ನವದೆಹಲಿ: ಕಳೆದ ವರ್ಷ ಪಾಕಿಸ್ತಾನದ ಗಡಿ ದಾಟಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ರೋಚಕ ದೃಶ್ಯಗಳನ್ನು ಸೇನಾ ದಿನಾಚರಣೆಯ (Army Day) ಸಂದರ್ಭದಲ್ಲಿ ಗುರುವಾರ ಬಿಡುಗಡೆ ಮಾಡಲಾಗಿದೆ. ಶತ್ರು ರಾಷ್ಟ್ರದ ರಾಡಾರ್ ವ್ಯವಸ್ಥೆ ಹಾಗೂ ವಾಯುನೆಲೆಗಳನ್ನು ಧ್ವಂಸಗೊಳಿಸಿದ ದೃಶ್ಯಗಳು ಈ ವೀಡಿಯೊದಲ್ಲಿವೆ.
ಸುಮಾರು ಮೂರು ನಿಮಿಷಗಳ ಕಾಲ ಇರುವ ಈ ವೀಡಿಯೊದಲ್ಲಿ, ಭಾರತದ ಮೇಲೆ ನಡೆದ ಪ್ರಮುಖ ಮೂರು ನಿಮಿಷಗಳ ವೀಡಿಯೊವು 2001 ರಲ್ಲಿ ಸಂಸತ್ತಿನ ಮೇಲಿನ ದಾಳಿ, 2002 ರಲ್ಲಿ ಅಕ್ಷರಧಾಮ ದೇವಾಲಯ, 2008 ರಲ್ಲಿ ಮುಂಬೈ, 2016 ರಲ್ಲಿ ಉರಿ, 2019 ರಲ್ಲಿ ಪುಲ್ವಾಮಾ ಮತ್ತು 2025 ರಲ್ಲಿ ಪಹಲ್ಗಾಮ್ ಸೇರಿದಂತೆ ಪ್ರಮುಖ ಭಯೋತ್ಪಾದಕ ಘಟನೆಗಳನ್ನು ಪಟ್ಟಿ ಮಾಡುವ ಮೂಲಕ ಪ್ರಾರಂಭವಾಗುತ್ತದೆ.
ಸೇನೆಯು ಈ ಘಟನೆಗಳನ್ನು “ಮಾನವೀಯತೆಯ ಮೇಲಿನ ದಾಳಿಗಳು” ಎಂದು
ಬಣ್ಣಿಸಿದೆ. ಇದಕ್ಕೆ ಉತ್ತರವಾಗಿ ಮೇ 7, 2025ರಂದು ಮಧ್ಯರಾತ್ರಿ ಭಾರತೀಯ ಪಡೆಗಳು 9 ಉಗ್ರಗಾಮಿ ನೆಲೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದವು.
ಪಾಕಿಸ್ತಾನವನ್ನು ಹೆಸರಿಸದೆ, ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳ ಬಳಿ ಪಾಕಿಸ್ತಾನ ನಡೆಸಿದ ಭಾರೀ ಶೆಲ್ ದಾಳಿಯ ನಂತರದ ಪರಿಣಾಮಗಳನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಡ್ರೋನ್‌ಗಳನ್ನು ಹೊಡೆದುರುಳಿಸುವ ಮೂಲಕ ಮತ್ತು ಮಿಲಿಟರಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಪಡೆಗಳು ಪ್ರತೀಕಾರ ತೀರಿಸಿಕೊಳ್ಳುವುದನ್ನು ಸಹ ಇದು ತೋರಿಸಿದೆ.
ಕಾರ್ಯಾಚರಣೆಯ ಮುಖ್ಯಾಂಶಗಳು:
ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ವಾಯುನೆಲೆಗಳು ಮತ್ತು ಅಲ್ಲಿನ ವಾಯು ರಕ್ಷಣಾ ರಾಡಾರ್ ವ್ಯವಸ್ಥೆಗಳನ್ನು ಭಾರತೀಯ ಸೇನೆ ನಿಖರವಾಗಿ ಗುರಿಯಾಗಿಸಿ ಹೊಡೆದುರುಳಿಸಿದೆ.
ಗಡಿ ಭಾಗದಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಪಡೆಗಳು, ಶತ್ರುಗಳ ಡ್ರೋನ್‌ಗಳನ್ನು ಹೊಡೆದುರುಳಿಸಿ ಅವರ ಮಿಲಿಟರಿ ಪೋಸ್ಟ್‌ಗಳನ್ನು ಧ್ವಂಸಗೊಳಿಸಿವೆ.
“ಇದು ನಮ್ಮ ಶತ್ರುಗಳಿಗೆ ಎಚ್ಚರಿಕೆ. ಅವರ ಹೇಡಿತನದ ಕೃತ್ಯಕ್ಕೆ ಅವರು ಬೆಲೆ ತೆರಲೇಬೇಕು” ಎಂಬ ಸಂದೇಶದೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.
ಆಪರೇಷನ್ ಸಿಂಧೂರ….
2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಧರ್ಮ ಕೇಳಿ 26 ಜನರನ್ನು ಹತ್ಯೆ ಮಾಡಿದ್ದ ಈ ಕೃತ್ಯದ ವಿರುದ್ಧ ಇಡೀ ದೇಶ ಆಕ್ರೋಶ ವ್ಯಕ್ತಪಡಿಸಿತ್ತು. ಕೋಮು ಸಂಘರ್ಷ ಉಂಟುಮಾಡುವ ಸಂಚಿನೊಂದಿಗೆ ನಡೆದ ಈ ದಾಳಿಗೆ ಪ್ರತಿಯಾಗಿ ಭಾರತ ಸರಕಾರವು ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಹಮ್ಮಿಕೊಂಡಿತು. ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನು ಸದೆಬಡಿಯಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ