
ಇಂದೋರ್: ಕೈಯಲ್ಲಿ ಹರಿದ ಚೀಲ, ಕಾಲಿಗೆ ಚಪ್ಪಲಿ ಹಾಕುವ ಬದಲು ಕೈಗೆ ಹಾಕಿಕೊಂಡು, ಕಬ್ಬಿಣದ ಸಣ್ಣ ಗಾಡಿಯ ಮೇಲೆ ಕುಳಿತು ಜನರಲ್ಲಿ ಅನುಕಂಪ ಮೂಡಿಸುವ ಈ ವ್ಯಕ್ತಿಯನ್ನು ನೋಡಿದರೆ ಯಾರಿಗಾದರೂ ಅಯ್ಯೋ ಅನ್ನಿಸದೇ ಇರದು. ಆದರೆ, ಈತನ ನಿಜವಾದ ಮುಖವಾಡ ಕಳಚಿದಾಗ ಇಡೀ ಇಂದೋರ ನಗರವೇ ಬೆಚ್ಚಿಬಿದ್ದಿದೆ. ಏಕೆಂದರೆ, ಈತ ಸಾಮಾನ್ಯ ಭಿಕ್ಷುಕನಲ್ಲ, ಬದಲಿಗೆ ಮೂರು ಮನೆ, ಕಾರು ಮತ್ತು ಆಟೋರಿಕ್ಷಾಗಳ ಒಡೆಯನಾದ ಈತ ಒಬ್ಬ ಕೋಟ್ಯಧಿಪತಿ..!
ಇಂದೋರಿನ ಪ್ರಸಿದ್ಧ ಸರಫಾ ಬಜಾರ್‌ನಲ್ಲಿ ಮಂಗಿಲಾಲ ಎಂಬ ಈ ವ್ಯಕ್ತಿ ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ. ಈತ ಯಾರನ್ನೂ ಹಣ ಕೇಳುತ್ತಿರಲಿಲ್ಲ, ಆದರೆ ಈತನ ದೈಹಿಕ ಸ್ಥಿತಿ ನೋಡಿ ಜನರೇ ಹಣ ನೀಡುತ್ತಿದ್ದರು. ದಿನವೊಂದಕ್ಕೆ ಕನಿಷ್ಠ 500 ರೂಪಾಯಿ ಹಣ ಈತನಿಗೆ ಭಿಕ್ಷೆಯ ರೂಪದಲ್ಲಿ ಬರುತ್ತಿತ್ತು. ಆದರೆ, ಅಸಲಿ ಆಟ ಶುರುವಾಗಿದ್ದೇ ಇಲ್ಲಿಂದ. ಭಿಕ್ಷೆ ಬೇಡಿ ಬಂದ ಹಣವನ್ನೇ ಈತ ಅದೇ ಮಾರುಕಟ್ಟೆಯ ವರ್ತಕರಿಗೆ ಹೆಚ್ಚಿನ ಬಡ್ಡಿಗೆ ಸಾಲವಾಗಿ ನೀಡುತ್ತಿದ್ದ…!
ತನಿಖೆಯಲ್ಲಿ ಬಯಲಾದ ಆಸ್ತಿಯ ವಿವರಗಳು:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‘ಭಿಕ್ಷುಕ ಮುಕ್ತ ನಗರ’ ಅಭಿಯಾನದ ವೇಳೆ ಮಂಗಿಲಾಲ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ ಅಧಿಕಾರಿಗಳೇ ದಂಗಾಗುವಂತಹ ಮಾಹಿತಿ ಹೊರಬಂದಿದೆ:
ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂರು ಮನೆಗಳಿದ್ದು, ಅದರಲ್ಲಿ ಒಂದು ಮೂರು ಅಂತಸ್ತಿನ ಕಟ್ಟಡವಾಗಿದೆ. ತಾನು ಅಂಗವಿಕಲ ಎಂದು ಸುಳ್ಳು ಮಾಹಿತಿ ನೀಡಿ ಸರ್ಕಾರದ ಯೋಜನೆಯಡಿ ಒಂದು ಮನೆಯನ್ನೂ ಪಡೆದಿದ್ದಾನೆ. ಈತನ ಬಳಿ ಒಂದು ಮಾರುತಿ ಸುಜುಕಿ ಡಿಜೈರ್ ಕಾರು ಮತ್ತು ಮೂರು ಆಟೋ ರಿಕ್ಷಾಗಳಿವೆ. ಇವುಗಳನ್ನು ಆತ ಬಾಡಿಗೆಗೆ ಬಿಟ್ಟಿದ್ದಾನೆ.
ಸುಮಾರು 4 ರಿಂದ 5 ಲಕ್ಷ ರೂಪಾಯಿಗಳನ್ನು ಸ್ಥಳೀಯ ವರ್ತಕರಿಗೆ ಸಾಲವಾಗಿ ನೀಡಿದ್ದು, ದಿನಕ್ಕೆ 1,000 ರಿಂದ 2,000 ರೂಪಾಯಿ ಬಡ್ಡಿಯನ್ನೇ ವಸೂಲಿ ಮಾಡುತ್ತಿದ್ದ.
ಪಿತೂರಿ ಬಯಲಾಗಿದ್ದು ಹೇಗೆ?
ಇಂದೋರ್ ನಗರವನ್ನು ಭಿಕ್ಷುಕ ಮುಕ್ತಗೊಳಿಸುವ ಉದ್ದೇಶದಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಶನಿವಾರ ತಡರಾತ್ರಿ ಮಂಗಿಲಾಲನ ಈ ವಿಷಯ ಹೊರಬಿತ್ತು. ಈತ ಕುಷ್ಠರೋಗಿ ಎಂದು ಭಾವಿಸಿದ್ದ ತಂಡಕ್ಕೆ, ವಿಚಾರಣೆ ನಡೆಸಿದಾಗ ಆತನ ಆರ್ಥಿಕ ಸಾಮ್ರಾಜ್ಯದ ಅರಿವಾಯಿತು. ಸದ್ಯ ಮಂಗಿಲಾಲನನ್ನು ಉಜ್ಜಯಿನಿಯ ಸೇವಾಧಾಮ ಆಶ್ರಮಕ್ಕೆ ಕಳುಹಿಸಲಾಗಿದೆ.
ವರ್ಷಗಳ ಕಾಲ, ಮಂಗಿಲಾಲ ಮೌನವಾಗಿ ಭಿಕ್ಷೆ ಬೇಡವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಈತ ಎಂದಿಗೂ ಯಾರ ಬಳಯೂ ಕೇಳಲಿಲ್ಲ. ಈತ ತನ್ನ ಕಬ್ಬಿಣದ ಬಂಡಿಯ ಮೇಲೆ ಕುಳಿತಿರುತ್ತಿದ್ದ. ಈತನನ್ನು ನೋಡಿದ ಜನ ಅನುಕಂಪದಿಂದ ಸ್ವಇಚ್ಛೆಯಿಂದ ಹಣ ನೀಡುತ್ತಿದ್ದರು. ಭಿಕ್ಷೆಯಿಂದ ದೈನಂದಿನ ಗಳಿಕೆ 400 ರಿಂದ ರೂ. 500 ರವರೆಗೆ ಇತ್ತು. ಆದರೆ ಈತನ ನಿಜವಾದ ವ್ಯವಹಾರ, ಕತ್ತಲಾದ ನಂತರ ಪ್ರಾರಂಭವಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.
ವಿಚಾರಣೆಯ ಸಮಯದಲ್ಲಿ, ಭಿಕ್ಷಾಟನೆಯಿಂದ ಸಂಗ್ರಹಿಸಿದ ಹಣವನ್ನು ಬದುಕುಳಿಯಲು ಖರ್ಚು ಮಾಡುತ್ತಿರಲಿಲ್ಲ, ಬದಲಿಗೆ ಮಂಗಿಲಾಲ ತಾನು ಭಿಕ್ಷೆ ಬೇಡಿ ಬಂದ ಹಣವನ್ನು ಸ್ಥಳೀಯ ವರ್ತಕರಿಗೆ ಬಡ್ಡಿಗೆ ನೀಡುತ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ. ಈತ ಒಂದು ದಿನದ ಬಡ್ಡಿಗೆ ಅಥವಾ ಒಂದು ವಾರದ ಬಡ್ಡಿಗೆ ಸ್ಥಳೀಯ ವ್ಯಾಪಾರಿಗಳಿಗೆ ಹಣವನ್ನು ಸಾಲವಾಗಿ ನೀಡುತ್ತಿದ್ದ. ಪ್ರತಿದಿನ ಸಂಜೆ ವೈಯಕ್ತಿಕವಾಗಿ ಬಡ್ಡಿಯನ್ನು ಸಂಗ್ರಹಿಸುತ್ತಿದ್ದ. ಅಧಿಕಾರಿಗಳ ಅಂದಾಜಿನ ಪ್ರಕಾರ ಈತ 4-5 ಲಕ್ಷ ರೂ.ಗಳನ್ನು ಸಾಲವಾಗಿ ನೀಡಿದ್ದಾನೆ, ಬಡ್ಡಿ ಸೇರಿದಂತೆ ದಿನಕ್ಕೆ 1,000 ರಿಂದ 2,000 ರೂ.ಗಳನ್ನು ಗಳಿಸುತ್ತಿದ್ದಾನೆ. ಆತನ ಬ್ಯಾಂಕ್ ಖಾತೆ ಮತ್ತು ಆಸ್ತಿಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಯಾರು ನಿಜವಾಗಿಯೂ ಬಡವರು ಎಂದು ಗುರುತಿಸುವುದು ಕಷ್ಟ ಎನ್ನುವುದಕ್ಕೆ ಮಂಗಿಲಾಲ ಒಂದು ದೊಡ್ಡ ಉದಾಹರಣೆ. ಜನರ ಅನುಕಂಪವನ್ನೇ ಬಂಡವಾಳ ಮಾಡಿಕೊಂಡ ಈ ‘ಕೋಟ್ಯಧಿಪತಿ ಭಿಕ್ಷುಕ’ನ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ