ಬಿಜ್ನೋರ್ : ನಂಬಿಕೆ ಮತ್ತು ವಿಜ್ಞಾನದ ನಡುವಿನ ಚರ್ಚೆಗೆ ವೇದಿಕೆಯೊದಗಿಸುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗಿನಾ ಎಂಬಲ್ಲಿ ನಡೆದಿದೆ. ಇಲ್ಲಿನ ಹನುಮಂತನ ಮೂರ್ತಿಯೊಂದರ ಸುತ್ತ ನಾಯಿಯೊಂದು ಸತತ 36 ಗಂಟೆಗಳ ಕಾಲ ಪ್ರದಕ್ಷಿಣೆ ಹಾಕಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಸ್ಥಳೀಯರ ಪ್ರಕಾರ, ಈ ನಾಯಿಯು ದಣಿವಿಲ್ಲದೆ ಹನುಮಂತನ ವಿಗ್ರಹದ ಸುತ್ತಲೂ ಸುತ್ತುತ್ತಿತ್ತು. ಮಧ್ಯೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದನ್ನು ಹೊರತುಪಡಿಸಿದರೆ, ಉಳಿದಂತೆ ನಿರಂತರವಾಗಿ ಪ್ರದಕ್ಷಿಣೆ ಹಾಕುತ್ತಲೇ ಇತ್ತು.
ಇದನ್ನು ಕಂಡ ಗ್ರಾಮಸ್ಥರು ಇದೊಂದು “ದೈವಿಕ ಪವಾಡ” (ಚಮತ್ಕಾರ) ಎಂದು ನಂಬಿ, ನಾಯಿಯನ್ನು ನೋಡಲು ಮತ್ತು ಪ್ರಾರ್ಥಿಸಲು ತಂಡೋಪತಂಡವಾಗಿ ಆಗಮಿಸಿದರು.
ಕೆಲವರು ಇದು ಆಂಜನೇಯನ ಮೇಲಿನ ಭಕ್ತಿ ಅಥವಾ ದೈವಿಕ ಶಕ್ತಿಯ ಪ್ರಭಾವ ಎಂದು ಬಣ್ಣಿಸಿದ್ದಾರೆ.
ಪ್ರಾಣಿ ಪ್ರೇಮಿಗಳು ಮತ್ತು ವೈಜ್ಞಾನಿಕ ಮನೋಭಾವದವರು “ನಾಯಿ ಅನಾರೋಗ್ಯದಿಂದ ಬಳಲುತ್ತಿರಬಹುದು. ಅದಕ್ಕೆ ತಕ್ಷಣ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ವಿಶ್ಲೇಷಣೆ ಏನು ಹೇಳುತ್ತದೆ?
ಈ ಕುರಿತು ತಾಂತ್ರಿಕ ಮತ್ತು ವೈದ್ಯಕೀಯ ಹಿನ್ನೆಲೆಯನ್ನು ಪರಿಶೀಲಿಸಿದಾಗ, ನಾಯಿಯ ಈ ನಡವಳಿಕೆಗೆ ‘ಕ್ಯಾನೈನ್ ಕಾಗ್ನಿಟಿವ್ ಡಿಸ್ಫಂಕ್ಷನ್ ಸಿಂಡ್ರೋಮ್’ (CDS) ಅಥವಾ ನಾಯಿಗಳಲ್ಲಿ ಕಂಡುಬರುವ ಮರೆಗುಳಿತನ (Dementia) ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.
ತಜ್ಞರ ಪ್ರಕಾರ ಸಾಧ್ಯತೆಗಳು:
ತಜ್ಞರ ಪ್ರಕಾರ, ಮನುಷ್ಯರಲ್ಲಿ ಅಲ್ಝೈಮರ್ಸ್ ಹೇಗೋ, ಹಾಗೆಯೇ ವಯಸ್ಸಾದ ನಾಯಿಗಳಲ್ಲಿ ಮೆದುಳಿನ ಬದಲಾವಣೆಯಿಂದಾಗಿ ಇಂತಹ ಪುನರಾವರ್ತಿತ ನಡವಳಿಕೆಗಳು ಕಂಡುಬರುತ್ತವೆ. ವೆಸ್ಟಿಬುಲರ್ ಕಾಯಿಲೆ ಅಥವಾ ನರವ್ಯೂಹದ ಅಸ್ವಸ್ಥತೆಯಿಂದಾಗಿ ಪ್ರಾಣಿಗಳು ದಾರಿ ತಿಳಿಯದೆ ಒಂದೇ ಕಡೆ ಸುತ್ತಬಹುದು.
ನಾಯಿಗಳಲ್ಲಿ ರೇಬೀಸ್ ಸೋಂಕು ಇದ್ದಾಗಲೂ ಅವು ವಿಚಿತ್ರವಾಗಿ ವರ್ತಿಸುತ್ತವೆ ಮತ್ತು ಆಹಾರ-ನೀರನ್ನು ನಿರಾಕರಿಸುತ್ತವೆ.
“ನಾಯಿಗೆ ಸಂಕಟವಿರಬಹುದು. ಇಂತಹ ಸಂದರ್ಭಗಳಲ್ಲಿ ಜನ ಗುಂಪು ಸೇರಿ ಪ್ರಾಣಿಯನ್ನು ಮತ್ತಷ್ಟು ಆತಂಕಕ್ಕೆ ತಳ್ಳುವ ಬದಲು ಪಶುವೈದ್ಯರ ಬಳಿ ಕರೆದೊಯ್ಯುವುದು ಸೂಕ್ತ,” ಎಂದು ಪ್ರಾಣಿ ಕಲ್ಯಾಣ ಸಂಘಟನೆಗಳು ಮನವಿ ಮಾಡಿವೆ.


ನಿಮ್ಮ ಕಾಮೆಂಟ್ ಬರೆಯಿರಿ