ಚಂದ್ರನ ಮೇಲೆ ಹೊಟೇಲ್‌ ವಾಸ್ತವ್ಯಕ್ಕೆ ಸಿದ್ಧರಾಗಿ ; ಬುಕಿಂಗ್ ಆರಂಭ ; ಉಳಿಯಲು 9 ಕೋಟಿ ರೂ., ಪ್ರವಾಸದ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ…!

 ಸಿಲಿಕಾನ್ ವ್ಯಾಲಿ (ಅಮೆರಿಕ) : ಮನುಷ್ಯ ಭೂಮಿಯನ್ನು ಬಿಟ್ಟು ಬಾಹ್ಯಾಕಾಶದಲ್ಲಿ ನೆಲೆಸುವ ಕನಸು ಈಗ ನನಸಾಗುವ ಹಾದಿಯಲ್ಲಿದೆ. ಅಮೆರಿಕ ಮೂಲದ ಸ್ಟಾರ್ಟ್‌ಅಪ್ ಕಂಪನಿಯೊಂದು ಚಂದ್ರನ ಮೇಲೆ ಐಷಾರಾಮಿ ಹೋಟೆಲ್ ನಿರ್ಮಿಸಲು ಮುಂದಾಗಿದ್ದು, ಈಗಿನಿಂದಲೇ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.
ಬಾಹ್ಯಾಕಾಶ ಪ್ರಿಯರಿಗಾಗಿ ಈ ಸ್ಟಾರ್ಟ್‌ಅಪ್ ಕಂಪನಿಯು ಚಂದ್ರನ ಮೇಲೆ ವಾಸ್ತವ್ಯ ಹೂಡಲು ಅವಕಾಶ ನೀಡುತ್ತಿದೆ. ಒಬ್ಬ ಅತಿಥಿಗೆ 2.2 ಕೋಟಿ ರೂ. ($250,000) ನಿಂದ 9 ಕೋಟಿ ರೂ. ($1 ಮಿಲಿಯನ್) ವರೆಗೆ ಮುಂಗಡ ಹಣ ನಿಗದಿಪಡಿಸಲಾಗಿದೆ. ಇಡೀ ಪ್ರವಾಸದ ಅಂತಿಮ ವೆಚ್ಚ ಬರೋಬ್ಬರಿ 90 ಕೋಟಿ ರೂಪಾಯಿ ($10 ಮಿಲಿಯನ್) ದಾಟುವ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ.
ಜಿಆರ್‌ಯು (GRU) ಸ್ಪೇಸ್ ಮತ್ತು ಅದರ ಗುರಿ
‘ಗ್ಯಾಲಕ್ಟಿಕ್ ರಿಸೋರ್ಸ್ ಯುಟಿಲೈಸೇಶನ್ ಸ್ಪೇಸ್’ (GRU Space) ಎಂಬ ಸಿಲಿಕಾನ್ ವ್ಯಾಲಿ ಮೂಲದ ಈ ಕಂಪನಿಯನ್ನು 22 ವರ್ಷದ ಯುವ ಉದ್ಯಮಿ ಸ್ಕೈಲರ್ ಚಾನ್ ಸ್ಥಾಪಿಸಿದ್ದಾರೆ. 2032ರ ವೇಳೆಗೆ ಚಂದ್ರನ ಮೇಲ್ಮೈನಲ್ಲಿ ಮಾನವ ವಸಾಹತು ನಿರ್ಮಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. “ಇದು ಕೇವಲ ಬಾಹ್ಯಾಕಾಶ ಪ್ರವಾಸೋದ್ಯಮವಲ್ಲ; ಭೂಮಿಯನ್ನು ಮೀರಿ ಮಾನವ ಸಂಕುಲ ಬೆಳೆಯಲು ಹಾಕುತ್ತಿರುವ ಅಡಿಪಾಯ” ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
“ನಮಗೆ ತಿಳಿದಿರುವಂತೆ ಇದು ಬಾಹ್ಯಾಕಾಶ ಪ್ರವಾಸೋದ್ಯಮವಲ್ಲ. ಕೇವಲ ಹನ್ನೆರಡು ಮಾನವರು ಚಂದ್ರನ ಮೇಲೆ ನಡೆದಿದ್ದಾರೆ, ಮತ್ತು ಈ ಆರಂಭಿಕ ಹಂತದಲ್ಲಿ ಭಾಗವಹಿಸುವ ಮೂಲಕ, ಭೂಮಿಯಾಚೆಗಿನ ಜೀವನಕ್ಕೆ ನಾವು ಅಡಿಪಾಯ ಹಾಕುತ್ತಿರುವಾಗ ನೀವು ನಮ್ಮೊಂದಿಗೆ ಸೇರಿಕೊಳ್ಳಿ” ಎಂದು ಕಂಪನಿಯು ತನ್ನ ರಿಸರ್ವೇಶನ್‌ ವೆಬ್‌ಸೈಟ್‌(reservation website)ನಲ್ಲಿ ಹೇಳುತ್ತದೆ.
ಮುಂದಿನ ಹಂತಗಳೇನು?
ಆಸಕ್ತರು ಸಾವಿರ ಡಾಲರ್ (ಸುಮಾರು 83 ಸಾವಿರ ರೂ.) ಮರುಪಾವತಿಯಾಗದ ಅರ್ಜಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕು. ಗಗನಯಾನ ಮಾಡುವವರ ವೈದ್ಯಕೀಯ, ಆರ್ಥಿಕ ಮತ್ತು ಹಿನ್ನೆಲೆಯ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ.
2029ರಲ್ಲಿ ಕಂಪನಿಯ ಮೊದಲ ಉಪಕರಣಗಳು ಚಂದ್ರನ ಮೇಲೆ ಇಳಿಯಲಿವೆ. ಚಂದ್ರನ ಮೇಲಿರುವ ಧೂಳನ್ನು ಇಟ್ಟಿಗೆಗಳನ್ನಾಗಿ ಪರಿವರ್ತಿಸಿ, ಅದರ ಮೂಲಕ ಹೋಟೆಲ್‌ಗೆ ರಕ್ಷಣಾ ಕವಚ ನಿರ್ಮಿಸುವ ತಂತ್ರಜ್ಞಾನವನ್ನು ಕಂಪನಿ ಬಳಸಲಿದೆ ಎಂದು ಅದು ಹೇಳಿಕೊಂಡಿದೆ. “ನಾವು ಕೇವಲ ಚಂದ್ರನತ್ತ ಗುರಿ ಇಟ್ಟಿಲ್ಲ, ಬದಲಿಗೆ ಚಂದ್ರನ ಆರ್ಥಿಕತೆಯನ್ನು ಸೃಷ್ಟಿಸಲು ಹೊರಟಿದ್ದೇವೆ,” ಎಂದು ಸಂಸ್ಥಾಪಕ ಸ್ಕೈಲರ್ ಚಾನ್ ಅಭಿಪ್ರಾಯಪಟ್ಟಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement