ಟಿ20 ವಿಶ್ವಕಪ್ | ಭಾರತಕ್ಕೆ ಬರಲು ಬಾಂಗ್ಲಾದೇಶ ನಕಾರ: ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ನಿರ್ಧಾರ

ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಈ ವರ್ಷ ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ನಿರಾಕರಿಸಿದೆ. ಜನವರಿ 22 ರಂದು ನಡೆದ ಆಂತರಿಕ ಸಭೆಯ ನಂತರ ಈ ಅಧಿಕೃತ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಒಂದು ವೇಳೆ ಬಾಂಗ್ಲಾದೇಶ ಟೂರ್ನಿಯಿಂದ ಹಿಂದೆ ಸರಿದರೆ, ಅವರ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಿಕೊಳ್ಳಲಾಗುವುದು ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈಗಾಗಲೇ ಗಡುವು ನೀಡಿದೆ.
ನಿರ್ಧಾರಕ್ಕೆ ಕಾರಣವೇನು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ ಬುಲ್ಬುಲ್, ಭಾರತದಲ್ಲಿ ಪಂದ್ಯಗಳನ್ನು ಆಡಲು ತಮ್ಮ ತಂಡ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಮುಖವಾಗಿ ಐಪಿಎಲ್ 2026ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಬಾಂಗ್ಲಾ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ.
“ನಾವು ವಿಶ್ವಕಪ್ ಆಡಲು ಬಯಸುತ್ತೇವೆ, ಆದರೆ ಭಾರತದಲ್ಲಿ ಅಲ್ಲ. ಐಸಿಸಿ ಸಭೆಯಲ್ಲಿ ಕೆಲವು ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮುಸ್ತಫಿಜುರ್ ವಿಚಾರ ಕೇವಲ ಒಂದು ಸಣ್ಣ ಘಟನೆಯಲ್ಲ, ಅಲ್ಲಿ ಭಾರತದ ಏಕಪಕ್ಷೀಯ ನಿರ್ಧಾರಗಳು ಎದ್ದು ಕಾಣುತ್ತಿವೆ ಎಂದು ಬುಲ್ಬುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಸಿಸಿ ವಿರುದ್ಧ ಗರಂ ಆದ ಬಾಂಗ್ಲಾ ಕ್ರಿಕೆಟ್‌ ಮಂಡಳಿ:
ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿದ್ದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. “20 ಕೋಟಿ ಜನಸಂಖ್ಯೆ ಇರುವ ನಮ್ಮಂತಹ ದೇಶ ಟೂರ್ನಿಯಿಂದ ಹೊರಗುಳಿದರೆ ಅದು ಐಸಿಸಿಯ ವೈಫಲ್ಯ. ಕ್ರಿಕೆಟ್ ಈಗ ಒಲಿಂಪಿಕ್ಸ್‌ಗೆ ಸೇರುತ್ತಿದೆ, ಆದರೆ ಅದರ ಜನಪ್ರಿಯತೆ ಕುಸಿಯುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ಸೇರ್ಪಡೆ:
ಬಾಂಗ್ಲಾದೇಶದ ಟಿ20 ವಿಶ್ವಕಪ್ ಅಭಿಯಾನವು ವೆಸ್ಟ್ ಇಂಡೀಸ್ ವಿರುದ್ಧ  ಈಡನ್ ಗಾರ್ಡನ್ಸ್‌ನಲ್ಲಿ ಫೆ..೭ರಂದು ವಿಶ್ವಕಪ್‌ ಆರಂಭಿಕ ದಿನದಂದು ಪ್ರಾರಂಭವಾಗಲಿತ್ತು. ಲಿಟ್ಟನ್ ದಾಸ್ ನೇತೃತ್ವದ ತಂಡವು ನೇಪಾಳ ವಿರುದ್ಧದ ತಮ್ಮ ಅಂತಿಮ ಗುಂಪು ಪಂದ್ಯಕ್ಕಾಗಿ ಮುಂಬೈಗೆ ತೆರಳಲು ಯೋಜಿಸುವ ಮೊದಲು ಕೋಲ್ಕತ್ತಾ ಇತರ ಎರಡು ಬಾಂಗ್ಲಾದೇಶ ಪಂದ್ಯಗಳನ್ನು ಆಯೋಜಿಸಲಿತ್ತು.
ಆದರೆ ಈಗ ಸಿಕ್ಕಿದ ಮಾಹಿತಿಯ ಪ್ರಕಾರ, ಐಸಿಸಿ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್‌ ತಂಡಕ್ಕೆ ಅವಕಾಶ ನೀಡಲಿದೆ. ಮತ್ತು ವೇಳಾಪಟ್ಟಿ ಆಗೆಯೇ ಇರಲಿದೆ. ಬಾಂಗ್ಲಾದೇಶದ ಬದಲು ಅದೇ ಗುಂಪು ಹಾಗೂ ವೇಳಾಪಟ್ಟಿಯಲ್ಲಿ ಸ್ಕಾಟ್ಲೆಂಡ್‌ ಆಡಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement