ಭಾರತ-ಇಯು ನಡುವೆ ಮುಕ್ತ ವ್ಯಾಪಾರ ಒಪ್ಪಂದದಿಂದ 70 ಲಕ್ಷ ಉದ್ಯೋಗಗಳು, ಜಾಗತಿಕ ವ್ಯಾಪಾರದ 25% ಭಾಗದಷ್ಟು ವ್ಯಾಪಾರ

ನವದೆಹಲಿ: ಕಳೆದ ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತ ಮತ್ತು ಯುರೋಪಿಯನ್ ಒಕ್ಕೂಟ(EU)ದ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ (FTA) ನಡೆದಿದೆ. ಸುಮಾರು 20 ವರ್ಷಗಳ ಚರ್ಚೆ ಮತ್ತು 16 ಸುತ್ತಿನ ಮಾತುಕತೆಗಳ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಹೇಳಿದ್ದಾರೆ.
ಈ ಬಗ್ಗೆ ವಿವರಗಳನ್ನು ಹಂಚಿಕೊಂಡ ಪಿಯೂಷ್ ಗೋಯಲ್, ಈ ಒಪ್ಪಂದವು ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಎಲ್ಲಾ ವಿಭಾಗಗಳ ಕೈಗಾರಿಕೆಗಳಿಗೆ ಲಾಭದಾಯಕವಾಗಿದೆ. ಈ ಒಪ್ಪಂದವು ಹಲವಾರು ಅವಕಾಶಗಳನ್ನು ತೆರೆಯುತ್ತದೆ ಮತ್ತು ಗಮನಾರ್ಹ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ಅವರು ಹೇಳಿದರು
 “2013ರಲ್ಲಿ ಸ್ಥಗಿತಗೊಂಡಿದ್ದ ಈ ಮಾತುಕತೆಗಳನ್ನು ಮೋದಿ ಸರ್ಕಾರವು 2022ರ ಮಧ್ಯಭಾಗದಲ್ಲಿ ಪುನಃ ಪ್ರಾರಂಭಿಸಿತು. ಈಗ ಲಭಿಸಿರುವ ಈ ಯಶಸ್ಸು ಭಾರತ ಮತ್ತು ಯುರೋಪಿಯನ್ ಒಕ್ಕೂಟ ಎರಡಕ್ಕೂ ಲಾಭದಾಯಕವಾಗಿದೆ (Win-Win)” ಎಂದು ಬಣ್ಣಿಸಿದರು.
ಭಾರತದ ಯಾವ ವಲಯಗಳಿಗೆ ಲಾಭ?
ಈ ಒಪ್ಪಂದದಿಂದಾಗಿ ಭಾರತದ ಶ್ರಮ ಆಧಾರಿತ ಕೈಗಾರಿಕೆಗಳಿಗೆ ಯುರೋಪ್ ಮಾರುಕಟ್ಟೆಯಲ್ಲಿ ದೊಡ್ಡ ಅವಕಾಶಗಳು ಸಿಗಲಿವೆ.
ಜವಳಿ ಮತ್ತು ಸಿದ್ಧ ಉಡುಪುಗಳು
ಚರ್ಮದ ಉತ್ಪನ್ನಗಳು ಮತ್ತು ಪಾದರಕ್ಷೆಗಳು
ರಾಸಾಯನಿಕ ಮತ್ತು ಪ್ಲಾಸ್ಟಿಕ್ ವಸ್ತುಗಳು
ಸಮುದ್ರ ಉತ್ಪನ್ನಗಳು (Marine Products)
ರತ್ನ ಮತ್ತು ಆಭರಣಗಳು, ಪೀಠೋಪಕರಣಗಳು ಮತ್ತು ಆಟಿಕೆಗಳಿಗೆ ಮುಖ್ಯವಾಗಿ ಹೆಚ್ಚು ಲಾಭದಾಯಕವಾಗಲಿದೆ ಹಾಗೂ ಮತ್ತೊಂದೆಡೆ, ಭಾರತಕ್ಕೆ ಯುರೋಪಿನಿಂದ ಅತ್ಯಾಧುನಿಕ ತಂತ್ರಜ್ಞಾನ, ಇನೋವೇಶನ್ ಮತ್ತು ಪ್ರಿಸಿಶನ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಹರಿದುಬರಲಿದೆ  ಎಂದು ನಿರೀಕ್ಷಿಸಲಾಗಿದೆ.
‘ದಿ ಮದರ್ ಆಫ್ ಆಲ್ ಡೀಲ್ಸ್’
ಈ ಒಪ್ಪಂದವನ್ನು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ “ದಿ ಮದರ್ ಆಫ್ ಆಲ್ ಡೀಲ್ಸ್” ಎಂದು ಕರೆದಿದ್ದಾರೆ. ಈ ಒಪ್ಪಂದವು ಜಾಗತಿಕ ವ್ಯಾಪಾರದ ಶೇ. 25 ರಷ್ಟು ಭಾಗವನ್ನು ಒಳಗೊಂಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕಳೆದ 4 ವರ್ಷಗಳಲ್ಲಿ ಭಾರತವು 37 ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಮಾಡಿಕೊಂಡ 8ನೇ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ.
ಭಾರತದಿಂದ ರಫ್ತಾಗುವ ಶೇ. 99 ರಷ್ಟು ಉತ್ಪನ್ನಗಳಿಗೆ ಮತ್ತು ಯುರೋಪಿನಿಂದ ಬರುವ ಶೇ. 97 ರಷ್ಟು ಉತ್ಪನ್ನಗಳಿಗೆ ಈ ಒಪ್ಪಂದ ಅನ್ವಯಿಸಲಿದೆ.
70 ಲಕ್ಷ ಹೊಸ ಉದ್ಯೋಗಗಳ ಗುರಿ
ಜವಳಿ ಉದ್ಯಮಕ್ಕೆ ಈ ಒಪ್ಪಂದವು ವರದಾನವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಸ್ತುತ ಬಾಂಗ್ಲಾದೇಶದಂತಹ ದೇಶಗಳು ಸುಂಕ ರಹಿತ ಸೌಲಭ್ಯದಿಂದಾಗಿ ಯುರೋಪಿನಲ್ಲಿ ದೊಡ್ಡ ಮಾರುಕಟ್ಟೆ ಹೊಂದಿವೆ. ಆದರೆ ಈಗ ಈ ಒಪ್ಪಂದದಿಂದ ಭಾರತದ ಜವಳಿ ರಫ್ತು 700 ಕೋಟಿ ಡಾಲರ್‌ನಿಂದ 3000-4000 ಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಕೇವಲ ಜವಳಿ ವಲಯವೊಂದರಲ್ಲೇ ಸುಮಾರು 60 ರಿಂದ 70 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.
ಐಎಂಇಸಿ (IMEC) ಯೋಜನೆಗೆ ಬಲ
ಇದೇ ವೇಳೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಮಾತನಾಡಿ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಯೋಜನೆಯ ಬಗ್ಗೆಯೂ ಚರ್ಚಿಸಲಾಗಿದೆ. ಈ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉಭಯ ಪಕ್ಷಗಳು ಒಪ್ಪಿದ್ದು, ಶೀಘ್ರದಲ್ಲೇ ಸದಸ್ಯ ರಾಷ್ಟ್ರಗಳ ಶೃಂಗಸಭೆ ಕರೆಯಲು ನಿರ್ಧರಿಸಲಾಗಿದೆ ಎಂದರು.
ಈ ಒಪ್ಪಂದದ ಕಾನೂನು ಪ್ರಕ್ರಿಯೆಗಳನ್ನು ವೇಗಗೊಳಿಸಿ 2026ರೊಳಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಸರ್ಕಾರ ಗುರಿ ಹೊಂದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement