ಆಫ್ರಿಕಾದ ನೈಜ ಗಾತ್ರಕ್ಕೆ ಮಾನ್ಯತೆ ; ಮರ್ಕೇಟರ್ ವಿಶ್ವ ನಕ್ಷೆ ಕೈಬಿಟ್ಟ ವಿಶ್ವಸಂಸ್ಥೆ : ಹೊಸ ವಿಶ್ವ ನಕ್ಷೆಗೆ ಒಪ್ಪಿಗೆ

ನ್ಯೂಯಾರ್ಕ್: ಹೋಲಿಕೆಯಲ್ಲಿ ಆಫ್ರಿಕಾ ಖಂಡವನ್ನು ಹೆಚ್ಚು ದೊಡ್ಡದಾಗಿ ಹಾಗೂ ಉತ್ತರ ಅಮೆರಿಕ ಮತ್ತು ಯುರೋಪ್ ಖಂಡಗಳನ್ನುಚಿಕ್ಕದಾಗಿ ತೋರಿಸುವ ಹೊಸ ವಿಶ್ವ ನಕ್ಷೆಯನ್ನು ಅಳವಡಿಸಿಕೊಳ್ಳುವ ಮಹತ್ವದ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UN General Assembly) ಶುಕ್ರವಾರ ಅಂಗೀಕರಿಸಿದೆ. ಈ ನಿರ್ಣಯಕ್ಕೆ 164 ದೇಶಗಳು ಬೆಂಬಲ ವ್ಯಕ್ತಪಡಿಸಿದರೆ, ಅಮೆರಿಕ ವಿರೋಧ ವ್ಯಕ್ತಪಡಿಸಿತು. ಆರು ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.
“ಖಂಡಗಳ ಭೂಪ್ರದೇಶವನ್ನು ಹೆಚ್ಚು ನಿಖರವಾಗಿ ಪ್ರತಿನಿಧಿಸುವ” ಉದ್ದೇಶದಿಂದ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಹೊಸ ನಕ್ಷೆಯನ್ನು ‘ಈಕ್ವಲ್ ಅರ್ಥ್ ಕಾರ್ಟೋಗ್ರಾಫಿಕ್ ಪ್ರೊಜೆಕ್ಷನ್’ (Equal Earth Projection) ಎಂದು ಕರೆಯಲಾಗುತ್ತಿದ್ದು, ಇದು ವಿಶ್ವದ ಭೂಭಾಗಗಳ ವಿಸ್ತೀರ್ಣವನ್ನು ಹೆಚ್ಚು ವಾಸ್ತವಿಕವಾಗಿ ತೋರಿಸುತ್ತದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 1569ರಲ್ಲಿ ಫ್ಲೆಮಿಷ್ ನಕ್ಷೆಕಾರ ಜೆರಾರ್ಡಸ್ ಮರ್ಕೇಟರ್ ರೂಪಿಸಿದ್ದ ಸಾಂಪ್ರದಾಯಿಕ ‘ಮರ್ಕೇಟರ್ ಪ್ರೊಜೆಕ್ಷನ್’ ನಕ್ಷೆಯ ಬದಲಿಗೆ ಈ ಹೊಸ ನಕ್ಷೆಯನ್ನು ಬಳಸುವಂತೆ ನಿರ್ಣಯದಲ್ಲಿ ಕರೆ ನೀಡಲಾಗಿದೆ.

ಈ ನಿರ್ಣಯವನ್ನು ಪ್ರಾಯೋಜಿಸಿದ್ದ ಟೋಗೊ ದೇಶದ ವಿದೇಶಾಂಗ ಸಚಿವ ರಾಬರ್ಟ್ ಡಸ್ಸೇ ಅವರು, “ನಕ್ಷೆಗಳು ಶಿಕ್ಷಣಕ್ಕೆ ದಾರಿ ತೋರಿಸುತ್ತವೆ, ಕಲ್ಪನೆಗಳನ್ನು ಪೋಷಿಸುತ್ತವೆ ಮತ್ತು ಸಾಮೂಹಿಕ ಗ್ರಹಿಕೆಗಳ ಮೇಲೆ ಪ್ರಭಾವ ಬೀರುತ್ತವೆ . ಆದ್ದರಿಂದ ಅವು ಎಂದಿಗೂ ತಟಸ್ಥವಾಗಿರುವುದಿಲ್ಲ. ನಮ್ಮ ಗ್ರಹದ ವಿಕೃತ ಚಿತ್ರಣವನ್ನು ನೀಡುವ ನಕ್ಷೆಗಳು ತಲೆಮಾರುಗಳಿಂದ ತಪ್ಪು ಪ್ರತಿನಿಧಿತ್ವವನ್ನು ಮುಂದುವರಿಸುವ ಅಪಾಯವಿದೆ” ಎಂದು ಹೇಳಿದರು.
ಆದರೆ ಅಮೆರಿಕ ಈ ನಿರ್ಣಯವನ್ನು ತೀವ್ರವಾಗಿ ಟೀಕಿಸಿದೆ. “ಇಂತಹ ಕ್ರಮಗಳೇ ಈ ಸಂಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲು ಕಾರಣವಾಗಿವೆ. ನಿಜವಾದ ಜಾಗತಿಕ ಸಮಸ್ಯೆಗಳತ್ತ ಗಮನ ಹರಿಸುವ ಬದಲು, 16ನೇ ಶತಮಾನದ ನಕ್ಷೆ ಹಾಗೂ ಅವುಗಳ ಪಾತ್ರದ ಬಗ್ಗೆ ಚರ್ಚಿಸಲಾಗುತ್ತಿದೆ” ಎಂದು ಮತದಾನದ ಮುನ್ನ ಅಮೆರಿಕದ ಪ್ರತಿನಿಧಿ ಯಾರಿನಾ ಫೆರೆನ್ಸೆವಿಚ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ವಿಡಿಯೋ | ನೇಪಾಳ ಪ್ರವಾಹ ; ತ್ರಿಶೂಲಿ ನದಿ 6 ಪಟ್ಟು ಅಗಲವಾಗಿ ಮನೆಗಳನ್ನೇ ನುಂಗಿದ ಭೀಕರ ಚಿತ್ರಣ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು !

ಮರ್ಕೇಟರ್ ನಕ್ಷೆಯ ಸಮಸ್ಯೆ ಏನು?
ಮರ್ಕೇಟರ್ ಪ್ರೊಜೆಕ್ಷನ್ ನಕ್ಷೆ ಭೂಭಾಗಗಳ ಆಕಾರ ಮತ್ತು ಕೋನಗಳನ್ನು ನಿಖರವಾಗಿ ತೋರಿಸುವಲ್ಲಿ ಪರಿಣಾಮಕಾರಿಯಾಗಿದ್ದರೂ, ಅವುಗಳ ನಿಜವಾದ ಗಾತ್ರವನ್ನು ಸರಿಯಾಗಿ ಪ್ರತಿಬಿಂಬಿಸುತ್ತಿರಲಿಲ್ಲ. ಭೂಗೋಳದಂತಹ ತ್ರಿಮಿತೀಯ ಗೋಳಾಕಾರ ಮೇಲ್ಮೈಯನ್ನು ದ್ವಿಮಿತೀಯ ನಕ್ಷೆಯಾಗಿ (three-dimensional globe onto a two-dimensional map) ರೂಪಿಸುವ ಸವಾಲಿನ ಕಾರಣದಿಂದ ಈ ಸಮಸ್ಯೆ ಉಂಟಾಗಿದೆ.
ಈ ನಕ್ಷೆಯಲ್ಲಿ ಉತ್ತರ ಗೋಳಾರ್ಧದ ಪ್ರದೇಶಗಳು ಅಗಾಧವಾಗಿ ಕಾಣಿಸುತ್ತಿದ್ದರೆ, ಭೂಮಧ್ಯ ರೇಖೆಯ ಸಮೀಪದ ಪ್ರದೇಶಗಳು ಚಿಕ್ಕದಾಗಿ ಕಾಣಿಸುತ್ತಿದ್ದವು. ಇದರ ಪರಿಣಾಮವಾಗಿ ಯುರೋಪ್ ಮತ್ತು ಉತ್ತರ ಅಮೆರಿಕ ಖಂಡಗಳು ನೈಜ ಆಕಾರಕ್ಕಿಂತ ದೊಡ್ಡದಾಗಿ ಹಾಗೂ ಆಫ್ರಿಕಾ, ದಕ್ಷಿಣ ಏಷ್ಯಾ ಪ್ರದೇಶಗಳು ಮತ್ತು ದಕ್ಷಿಣ ಅಮೆರಿಕ ಖಂಡಗಳು ಸಣ್ಣದಾಗಿ ಚಿತ್ರಿತವಾಗುತ್ತಿದ್ದವು.
2018ರಲ್ಲಿ ನಕ್ಷೆ ತಜ್ಞರ ತಂಡವು ಅಭಿವೃದ್ಧಿಪಡಿಸಿದ ʼಈಕ್ವಲ್ ಅರ್ಥ್ ಪ್ರೊಜೆಕ್ಷನ್‌ʼನಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶಗಳು ತಮ್ಮ ನೈಜ ಗಾತ್ರಕ್ಕೆ ಸಮೀಪವಾಗಿ ಕಾಣಿಸುತ್ತವೆ.

ಈ ಯೋಜನೆಯ ಪ್ರಮುಖ ನಕ್ಷೆ ತಜ್ಞರಲ್ಲಿ ಒಬ್ಬರಾದ ಬೊಜಾನ್ ಸಾವ್ರಿಕ್ 2025ರಲ್ಲಿ ಎಎಫ್‌ಪಿಗೆ ನೀಡಿದ ಸಂದರ್ಶನದಲ್ಲಿ, “ಈಕ್ವಲ್ ಅರ್ಥ್ ನಕ್ಷೆಯು ಖಂಡಗಳ ನೈಜ ಮೇಲ್ಮೈ ವಿಸ್ತೀರ್ಣವನ್ನು ಹಾಗೂ ಸಾಧ್ಯವಾದಷ್ಟು ಅವುಗಳ ನಿಜವಾದ ಆಕಾರವನ್ನು ತೋರಿಸುತ್ತದೆ” ಎಂದು ಹೇಳಿದ್ದರು.
ಫ್ರಾನ್ಸ್‌ನಿಂದ ಮರ್ಕೇಟರ್ ನಕ್ಷೆಗೆ ವಿದಾಯ
ಹೊಸ ನಕ್ಷೆ ಪರ ನಿರ್ಣಯಕ್ಕೆ ಸಹಪ್ರಾಯೋಜಕತ್ವ ವಹಿಸಿದ್ದ ಫ್ರಾನ್ಸ್, ಇನ್ನು ಮುಂದೆ ಮರ್ಕೇಟರ್ ಪ್ರೊಜೆಕ್ಷನ್ ಬಳಕೆಯನ್ನು ಕೈಬಿಡುವುದಾಗಿ ಘೋಷಿಸಿದೆ. ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬರೋಟ್ ಮಾತನಾಡಿ, “ಮರ್ಕೇಟರ್ ನಕ್ಷೆಯಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಅತಿ ದೊಡ್ಡದಾಗಿ ಕಾಣುತ್ತಿದ್ದು, ಪ್ರಾಬಲ್ಯವನ್ನು ಪಡೆದಿವೆ. ಅದೇ ವೇಳೆ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಆಗ್ನೇಯ ಏಷ್ಯಾದ ಮಹತ್ವ ಕಡಿಮೆಯಾಗಿ ಕಾಣುತ್ತದೆ. ಗ್ರೀನ್‌ಲ್ಯಾಂಡ್ ಕೂಡ ಆಫ್ರಿಕಾದಷ್ಟೇ ದೊಡ್ಡದಾಗಿ ಕಾಣುತ್ತದೆ” ಎಂದು ಹೇಳಿದರು. “ನಕ್ಷೆ ಬದಲಿಸಿದರೆ ಜಗತ್ತು ಬದಲಾಗುವುದಿಲ್ಲ. ಆದರೆ ತಪ್ಪು ಪ್ರತಿನಿಧಿತ್ವವನ್ನು ಸರಿಪಡಿಸುವುದು ಸತ್ಯದತ್ತ ಇಡುವ ಒಂದು ಮಹತ್ವದ ಹೆಜ್ಜೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಈ ನಿರ್ಣಯದ ಬೆಂಬಲಕ್ಕೆ ಫ್ರಾನ್ಸ್ ಮುಂದಾಗಿರುವುದು ಆಫ್ರಿಕಾ ರಾಷ್ಟ್ರಗಳೊಂದಿಗೆ ತನ್ನ ಸಂಬಂಧಗಳನ್ನು ಸುಧಾರಿಸಿಕೊಳ್ಳುವ ಪ್ರಯತ್ನಗಳ ನಡುವೆಯೇ ಗಮನ ಸೆಳೆದಿದೆ. ವಿಶೇಷವಾಗಿ ತನ್ನ ಹಿಂದಿನ ವಸಾಹತು ಪ್ರದೇಶಗಳೊಂದಿಗೆ ಉಂಟಾಗಿರುವ ಬಿಕ್ಕಟ್ಟುಗಳನ್ನು ನಿವಾರಿಸಲು ಫ್ರಾನ್ಸ್ ಇತ್ತೀಚಿನ ವರ್ಷಗಳಲ್ಲಿ ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ.

ಪ್ರಮುಖ ಸುದ್ದಿ :-   ವಿಡಿಯೋ | ನೇಪಾಳ ಪ್ರವಾಹ ; ತ್ರಿಶೂಲಿ ನದಿ 6 ಪಟ್ಟು ಅಗಲವಾಗಿ ಮನೆಗಳನ್ನೇ ನುಂಗಿದ ಭೀಕರ ಚಿತ್ರಣ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement