
ವಿಯೆನ್ನಾ: ಪ್ರಾಣಿ ಸಾಮ್ರಾಜ್ಯದಲ್ಲಿ ಮನುಷ್ಯನಿಗೆ ಅತ್ಯಂತ ಹತ್ತಿರವಾದ ಮತ್ತು ಸಾಧು ಪ್ರಾಣಿಯೆಂದು ಕರೆಸಿಕೊಳ್ಳುವ ಹಸುಗಳು, ಕೇವಲ ಹಾಲು ನೀಡುವುದಕ್ಕಷ್ಟೇ ಸೀಮಿತವಲ್ಲ, ಅವುಗಳ ಬುದ್ಧಿವಂತಿಕೆ ಅಸಾಧಾರಣವಾದುದು ಎಂಬುದನ್ನು ಆಸ್ಟ್ರಿಯಾದ ‘ವೆರೋನಿಕಾ’ ಎಂಬ ಹಸು ಸಾಬೀತುಪಡಿಸಿದೆ. ಕಡ್ಡಿ, ಕುಂಟೆ ಮತ್ತು ಪೊರಕೆಗಳನ್ನು ಬಳಸಿ ತನ್ನ ಮೈ ತಾನೇ ತುರುಸಿಕೊಳ್ಳುವ ಅಥವಾ ಪರಚಿಕೊಳ್ಳುವ ವೆರೋನಿಕಾ ಹಸುವಿನ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿದೆ.

ಸುಮಾರು 10,000 ವರ್ಷಗಳಿಂದ ಹಸುಗಳನ್ನು ಸಾಕುತ್ತಿದ್ದರೂ, ಅವು ಉಪಕರಣಗಳನ್ನು ಬಳಸುವಷ್ಟು ಬುದ್ಧಿವಂತಿಕೆಯನ್ನು ಹೊಂದಿವೆ ಎಂಬುದು ಇದುವರೆಗೆ ದಾಖಲಾಗಿರಲಿಲ್ಲ. ಆದರೆ ವೆರೋನಿಕಾ ಹಸುವಿನ ಈ ವರ್ತನೆಯನ್ನು ಕಂಡು ವಿಜ್ಞಾನಿಗಳು ಬೆರಗಾಗಿದ್ದಾರೆ. ‘ಕರೆಂಟ್ ಬಯಾಲಜಿ’ (Current Biology) ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಯೆನ್ನಾದ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ವೆರೋನಿಕಾ ಹಸುವಿನ ಈ ವರ್ತನೆಯನ್ನು ಹಸುವಿನ ‘ಉಪಕರಣಗಳ ಬಳಕೆ’ (Tool Use) ಎಂದು ಅಧಿಕೃತವಾಗಿ ಗುರುತಿಸಿದ್ದಾರೆ.
ವೆರೋನಿಕಾ ವಿಶೇಷತೆಗಳೇನು?
ವಿಜ್ಞಾನಿಗಳು ನಡೆಸಿದ ಸರಣಿ ಪರೀಕ್ಷೆಗಳಲ್ಲಿ ವೆರೋನಿಕಾ ಅನೇಕ ತೋರಿದ ಬುದ್ಧಿವಂತಿಕೆ ತೋರಿದೆ.
ತನ್ನ ದೇಹದ ಮೇಲ್ಭಾಗವನ್ನು ತುರಿಸಿಕೊಳ್ಳಲು ಪೊರಕೆಯ ಬ್ರಷ್ ಬಳಸುವ ಈ ಹಸು, ತನ್ನ ದೇಹದ ಕೆಳಭಾಗದ ಮೃದುವಾದ ಚರ್ಮಕ್ಕೆ ತಗುಲಿಸಲು ಕೋಲಿನ ಹಿಂಭಾಗವನ್ನು ಬಳಸಿದೆ.
ಪೊರಕೆ ಸರಿಯಾದ ಕೋನದಲ್ಲಿ ಇಲ್ಲದಿದ್ದರೆ, ತನ್ನ ನಾಲಿಗೆಯಿಂದ ಅದನ್ನು ಸರಿಪಡಿಸಿಕೊಂಡು, ನಂತರ ಹಲ್ಲುಗಳಿಂದ ಗಟ್ಟಿಯಾಗಿ ಹಿಡಿದು ಅದರಿಂದ ತನ್ನ ಮೈಯನ್ನು ತುರಿಸಿಕೊಂಡಿದೆ.
ಸಂಶೋಧಕರು ನಡೆಸಿದ 70 ಪ್ರಯೋಗಗಳಲ್ಲಿ 76 ಬಾರಿ ಹಸು ಯಶಸ್ವಿಯಾಗಿ ಪೊರಕೆಯನ್ನು ಬಳಸಿ ತನ್ನ ಕೈಗೆಟುಕದ ಜಾಗಗಳಲ್ಲಿ ಮೈ ತುರಿಸಿಕೊಂಡಿದೆ.
ರೈತನ ಅಚ್ಚರಿ
ಇಟಲಿ ಗಡಿಯ ಸಮೀಪವಿರುವ ಕ್ಯಾರಿಂಥಿಯಾದ ಸಾವಯವ ರೈತ ವಿಟ್ಗರ್ ವೀಗೆಲೆ ಎಂಬುವವರು ವೆರೋನಿಕಾ ಎಂಬ ಈ ಹಸುವನ್ನು ಸಾಕುತ್ತಿದ್ದಾರೆ. “ವರ್ಷಗಳ ಹಿಂದೆಯೇ ಈ ಹಸು ಮರದ ತುಂಡುಗಳೊಂದಿಗೆ ಆಟವಾಡಲು ಆರಂಭಿಸಿತ್ತು. ನಂತರ ಅವುಗಳಿಂದ ಮೈ ತುರಿಸಿಕೊಳ್ಳುವುದನ್ನೇ ಅದೇ ಕಲಿಯಿತು. ಪ್ರಾಣಿಗಳಿಂದ ನಾವು ತಾಳ್ಮೆ, ಸಮಾಧಾನ ಮತ್ತು ಶಾಂತತೆಯನ್ನು ಕಲಿಯಬೇಕು,” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಪ್ರಾಣಿ ಲೋಕದ ಬುದ್ಧಿವಂತರು
ಇದುವರೆಗೆ ಕಪಿಗಳು (Capuchins) ಕಲ್ಲುಗಳಿಂದ ಕಾಯಿ ಒಡೆಯುವುದು, ಒರಾಂಗುಟಾನ್‌ಗಳು ಎಲೆಗಳಿಂದ ಧ್ವನಿ ಬದಲಿಸುವುದು ಮತ್ತು ಆನೆಗಳು ಸತ್ತ ಕುಟುಂಬದ ಸದಸ್ಯರ ಮೇಲೆ ಗಿಡಗಳನ್ನು ಹಾಕಿ ಗೌರವಿಸುವುದನ್ನು ವಿಜ್ಞಾನಿಗಳು ಕಂಡಿದ್ದರು. ಆದರೆ ಹಸುಗಳಲ್ಲಿ ಈ ಮಟ್ಟದ ‘ಉಪಕರಣದ ಬಳಕೆ’ ಕಂಡುಬಂದಿರುವುದು ಇದೇ ಮೊದಲು.


ನಿಮ್ಮ ಕಾಮೆಂಟ್ ಬರೆಯಿರಿ