ನವದೆಹಲಿ/ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆ ಕುರಿತು ಚರ್ಚಿಸಲು ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರೆದಿದ್ದ ಮಹತ್ವದ ಸಭೆಗೆ ಸಂಸದ ಶಶಿ ತರೂರ್ ಗೈರಾಗಿದ್ದಾರೆ. ಇದು ಪಕ್ಷದೊಳಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಹುಲ್ ಗಾಂಧಿ ಮತ್ತು ಪಕ್ಷದ ನಾಯಕತ್ವದ ಮೇಲೆ ತರೂರ್ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ಆರಂಭದಲ್ಲಿ ತರೂರ್ ಅವರು ತಮಗೆ ಸಿಗಬೇಕಾದ ಗೌರವ ಸಿಗದ ಕಾರಣ ಸಭೆಯಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಿರುವನಂತಪುರಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತರೂರ್ ಅವರು ಹೈಕಮಾಂಡ್‌ನಿಂದ ಪೂರ್ವಾನುಮತಿ ಪಡೆದಿದ್ದರು ಎನ್ನಲಾಗಿದೆ. ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿಯವರ ರೋಡ್ ಶೋ ಮತ್ತು ರ‍್ಯಾಲಿ ಇದ್ದ ಕಾರಣ ಅವರು ಅಲ್ಲಿಯೇ ಉಳಿಯಲು ನಿರ್ಧರಿಸಿದ್ದರು.
ಕೊಚ್ಚಿ ಕಾರ್ಯಕ್ರಮದಲ್ಲಿಇರಿಸು ಮುರುಸು…?
ಮೂಲಗಳ ಪ್ರಕಾರ, ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ‘ಮಹಾ ಪಂಚಾಯತ’ ಕಾರ್ಯಕ್ರಮದಲ್ಲಿ ನಡೆದ ಕೆಲವು ಘಟನೆಗಳು ತರೂರ್ ಅವರ ಬೇಸರಕ್ಕೆ ಕಾರಣವಾಗಿವೆ. ಆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತರೂರ್ ಅವರ ನಂತರ ಕೇವಲ ರಾಹುಲ್ ಗಾಂಧಿ ಮಾತ್ರ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ನಂತರ ಹಲವು ನಾಯಕರು ಭಾಷಣ ಮಾಡಿದರು. ಇದು ಹಿರಿಯ ನಾಯಕರಾದ ತರೂರ್ ಅವರಿಗೆ ಮಾಡಿದ ಅವಮಾನ ಎಂದು ಅವರ ಆಪ್ತರು ಭಾವಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ತರೂರ್ ಅವರ ಹೆಸರನ್ನು ಉಲ್ಲೇಖಿಸದಿರುವುದು ಕೂಡ ಅಸಮಾಧಾನಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ. ಈ ಬೆಳವಣಿಗೆಗಳು ಕೇರಳ ಕಾಂಗ್ರೆಸ್‌ನಲ್ಲಿ ಆಂತರಿಕ ಶಿಸ್ತು ಮತ್ತು ಹಿರಿಯ ನಾಯಕರಿಗೆ ನೀಡುವ ಗೌರವದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕೇರಳದಲ್ಲಿ ಎಡಪಕ್ಷ -ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಇನ್ನೊಂದೆಡೆ, ಶುಕ್ರವಾರ ತಿರುವನಂತಪುರಂನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಪಿಎಂ ಸ್ವನಿಧಿ (PM SVANidhi) ಕ್ರೆಡಿಟ್ ಕಾರ್ಡ್ ವಿತರಣೆ ಮತ್ತು ಒಂದು ಲಕ್ಷ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಿದರು. ಜೊತೆಗೆ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ ನಾಲ್ಕು ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು.
ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕೇರಳದ ಎಡಪಕ್ಷಗಳು ಮತ್ತು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ತಮ್ಮ ಭಾಷಣದ ಕೊನೆಯಲ್ಲಿ ಅಪರೂಪಕ್ಕೆ ಇಂಗ್ಲಿಷ್‌ನಲ್ಲಿ ಮಾತನಾಡಿದ ಪ್ರಧಾನಿ, “ಈಗ ‘ವಿಕಸಿತ ಕೇರಳ’ದ ಸಮಯ. ಇದು ಎನ್‌ಡಿಎ ಸರ್ಕಾರದ ಸಮಯ,” ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ