ನೇಪಾಳ ಪ್ರವಾಹ ದುರಂತ : 11 ದಿನಗಳ ಬಳಿಕ ಅವಶೇಷಗಳಡಿ ಜೀವಂತವಾಗಿ ಪತ್ತೆಯಾದ ಇಬ್ಬರ ರಕ್ಷಣೆ

ಕಠ್ಮಂಡು: ಆಗಸ್ಟ್ 26ರಂದು ನೇಪಾಳವನ್ನು ತತ್ತರಗೊಳಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ 11ನೇ ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿ ಎರಡು ಇಬ್ಬರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಪ್ರವಾಹದ ಅವಶೇಷಗಳಡಿ 11 ದಿನಗಳ ಕಾಲ ಸಿಲುಕಿದ್ದ 64 ವರ್ಷದ ಮಹಿಳೆಯೊಬ್ಬರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಮತ್ತೊಂದೆಡೆ ಪ್ರವಾಹದಿಂದ ಹಾನಿಗೊಳಗಾದ ಮೇಲ್ಟ್ರಿಶೂಲಿ-1 (216 ಮೆಗಾವಾಟ್) ಜಲವಿದ್ಯುತ್ ಯೋಜನೆಯ ಎಡಿಟ್-4 ಸುರಂಗದಲ್ಲಿ ಸಿಲುಕಿದ್ದ ಚೀನಾ ಪ್ರಜೆಯನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ.
11 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾದ ಮಹಿಳೆ
ನುವಾಕೋಟ್ ಜಿಲ್ಲೆಯ ಬೆತ್ರಾವತಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ವೇಳೆ ಮನೆಯ ಅವಶೇಷಗಳಡಿ ಸಿಲುಕಿದ್ದ 64 ವರ್ಷದ ಚಂಡಿಕಾ ಶ್ರೇಷ್ಠ ಅವರನ್ನು ಶನಿವಾರ ರಕ್ಷಣಾ ತಂಡ ಜೀವಂತವಾಗಿ ಪತ್ತೆಹಚ್ಚಿ ಹೊರತೆಗೆದಿದೆ. ಆಗಸ್ಟ್ 26ರ ದುರಂತದ ಬಳಿಕ ಸಾವಿರಾರು ಜನರು ಇನ್ನೂ ನಾಪತ್ತೆಯಾಗಿರುವ ಸಂದರ್ಭದಲ್ಲಿ ಈ ಘಟನೆ ನೇಪಾಳದ ಜನತೆಗೆ ಆಶಾಕಿರಣ ಮೂಡಿಸಿದೆ.
ಸಶಸ್ತ್ರ ಪೊಲೀಸ್ ಪಡೆಯ ಮಾಹಿತಿಯಂತೆ, ಬೆತ್ರಾವತಿ ನಿವಾಸಿಯಾದ ಚಂಡಿಕಾ ಶ್ರೇಷ್ಠ ಅವರು ತಮ್ಮದೇ ಮನೆಯ ನಾಲ್ಕನೇ ಮಹಡಿಯಲ್ಲಿ ಜೀವಂತವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿಗೆ ಕರೆದೊಯ್ಯಲಾಗಿದೆ.

ಎಡಿಟ್-4 ಸುರಂಗದಿಂದ ಚೀನಾ ಪ್ರಜೆ ರಕ್ಷಣೆ
ಇದೇ ವೇಳೆ ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಮೇಲ್ಟ್ರಿಶೂಲಿ-1 (216 ಮೆಗಾವಾಟ್) ಜಲವಿದ್ಯುತ್ ಯೋಜನೆಯ ಎಡಿಟ್-4 ಸುರಂಗದಲ್ಲಿ ಸಿಲುಕಿದ್ದ ಚೀನಾ ಪ್ರಜೆಯೊಬ್ಬರನ್ನು ಶನಿವಾರ ಮಧ್ಯಾಹ್ನ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಪ್ರಧಾನಮಂತ್ರಿಗಳ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ನೇಪಾಳ ಸೇನೆಯ ವಿಪತ್ತು ನಿರ್ವಹಣಾ ತಜ್ಞರು ಹಾಗೂ ದಕ್ಷಿಣ ಕೊರಿಯಾದ ರಕ್ಷಣಾ ತಜ್ಞರ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಂಗದಿಂದ ರಕ್ಷಿಸಿದೆ. ರಕ್ಷಿಸಲ್ಪಟ್ಟ ಚೀನಾ ಪ್ರಜೆಯನ್ನು ಚಿಕಿತ್ಸೆಗಾಗಿ ನುವಾಕೋಟ್ ಜಿಲ್ಲೆಯ ತ್ರಿಶೂಲಿ ಪ್ರದೇಶದ ಮೈಥಿಲಿ ಬ್ಯಾರಕ್ಸ್‌ಗೆ ಕರೆದೊಯ್ಯಲಾಗಿದೆ. ಪ್ರವಾಹ ಸಂಭವಿಸಿದ 11ನೇ ದಿನದ ಬಳಿಕ ಅವರನ್ನು ಸುರಕ್ಷಿತವಾಗಿ ಹೊರತೆಗೆದಿರುವುದು ರಕ್ಷಣಾ ಕಾರ್ಯಾಚರಣೆಯ ಮತ್ತೊಂದು ಯಶಸ್ಸಾಗಿದೆ.
84 ಸಾವಿರ ಮಂದಿಗೆ ನೆರವು: 50 ಮಿಲಿಯನ್ ಡಾಲರ್ ಸಂಗ್ರಹಕ್ಕೆ ವಿಶ್ವಸಂಸ್ಥೆ ಮನವಿ
ಇನ್ನೊಂದೆಡೆ, ನೇಪಾಳದ ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳ ಪ್ರವಾಹ ಹಾಗೂ ಭೂಕುಸಿತದಿಂದ ಸುಮಾರು 84 ಸಾವಿರಕ್ಕೂ ಹೆಚ್ಚು ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಪೀಡಿತ ಸಮುದಾಯಗಳಿಗೆ ಅಗತ್ಯ ನೆರವು ಒದಗಿಸಲು ಸುಮಾರು 50 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹415 ಕೋಟಿ) ಸಂಗ್ರಹಿಸುವಂತೆ ವಿಶ್ವಸಂಸ್ಥೆ ಹಾಗೂ ಅದರ ಪಾಲುದಾರ ಸಂಸ್ಥೆಗಳು ಜಾಗತಿಕವಾಗಿ ಮನವಿ ಮಾಡಿವೆ.
ವಿಶ್ವಸಂಸ್ಥೆಯ ನೇಪಾಳ ಕಚೇರಿ ತಿಳಿಸಿರುವಂತೆ, ನೇಪಾಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ಸರ್ಕಾರ ರೂಪಿಸಿರುವ ನಾಲ್ಕು ತಿಂಗಳ ತುರ್ತು ಕಾರ್ಯಯೋಜನೆಯನ್ನು ಜಾರಿಗೆ ತರಲು ಈ ನೆರವು ಬಳಸಲಾಗುತ್ತದೆ. ಚಳಿಗಾಲ ಆರಂಭವಾಗುವ ಮೊದಲು ಸಂತ್ರಸ್ತರಿಗೆ ಅಗತ್ಯ ಸಹಾಯ ತಲುಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪ್ರಮುಖ ಸುದ್ದಿ :-   ವಿಡಿಯೋ | ನೇಪಾಳ ಪ್ರವಾಹ ; ತ್ರಿಶೂಲಿ ನದಿ 6 ಪಟ್ಟು ಅಗಲವಾಗಿ ಮನೆಗಳನ್ನೇ ನುಂಗಿದ ಭೀಕರ ಚಿತ್ರಣ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು !

ಆಶ್ರಯ, ಆರೋಗ್ಯ ಸೇವೆ, ಶುದ್ಧ ನೀರು ಮತ್ತು ನಗದು ನೆರವಿಗೆ ಆದ್ಯತೆ
ವಿಶ್ವಸಂಸ್ಥೆಯ ನೇಪಾಳದ ನಿವಾಸಿ ಸಂಯೋಜಕಿ ಲೈಲಾ ಪೀಟರ್ಸ್ ಯಾಹಿಯಾ ಮಾತನಾಡಿ, ಸರ್ಕಾರದ ನೇತೃತ್ವದಲ್ಲಿ ಚಳಿಗಾಲ ಆರಂಭವಾಗುವ ಮೊದಲು ಅತ್ಯಂತ ದೂರದ ಹಾಗೂ ತಲುಪಲು ಕಷ್ಟಕರ ಪ್ರದೇಶಗಳಿಗೆ ಆಶ್ರಯ, ವೈದ್ಯಕೀಯ ಸೌಲಭ್ಯಗಳು, ಶುದ್ಧ ಕುಡಿಯುವ ನೀರು ಮತ್ತು ನಗದು ನೆರವು ತಲುಪಿಸುವುದೇ ಈ ಅಭಿಯಾನದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಈ ನೆರವಿನ ಮೂಲಕ ಆಹಾರ, ತಾತ್ಕಾಲಿಕ ವಸತಿ, ಶುದ್ಧ ನೀರು, ಆರೋಗ್ಯ ಸೇವೆಗಳು, ನಗದು ಸಹಾಯ ಮತ್ತು ಜೀವ ರಕ್ಷಕ ಅಗತ್ಯ ವಸ್ತುಗಳನ್ನು ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳ ಜನರಿಗೆ ತಲುಪಿಸಲಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಪತ್ತು ಪೀಡಿತರಿಗೆ ತಕ್ಷಣದ ಪರಿಹಾರ ತಲುಪಿಸಲು ವಿಶ್ವಸಂಸ್ಥೆ ಹಾಗೂ ಅದರ ಪಾಲುದಾರ ಸಂಸ್ಥೆಗಳು ನೇಪಾಳ ಸರ್ಕಾರದ ಜೊತೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ತಲುಪಲು ಕಷ್ಟವಾಗಿರುವ ಹಾಗೂ ಅತ್ಯಂತ ಹಾನಿಗೊಳಗಾದ ಸಮುದಾಯಗಳಿಗೆ ನೆರವು ತಲುಪಿಸುವುದಕ್ಕೆ ಆದ್ಯತೆ ನೀಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement