5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸುವ ಈ ‘ಗೂಗಲ್ ಗೋಲ್ಡನ್ ಬಾಬಾ’…!

ಪ್ರಯಾಗರಾಜ: ಇಲ್ಲಿನ ಪವಿತ್ರ ಸಂಗಮ ತೀರದಲ್ಲಿ ನಡೆಯುತ್ತಿರುವ ವಾರ್ಷಿಕ ಮಾಘ ಮೇಳವು ಈ ಬಾರಿ ವಿಶೇಷ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಸಾಂಪ್ರದಾಯಿಕ ಸಾಧು-ಸಂತರ ನಡುವೆ, ಮೈತುಂಬಾ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿರುವ “ಗೂಗಲ್ ಗೋಲ್ಡನ್ ಬಾಬಾ” ಭಕ್ತರ ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದ್ದಾರೆ.
ಮೂಲತಃ ಕಾನ್ಪುರದವರಾದ ಮನೋಜಆನಂದ ಮಹಾರಾಜ ಅವರೇ  ಗೋಲ್ಡನ್ ಬಾಬಾ ಹೆಸರಿನಿಂದಲೂ ಕರೆಯಲ್ಪಡುತ್ತಾರೆ. ಇವರು ಧರಿಸಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಅಂದಾಜು ಮೊತ್ತ ಸುಮಾರು 5 ಕೋಟಿ ರೂಪಾಯಿ. ತಲೆಯಿಂದ ಪಾದದವರೆಗೆ ಇವರು ಆಭರಣಗಳಿಂದಲೇ ಅಲಂಕೃತರಾಗುತ್ತಾರೆ. ಭಾರೀ ತೂಕದ ಚಿನ್ನದ ಸರಗಳು, ಬಳೆಗಳು ಮತ್ತು ದೇವ ದೇವತೆಗಳ ಚಿತ್ರ ಕೆತ್ತಿರುವ ಉಂಗುರಗಳು ಅವರ ಮೈಮೇಲಿರುತ್ತವೆ.
ಅಲ್ಲದೆ, ಚಿನ್ನದ ಲೇಪನವಿರುವ ರುದ್ರಾಕ್ಷಿ ಮಾಲೆಗಳು, ಕುತ್ತಿಗೆಯಲ್ಲಿ ಸದಾ ತೂಗಾಡುವ ಬೆಳ್ಳಿಯ ಶಂಖ ಧರಿಸುತ್ತಾರೆ. ಊಟ ಮತ್ತು ನೀರಿಗಾಗಿ ಬೆಳ್ಳಿಯ ಪಾತ್ರೆಗಳನ್ನೇ ಇವರು ಬಳಸುತ್ತಾರೆ.
ಯೋಗಿ ಆದಿತ್ಯನಾಥ ಪ್ರಧಾನಿಯಾಗುವವರೆಗೆ ಪಾದರಕ್ಷೆ ತ್ಯಾಗ…
ಬಾಬಾ ಅವರ ಈ ವೈಭವದ ನಡುವೆ ಒಂದು ವಿಚಿತ್ರ ಹರಕೆಯೂ ಇದೆ. ಹಿಂದೆ ಇವರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿಯ ಪಾದರಕ್ಷೆಗಳನ್ನು ಧರಿಸುತ್ತಿದ್ದರು. ಆದರೆ, ಈಗ ಅದನ್ನು ತ್ಯಜಿಸಿ ಬರಿಗಾಲಿನಲ್ಲಿ ನಡೆಯುತ್ತಿದ್ದಾರೆ. “ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದೇಶದ ಪ್ರಧಾನಿಯಾಗುವವರೆಗೆ ನಾನು ಚಪ್ಪಲಿ ಧರಿಸುವುದಿಲ್ಲ” ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ. ಇವರ ತಲೆಯ ಮೇಲಿರುವ ಬೆಳ್ಳಿಯ ಕಿರೀಟದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಭಾವಚಿತ್ರವೂ ಇದೆಯಂತೆ.
ಭಕ್ತರ ದಂಡು ಮತ್ತು ಸೆಲ್ಫಿ ಕ್ರೇಜ್
ಸಾಮಾನ್ಯವಾಗಿ ಸಾಧು ಎಂದರೆ ವೈರಾಗ್ಯ ಮತ್ತು ಸರಳತೆಯ ಸಂಕೇತ. ಆದರೆ ಅದಕ್ಕೆ ವ್ಯತಿರಿಕ್ತವಾಗಿರುವ ಗೋಲ್ಡನ್ ಬಾಬಾ ಅವರ ಈ ಐಷಾರಾಮಿ ಶೈಲಿಯನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ಅವರ ವಿಭಿನ್ನ ವೇಷಭೂಷಣವನ್ನು ಕಣ್ಣಾರೆ ಸವಿಯಲು ದಿನವಿಡೀ ಭಕ್ತರ ದಂಡು ಅವರ ಬಿಡಾರದ ಮುಂದೆ ಸೇರುತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement