ಸಿರ್ಸಾ (ಹರಿಯಾಣ): ಅದೃಷ್ಟ ಎಂಬುದು ಯಾವಾಗ, ಯಾರನ್ನು, ಹೇಗೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗದು. ಹರಿಯಾಣದ ಸಿರ್ಸಾ ಜಿಲ್ಲೆಯ ರಾನಿಯಾ ಮೂಲದ ಸಾಮಾನ್ಯ ಚಾಲಕನೊಬ್ಬನಿಗೆ ಈಗ ಅಕ್ಷರಶಃ ಅದೃಷ್ಟ ಒಲಿದು ಬಂದಿದೆ. ಲಾಟರಿ ಟಿಕೆಟ್ ಖರೀದಿ ಈತ ಈಗ ಬರೋಬ್ಬರಿ 10 ಕೋಟಿ ರೂಪಾಯಿ ಶ್ರೀಮಂತನಾಗಿದ್ದಾನೆ.
ಮುಹಮ್ಮದಪುರಿಯಾ ಗ್ರಾಮದ ನಿವಾಸಿ ಪೃಥ್ವಿ ಸಿಂಗ್ (35) ಎಂಬುವವರೇ ಈ ಕೋಟ್ಯಧಿಪತಿಯಾದ ಅದೃಷ್ಟವಂತ. ವೃತ್ತಿಯಲ್ಲಿ ಚಾಲಕರಾಗಿರುವ ಇವರು, ಇತ್ತೀಚೆಗಷ್ಟೇ ಡಬ್ವಾಲಿ ಸಮೀಪದ ಕಿಲಿಯನ್ವಾಲಿಯಲ್ಲಿ ‘ಪಂಜಾಬ್ ಲೋಹ್ರಿ ಮಕರ ಸಂಕ್ರಾಂತಿ 2026 ಬಂಪರ್ ಲಾಟರಿ’ ಟಿಕೆಟ್ ಖರೀದಿಸಿದ್ದರು. ಈ ಲಾಟರಿಯಲ್ಲಿ ಅವರಿಗೆ 10 ಕೋಟಿ ರೂಪಾಯಿ ಮೊದಲ ಬಹುಮಾನ ಲಭಿಸಿದೆ.
ಪೃಥ್ವಿ ಸಿಂಗ್ ಅವರ ತಂದೆ ದೇವಿಲಾಲ ಕೂಡ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಪೃಥ್ವಿ ಅವರ ಪತ್ನಿ ಸುಮನ್ ರಾಣಿ ಶಾಲೆಯೊಂದರಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳಿದ್ದಾರೆ. ಲಾಟರಿ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕುಟುಂಬದಲ್ಲಿ ಸಂತಸದ ಕಡಲು ಉಕ್ಕಿ ಹರಿದಿದೆ.
“ನನಗೆ ಇನ್ನೂ ಇದು ನಂಬಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಎರಡು ಬಾರಿ ಲಾಟರಿ ಖರೀದಿಸಿದ್ದೆ, ಆದರೆ ಮೂರನೇ ಪ್ರಯತ್ನದಲ್ಲೇ ಇಷ್ಟು ದೊಡ್ಡ ಮೊತ್ತ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಈ ಹಣವನ್ನು ನನ್ನ ಮಕ್ಕಳ ಭವಿಷ್ಯಕ್ಕಾಗಿ ಬಳಸುತ್ತೇನೆ ಎಂದು ಲಾಟರಿ ವಿಜೇತ ಪೃಥ್ವಿ ಸಿಂಗ್ ಹೇಳಿದ್ದಾರೆ.
ಪೃಥ್ವಿ ಸಿಂಗ್ 10 ಕೋಟಿ ರೂ. ಗೆದ್ದ ಸುದ್ದಿ ಹರಡುತ್ತಿದ್ದಂತೆ, ಮುಹಮ್ಮದಪುರಿಯಾ ಗ್ರಾಮದ ಸರಪಂಚರು ಮತ್ತು ನೂರಾರು ಗ್ರಾಮಸ್ಥರು ಅವರ ಮನೆಗೆ ಭೇಟಿ ನೀಡಿ ಶುಭ ಕೋರುತ್ತಿದ್ದಾರೆ. ಲಾಟರಿ ಮಾರಾಟಗಾರ ಮದನ್ ಸಿಂಗ್ ಮಾತನಾಡಿ, “ನನ್ನ ಅಂಗಡಿಯಲ್ಲಿ ಟಿಕೆಟ್ ಖರೀದಿಸಿದ ವ್ಯಕ್ತಿಗೆ ಮೊದಲ ಬಹುಮಾನ ಬಂದಿರುವುದು ತುಂಬಾ ಸಂತೋಷ ತಂದಿದೆ,” ಎಂದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ