ದುಬೈ: ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಹೊರಹಾಕಲಾಗಿದ್ದು, ಅದರ ಸ್ಥಾನಕ್ಕೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಿಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧಿಕೃತವಾಗಿ ತಿಳಿಸಿದೆ. ಐಪಿಎಲ್ 2026 ರಿಂದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟಿದ್ದನ್ನು ಪ್ರತಿಭಟಿಸಿ, ಭದ್ರತೆಯ ಕಾರಣ ನೀಡಿ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶುಕ್ರವಾರ ದುಬೈನಲ್ಲಿ ಐಸಿಸಿ ಅಧ್ಯಕ್ಷ ಜಯ ಶಾ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ನಂತರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಅಧ್ಯಕ್ಷ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರಿಗೆ ಈ ಕುರಿತು ಅಧಿಕೃತ ಇ-ಮೇಲ್ ಕಳುಹಿಸಲಾಗಿದೆ.
ಐಸಿಸಿ ನಿರ್ಧಾರಕ್ಕೆ ಪ್ರಮುಖ ಕಾರಣಗಳು:
ಭಾರತಕ್ಕೆ ಪ್ರಯಾಣಿಸುವ ಬಗ್ಗೆ ನಿರ್ಧಾರ ತಿಳಿಸಲು ಬಾಂಗ್ಲಾದೇಶಕ್ಕೆ 24 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ನಿಗದಿತ ಸಮಯದಲ್ಲಿ ಬಿಸಿಬಿ ಯಾವುದೇ ಅಧಿಕೃತ ಮಾಹಿತಿ ನೀಡದ ಕಾರಣ ಐಸಿಸಿ ಈ ಕ್ರಮ ಕೈಗೊಂಡಿದೆ.
ಐಸಿಸಿಗೆ ಅಧಿಕೃತವಾಗಿ ತಿಳಿಸುವ ಮೊದಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಢಾಕಾದಲ್ಲಿ ಪತ್ರಿಕಾಗೋಷ್ಠಿ ನಡೆಸಿತ್ತು. ಇದು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
ಐಸಿಸಿಯು ಪದೇ ಪದೇ ಭದ್ರತೆಯ ಭರವಸೆ ನೀಡಿದರೂ, ಬಾಂಗ್ಲಾದೇಶದ ಕ್ರೀಡಾ ಸಚಿವಾಲಯದ ಸಲಹೆಗಾರರಾದ ಅಸಿಫ್ ನಜ್ರುಲ್ ಅವರು ಭಾರತಕ್ಕೆ ತಂಡವನ್ನು ಕಳುಹಿಸಬಾರದು ಎಂದು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಪ್ರಸ್ತುತ ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿಗೆ ಇನ್ನೂ ಅಧಿಕೃತ ಪತ್ರ ತಲುಪಿಲ್ಲವಾದರೂ, ಶೀಘ್ರದಲ್ಲೇ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ಈಗ ಬಾಂಗ್ಲಾದೇಶದ ಸ್ಥಾನದಲ್ಲಿ ಕಣಕ್ಕಿಳಿಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ