-ರಿಕ್ಷಾ ಚಾಲಕ..!

 ಮಥುರಾ : ಉತ್ತರ ಪ್ರದೇಶದ ಮಥುರಾದ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ  ಮಂಗಳವಾರ ವಿಚಿತ್ರ ಹಾಗೂ ಆತಂಕಕಾರಿ ಘಟನೆಯೊಂದು ನಡೆದಿದೆ. ಮಥುರಾ ಬೈಪಾಸ್ ನಿವಾಸಿ, ಇ-ರಿಕ್ಷಾ ಚಾಲಕ ದೀಪಕ ರಜಪೂತ್ ಎಂಬವರು ತಮ್ಮ ಜೇಬಿನಲ್ಲಿ ಜೀವಂತ ನಾಗರಹಾವನ್ನು ಇಟ್ಟುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು.
ತಮ್ಮ ಕೈಯಲ್ಲಿದ್ದ ಹಾವನ್ನು ವೈದ್ಯರಿಗೆ ತೋರಿಸುತ್ತಾ, “ಡಾಕ್ಟರೇ, ದಯವಿಟ್ಟು ನನಗೆ ಚಿಕಿತ್ಸೆ ನೀಡಿ, ಇದು ನನ್ನನ್ನು ಕಚ್ಚಿದೆ” ಎಂದು ಅವರು ಮನವಿ ಮಾಡಿದರು. ಇದನ್ನು ನೋಡಿ ವೈದ್ಯರು ಮತ್ತು ರೋಗಿಗಳು ಭಯಭೀತರಾದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಬಂದು ಹಾವನ್ನು ಸುರಕ್ಷಿತವಾಗಿ ಡಬ್ಬಿಯಲ್ಲಿ ಹಾಕಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಏನಿದು ಘಟನೆ?
ಪೊಲೀಸರ ಮಾಹಿತಿಯಂತೆ, ದೀಪಕ್ ತಮ್ಮ ಇ-ರಿಕ್ಷಾಗೆ ಬ್ಯಾಟರಿ ತರಲು ಬೃಂದಾವನಕ್ಕೆ ಹೋಗುತ್ತಿದ್ದಾಗ ಹಾವೊಂದು ರಿಕ್ಷಾ ಹತ್ತಿ ಅವರ ಬೆರಳಿಗೆ ಕಚ್ಚಿದೆ. ತಕ್ಷಣ ಹಾವನ್ನು ಹಿಡಿದ ದೀಪಕ ಅವರು, ತನಗೆ ಕಚ್ಚಿದ್ದು ಯಾವ ಜಾತಿಯ ಹಾವು ಎಂದು ವೈದ್ಯರಿಗೆ ತೋರಿಸಿದರೆ ಮಾತ್ರ ಸರಿಯಾದ ಚಿಕಿತ್ಸೆ ಸಿಗುತ್ತದೆ ಎಂಬ ನಂಬಿಕೆಯಿಂದ ಅದನ್ನು ಆಸ್ಪತ್ರೆಗೆ ತಂದಿದ್ದರು. ಅವರಿಗೆ ಕಚ್ಚಿದ ಹಾವಿನ ಬಗ್ಗೆ ಕೇಳಿದಾಗ, ಅವರು ತಮ್ಮ ಜಾಕೆಟ್ ಜೇಬಿನಿಂದ ನಾಗರ ಹಾವನ್ನು ಹೊರತೆಗೆದು ಮತ್ತೆ ಹಾಕಿದ್ದು ವೀಡಿಯೊದಲ್ಲಿ ಕಂಡುಬಂದಿದೆ.

ಚಾಲಕನ ಸ್ಪಷ್ಟನೆ:

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’
“ನನಗೆ ಬಾಲ್ಯದಲ್ಲಿ ಅನೇಕ ಬಾರಿ ಹಾವು ಮತ್ತು ಚೇಳುಗಳು ಕಚ್ಚಿವೆ, ಆದರೆ ವಿಷ ಏರುತ್ತಿರಲಿಲ್ಲ. ಆದರೂ ಇದು ಯಾವ ಹಾವು ಎಂದು ತಿಳಿಯದೆ ವೈದ್ಯರು ಚಿಕಿತ್ಸೆ ನೀಡುವುದು ಹೇಗೆ? ಅದಕ್ಕಾಗಿಯೇ ಹಾವನ್ನು ಹಿಡಿದುಕೊಂಡು ಬಂದೆ,” ಎಂದು ದೀಪಕ ಹೇಳಿದ್ದಾರೆ. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಬಹುದೆಂಬ ಭಯದಿಂದ ರಿಕ್ಷಾವನ್ನು ಅಲ್ಲಿಯೇ ಬಿಟ್ಟು ಬೇಗನೆ ಆಸ್ಪತ್ರೆಗೆ ಧಾವಿಸಿದ್ದಾಗಿ ಅವರು ತಿಳಿಸಿದ್ದಾರೆ.
ತುರ್ತು ಚಿಕಿತ್ಸಾ ಘಟಕದ ವೈದ್ಯರಾದ ಡಾ. ಸುಶೀಲಕುಮಾರ ಅವರು, ದೀಪಕ ಅವರಿಗೆ ಚಿಕಿತ್ಸೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ದೀಪಕ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement