ಮಾಘ ಮೇಳ : 40 ವರ್ಷದಿಂದ ಮುಳ್ಳಿನ ಹಾಸಿಗೆ ಮೇಲೆ ಮಲಗುತ್ತಿರುವ ‘ಕಾಂಟೇ ವಾಲೆ ಬಾಬಾ’ ವೀಡಿಯೊ ವೈರಲ್

 ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಪವಿತ್ರ ಮಾಘ ಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ದಿನನಿತ್ಯ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. 2025ರ ಮಹಾಕುಂಭದಂತೆಯೇ ಈ ವರ್ಷವೂ ಜನಜಂಗುಳಿ ಕಂಡುಬರುತ್ತಿದೆ.
ಈ ನಡುವೆ, ಮೇಳದಲ್ಲಿರುವ ಒಬ್ಬರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರೇ ‘ಕಾಂಟೇ ವಾಲೆ ಬಾಬಾ’ ಎಂದೇ ಪ್ರಖ್ಯಾತರಾದ ರಮೇಶಕುಮಾರ ಮಾಂಝಿ.
ಬಿಹಾರದ ಕತಿಹಾರ್ ಮೂಲದವರಾದ ರಮೇಶಕುಮಾರ ಅವರು ಕಳೆದ 40 ವರ್ಷಗಳಿಂದ ಈ ಕಠಿಣ ವ್ರತವನ್ನು ಪಾಲಿಸುತ್ತಿದ್ದಾರೆ. ಹರಿತವಾದ ಮುಳ್ಳುಗಳ ಮೇಲೆ ಶಾಂತವಾಗಿ ಮಲಗುವ ಇವರು, ಜನರ ಸುಖ-ಶಾಂತಿಗಾಗಿ ಈ ರೀತಿ ಮಾಡುತ್ತಿರುವುದಾಗಿ ಹೇಳುತ್ತಾರೆ. ಕಳೆದ ವರ್ಷ ಮಹಾಕುಂಭದ ವೇಳೆ ಇವರ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.
ದಿನಚರಿ ಹೇಗಿರುತ್ತದೆ..?
ಕಾಂಟೆ ವಾಲಾ ಬಾಬಾ ಅವರು ತಾವೇ ಸಿದ್ಧಪಡಿಸಿದ ಮುಳ್ಳಿನ ಹಾಸಿಗೆಯ ಮೇಲೆ ಇವರು ಮಲಗಿರುತ್ತಾರೆ. ದಿನವಿಡೀ ಡಮರು ಬಾರಿಸುತ್ತಾ ಭಕ್ತರಿಗೆ ದರ್ಶನ ನೀಡುತ್ತಾರೆ. ಬರುವ ಕಾಣಿಕೆಯಲ್ಲಿ ಅರ್ಧ ಭಾಗವನ್ನು ದಾನಕ್ಕೆ ನೀಡಿ, ಉಳಿದಿದ್ದನ್ನು ತಮ್ಮ ಜೀವನೋಪಾಯಕ್ಕೆ ಬಳಸುತ್ತಾರೆ.
 ಮಹಾ ಕುಂಭಮೇಳದಲ್ಲಿ ಸಮಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದ ಕಾಂಟೆ ವಾಲೆ ಬಾಬಾ ಅವರು, ನಾನು ಗುರುವಿನ ಸೇವೆ ಮಾಡುತ್ತೇನೆ. ಗುರುಗಳು ನಮಗೆ ಜ್ಞಾನ ನೀಡಿದರು, ನಮಗೆ ಪೂರ್ಣ ಶಕ್ತಿಯನ್ನು ನೀಡಿದರು. ದೇವರ ಮಹಿಮೆಯೇ ನನಗೆ ಇದನ್ನೆಲ್ಲ ಮಾಡಲು ಸಹಾಯ ಮಾಡುತ್ತದೆ (ಮುಳ್ಳಿನ ಮೇಲೆ ಮಲಗುವುದು). ನಾನು ಕಳೆದ 40-50 ವರ್ಷಗಳಿಂದ ಪ್ರತಿ ವರ್ಷ ಈ ರೀತಿ ಮುಳ್ಳಿನ ಮೇಲೆ ಮಲಗುತ್ತೇನೆ. ಇದು ನನ್ನ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂಬುದಕ್ಕಾಗಿ ಇದನ್ನು ಮಾಡುತ್ತೇನೆ. ನಾನು ಪಡೆಯುವ ದಕ್ಷಿಣೆಯಲ್ಲಿ ಅರ್ಧವನ್ನು ದಾನ ಮಾಡುತ್ತೇನೆ ಮತ್ತು ಉಳಿದದ್ದನ್ನು ನನ್ನ ಖರ್ಚುಗಳಿಗೆ ಬಳಸುತ್ತೇನೆ ಎಂದು ಹೇಳಿದ್ದರು.
ಜನವರಿ 13ರಿಂದ ಆರಂಭವಾಗಿರುವ ಈ ಮಾಘ ಮೇಳವು ಫೆಬ್ರವರಿ 15ರವರೆಗೆ ನಡೆಯಲಿದೆ. ಮುಂಬರುವ ಪ್ರಮುಖ ಪುಣ್ಯಸ್ನಾನದ ದಿನಗಳು ಇಲ್ಲಿವೆ: ಜನವರಿ 23ರಂದು ಬಸಂತ ಪಂಚಮಿಯಿದ್ದು,  ಫೆಬ್ರವರಿ 1ರಂದು ಮಾಘಿ ಪೂರ್ಣಿಮಾ ಹಾಗೂ ಫೆಬ್ರವರಿ 15ರಂದು ಮಹಾಶಿವ ರಾತ್ರಿಯಂದು ಕೊನೆಯ ಪುಣ್ಯ ಸ್ನಾನವಿರುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement