
ಲಕ್ನೋ: ಸಿನಿಮೀಯ ಶೈಲಿಯಲ್ಲಿ ಪತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ನಡೆಸಿದ ಭೀಕರ ಸಂಚನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಗೋಮಾಂಸ ಸಾಗಾಟದ ಆರೋಪ ಹೊರಿಸಿ ಪತಿಯನ್ನು ಜೈಲಿಗೆ ಅಟ್ಟಲು ಸಂಚು ನಡೆಸಿದ ಪತ್ನಿಯ ಕೃತ್ಯ ಈಗ ಬೆಳಕಿಗೆ ಬಂದಿದೆ.
ಜನವರಿ 14 ರಂದು ಉತ್ತರ ಪ್ರದೇಶದ ಲಕ್ನೋದ ಕಾಕೋರಿ ಪ್ರದೇಶದಲ್ಲಿ ಬಜರಂಗದಳದ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಆನ್‌ಲೈನ್ ಪೋರ್ಟರ್ ವಾಹನವೊಂದನ್ನು ತಡೆದರು. ತಪಾಸಣೆ ನಡೆಸಿದಾಗ ವಾಹನದಲ್ಲಿ 12 ಕೆಜಿ ಗೋಮಾಂಸ ಪತ್ತೆಯಾಯಿತು. ವಿಚಾರಣೆ ನಡೆಸಿದಾಗ, ಈ ಆರ್ಡರ್ ಅನ್ನು ಅಮೀನಾಬಾದ್‌ನ ಕಾಗದದ ಕಾರ್ಖಾನೆ ಮಾಲೀಕ ವಾಸಿಫ್ ಎಂಬುವವರ ಹೆಸರಿನಲ್ಲಿ ಬುಕ್ ಮಾಡಿರುವುದು ತಿಳಿದುಬಂದಿತು.
ಸಿಕ್ಕಿಬಿದ್ದಿದ್ದು ಹೇಗೆ?
ವಾಸಿಫ್ ಮೊಬೈಲ್‌ಗೆ ಬಂದಿದ್ದ ಒಟಿಪಿ (OTP) ಬಳಸಿ ಆರ್ಡರ್ ಖಚಿತಪಡಿಸಲಾಗಿತ್ತು. ಮೇಲ್ನೋಟಕ್ಕೆ ವಾಸಿಫ್ ಅಪರಾಧಿ ಎಂದು ಕಂಡುಬಂದರೂ, ಪೊಲೀಸರು ಆತನ ಮನೆಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯ ಬಯಲಾಯಿತು. ವಾಸಿಫ್ ಸ್ನಾನಗೃಹದಲ್ಲಿದ್ದಾಗ ಅವರ ಪತ್ನಿ ರಹಸ್ಯವಾಗಿ ಫೋನ್ ಬಳಸಿ ಒಟಿಪಿ ಪಡೆದಿರುವುದು ಕಂಡುಬಂದಿದೆ.

ತನಿಖೆಯಲ್ಲಿ ಬಯಲಾದ ಅಘಾತಕಾರಿ ಸತ್ಯ:
ಪೊಲೀಸರ ತನಿಖೆಯಲ್ಲಿ ಪತ್ನಿ ಮತ್ತು ಆಕೆಯ ಇನ್‌ಸ್ಟಾಗ್ರಾಮ್ ಪ್ರಿಯಕರ ಭೋಪಾಲ್ ಮೂಲದ ಅಮಾನ್ ಸೇರಿ ಈ ಸಂಚು ರೂಪಿಸಿರುವುದು ದೃಢಪಟ್ಟಿದೆ. ಕಳೆದ ಸೆಪ್ಟೆಂಬರ್‌ನಲ್ಲಿಯೂ ಇದೇ ರೀತಿ ವಾಸಿಫ್ ಅವರ ಮಹೀಂದ್ರಾ ಥಾರ್ ವಾಹನದಲ್ಲಿ 20 ಕೆಜಿ ಗೋಮಾಂಸ ಇಟ್ಟು ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.
ವಾಸಿಫ್ ಜೈಲಿನಿಂದ ಬೇಗ ಬಿಡುಗಡೆಯಾದ ಕಾರಣ, ಈ ಬಾರಿ ದೀರ್ಘಕಾಲ ಶಿಕ್ಷೆಯಾಗುವಂತೆ ಮಾಡಲು ಪ್ರಿಯಕರ ಅಮಾನ್ ಬೇರೆ ಹೆಸರಿನಲ್ಲಿ ಬಜರಂಗದಳಕ್ಕೆ ಮಾಹಿತಿ ನೀಡಿ ಪೊಲೀಸರಿಗೆ ಸಿಕ್ಕಿಬೀಳುವಂತೆ ಮಾಡಿದ್ದ.
ಪತಿಯಿಂದ ವಿಚ್ಛೇದನ (Divorce) ಪಡೆದು ಪ್ರಿಯಕರನ ಜೊತೆ ಸೇರುವುದು ಈಕೆಯ ಸಂಚಿನ ಹಿಂದಿನ ಮುಖ್ಯ ಉದ್ದೇಶ ಎಂದು ಹೇಳಲಾಗಿದೆ. ಸದ್ಯ ಪೊಲೀಸರು ಪ್ರಿಯಕರ ಅಮಾನ್‌ನನ್ನು ಬಂಧಿಸಿದ್ದು, ವಾಸಿಫ್ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ