ಭಾರತ-ಯುರೋಪ್‌ ಒಕ್ಕೂಟದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ: ಇದು ಟ್ರಂಪ್‌ಗೆ ಹೇಗೆ ‘ಟಕ್ಕರ್’ ಕೊಡಲಿದೆ ?

ನವದೆಹಲಿ: ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ಕೊನೆಗೂ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಈ ಬೆಳವಣಿಗೆಯನ್ನು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ “ಎಲ್ಲಾ ಒಪ್ಪಂದಗಳ ತಾಯಿ” (Mother of all deals) ಎಂದು ಬಣ್ಣಿಸಿದ್ದಾರೆ. ಯಾಕೆಂದರೆ ಇದು ಭಾರತ ಮತ್ತು 27 ರಾಷ್ಟ್ರಗಳ ಯುರೋಪ್‌ ಒಕ್ಕೂಟದ ನಡುವಿನ ಒಪ್ಪಂದವು ಸುಮಾರು 200 ಜನರನ್ನು ಒಳಗೊಳ್ಳುತ್ತದೆ ಮತ್ತು ಸುಮಾರು $27 ಟ್ರಿಲಿಯನ್ ಮೊತ್ತದ ಸಂಯೋಜಿತ ಮಾರುಕಟ್ಟೆಯನ್ನು ಮತ್ತು ಜಾಗತಿಕ ಒಟ್ಟು ದೇಶೀಯ ಉತ್ಪನ್ನದ (GDP) ಸುಮಾರು ಶೇ.25ರಷ್ಟನ್ನು ಪ್ರತಿನಿಧಿಸುತ್ತದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಆಮದು ಸುಂಕದ ನೀತಿಗಳ ನಡುವೆ, ಈ ಒಪ್ಪಂದವು ಜಾಗತಿಕ ಆರ್ಥಿಕತೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಹಾಗೂ ಟ್ರಂಪ್ ಅವರ ‘ಅಮೆರಿಕಾ ಫಸ್ಟ್’ ಮತ್ತು ಇತರ ದೇಶಗಳಿಗೆ ಬೆದರಿಕೆ ತಂತ್ರವಾಗಿ ಕಠಿಣ ಸುಂಕ ವಿಧಿಸುವ ನೀತಿಗಳಿಗೆ ಭಾರತ ಮತ್ತು ಯುರೋಪ್ ಜಂಟಿಯಾಗಿ ನೀಡಿರುವ ಪ್ರಬಲ ಉತ್ತರ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಒಪ್ಪಂದದಿಂದಾಗಿ 200 ಕೋಟಿ ಜನಸಂಖ್ಯೆಯನ್ನು ಒಳಗೊಂಡ ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ವಲಯ ಸೃಷ್ಟಿಯಾಗಿದೆ. ಯುರೋಪ್ ತನ್ನ ಮಾರುಕಟ್ಟೆಗೆ ಬರುವ ಶೇ. 99.5ರಷ್ಟು ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಇದಕ್ಕೆ ಪ್ರತಿಯಾಗಿ ಭಾರತವು ಶೇ. 96.6ರಷ್ಟು ಯುರೋಪಿಯನ್ ಉತ್ಪನ್ನಗಳಿಗೆ ರಿಯಾಯಿತಿ ನೀಡಲಿದೆ.
ಯುರೋಪಿಯನ್ ಕಾರುಗಳ ಮೇಲಿನ ಆಮದು ಸುಂಕವನ್ನು ಶೇ. 110ರಿಂದ ಹಂತ ಹಂತವಾಗಿ ಶೇ. 10ಕ್ಕೆ ಇಳಿಸಲು ಭಾರತ ಒಪ್ಪಿದೆ.ಭಾರತದ ಜವಳಿ, ರತ್ನ ಮತ್ತು ಆಭರಣ, ಚರ್ಮೋದ್ಯೋಗ ಮತ್ತು ಸಾಗರ ಉತ್ಪನ್ನಗಳಿಗೆ ಯುರೋಪಿನಲ್ಲಿ ಭಾರಿ ಬೇಡಿಕೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೂ ಸುಮಾರು 70 ಲಕ್ಷದ ವರೆಗೆ ಉದ್ಯೋಗ ಸೃಷ್ಟಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಒಪ್ಪಂದ ಟ್ರಂಪ್‌ಗೆ ‘ಟಕ್ಕರ್’ ಹೇಗೆ?
ಸುಮಾರು ಎರಡು ಶತಕೋಟಿ ಜನರನ್ನು ಮತ್ತು ಜಾಗತಿಕ ಆರ್ಥಿಕ ಉತ್ಪಾದನೆಯ ಸುಮಾರು ಕಾಲು ಭಾಗದಷ್ಟು ಜನರನ್ನು ಒಳಗೊಳ್ಳುವ ಈ ಒಪ್ಪಂದವು  ಇದುವರೆಗೆ ಸಹಿ ಹಾಕಿದ ಅತಿದೊಡ್ಡ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಅಮೆರಿಕಾ ಫಸ್ಟ್’ ಮತ್ತು ಕಠಿಣ ಸುಂಕದ ನೀತಿಗಳಿಗೆ ಭಾರತ ಮತ್ತು ಯುರೋಪ್ ಜಂಟಿಯಾಗಿ ನೀಡಿರುವ ಪ್ರಬಲ ಉತ್ತರ ಎಂದು ಹೇಳಲಾಗುತ್ತಿದೆ. ಇದು ಟ್ರಂಪ್ ಅವರ ತಂತ್ರಗಳಿಗೆ ಹೇಗೆ ಸವಾಲಾಗುತ್ತದೆ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ. ಟ್ರಂಪ್ ಆಡಳಿತವು ಭಾರತದ ಮೇಲೆ ಶೇ. 50ರಷ್ಟು ಸುಂಕ ಹೇರುವ ಮೂಲಕ ಭಾರತವನ್ನು ತನಗೆ ಬೇಕಾದಂತೆ ಬಗ್ಗಿಸಲು ಪ್ರಯತ್ನಿಸಿತ್ತು. ಆದರೆ ಈಗ ಭಾರತಕ್ಕೆ ಯುರೋಪ್ ಎಂಬ ಪರ್ಯಾಯ ಬೃಹತ್ ಮಾರುಕಟ್ಟೆ ಸಿಕ್ಕಿರುವುದರಿಂದ, ಅಮೆರಿಕದ ಈ ‘ಸುಂಕದ ಬೆದರಿಕೆ’ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಭಾರತವು ಅಮೆರಿಕದ ಮೇಲೆ ಅತಿಯಾಗಿ ಅವಲಂಬಿತವಾಗುವ ಅಗತ್ಯವಿರುವುದಿಲ್ಲ.
ಭಾರತದ ಮೇಲಿನ ಟ್ರಂಪ್ 50%ರಷ್ಟು ಸುಂಕಕ್ಕೆ ಪರ್ಯಾಯ ಮಾರ್ಗ
ಟ್ರಂಪ್ ಆಡಳಿತವು ಭಾರತೀಯ ಉತ್ಪನ್ನಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದೆ. ಇದು ಭಾರತದ ರಫ್ತುದಾರರಿಗೆ ಹೊಡೆತ ನೀಡಿತ್ತು. ಈಗ ಯುರೋಪ್ ಜೊತೆಗಿನ ಒಪ್ಪಂದದಿಂದಾಗಿ, ಭಾರತೀಯ ರಫ್ತುದಾರರಿಗೆ ಅಮೆರಿಕಕ್ಕೆ ಪರ್ಯಾಯವಾಗಿ ವಿಶ್ವದ ಅತಿದೊಡ್ಡ ಮಾರುಕಟ್ಟೆ (EU) ತೆರೆದಂತಾಗಿದೆ. ಇದರಿಂದ ಭಾರತದ ಉತ್ಪನ್ನಗಳಿಗೆ ಅಮೆರಿಕದ ಸುಂಕದ ಪ್ರಭಾವ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.
 ಅಮೆರಿಕನ್ ಕಂಪನಿಗಳಿಗೆ ಯಾಕೆ ಅನಾನುಕೂಲ 
ಯುರೋಪಿಯನ್ ಕಾರುಗಳು, ಯಂತ್ರೋಪಕರಣಗಳು ಮತ್ತು ವೈನ್ ಮೇಲೆ ಭಾರತ ಸುಂಕ ಇಳಿಸಲಿದೆ. ಆದರೆ ಅಮೆರಿಕದ ಉತ್ಪನ್ನಗಳ ಮೇಲೆ ಇನ್ನೂ ಹೆಚ್ಚಿನ ಸುಂಕ ಮುಂದುವರಿಯಲಿದೆ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಅಮೆರಿಕದ ಕಂಪನಿಗಳಿಗಿಂತ ಯುರೋಪಿಯನ್ ಕಂಪನಿಗಳು ಹೆಚ್ಚು ಲಾಭ ಪಡೆಯುತ್ತವೆ. ಇದು ಟ್ರಂಪ್ ಮೇಲೆ ಆಂತರಿಕವಾಗಿ (ಅಮೆರಿಕನ್ ಉದ್ಯಮಿಗಳಿಂದ) ಒತ್ತಡ ತರಲು ಕಾರಣವಾಗಬಹುದು.
ಭಾರತವು ಯುರೋಪಿಯನ್ ಕಾರುಗಳು, ಯಂತ್ರೋಪಕರಣಗಳು ಮತ್ತು ಕೃಷಿ ಉತ್ಪನ್ನಗಳ ಮೇಲೆ ಸುಂಕ ಇಳಿಸಲಿದೆ.
ಉದಾಹರಣೆಗೆ: ಜರ್ಮನಿಯ ಕಾರುಗಳು ಭಾರತದಲ್ಲಿ ಅಗ್ಗವಾಗುತ್ತವೆ, ಆದರೆ ಅಮೆರಿಕದ ಕಾರುಗಳ ಮೇಲೆ ಇನ್ನೂ ಹೆಚ್ಚಿನ ಸುಂಕ ಇರುತ್ತದೆ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಅಮೆರಿಕದ ಕಂಪನಿಗಳು ಯುರೋಪಿಯನ್ ಕಂಪನಿಗಳ ಎದುರು ಸ್ಪರ್ಧಿಸಲು ಸಾಧ್ಯವಾಗದೆ ಹಿಂದೆ ಬೀಳುತ್ತವೆ. ಇದು ಅಮೆರಿಕದ ರಫ್ತು ವಲಯಕ್ಕೆ ದೊಡ್ಡ ಹೊಡೆತ ನೀಡಬಹುದು.
 ಅಮೆರಿಕದ ‘ಸುಂಕ ಆಯುಧೀಕರಣ’ಕ್ಕೆ ಬ್ರೇಕ್
ಟ್ರಂಪ್ ಅವರು ಬೇರೆ ದೇಶಗಳ ಮೇಲೆ ಸುಂಕದ ಬೆದರಿಕೆ ಹಾಕಿ ವ್ಯಾಪಾರವನ್ನು ಒಂದು ಆಯುಧವಾಗಿ ಬಳಸುತ್ತಿದ್ದರು (Trade Weaponization). ಆದರೆ ಭಾರತ ಮತ್ತು ಯುರೋಪ್ ಕೈಜೋಡಿಸಿರುವುದು “ನೀವು ಬಾಗಿಲು ಮುಚ್ಚಿದರೆ, ನಾವು ಬೇರೆ ದಾರಿ ಕಂಡುಕೊಳ್ಳುತ್ತೇವೆ” ಎಂದು ಅಮೆರಿಕಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  ಇದು ಮುಂದಿನ ದಿನಗಳಲ್ಲಿ ಟ್ರಂಪ್ ಅವರ ಏಕಪಕ್ಷೀಯ ನಿರ್ಧಾರಗಳ ಶಕ್ತಿಯನ್ನು ಕುಂದಿಸುತ್ತದೆ.
ಕಡಿಮೆಯಾಗಲಿದೆ ಅಮೆರಿಕ-ಚೀನಾ ಅವಲಂಬನೆ 
ಈ ಒಪ್ಪಂದದಿಂದ ಯುರೋಪ್ ದೇಶಗಳಿಗೆ  ಅಮೆರಿಕ ಮತ್ತು ಚೀನಾದ ಉತ್ಪನ್ನ ಹಾಗೂ ಆರ್ಥಿಕ ಅವಲಂಬನೆ ಕಡಿಮೆಯಾಗಲಿದೆ.  ಭಾರತವು ಕೂಡ ಅಮೆರಿಕದ ಅನಿಶ್ಚಿತ ನೀತಿಗಳ ಪರಿಣಾಮವನ್ನು ಎದುರಿಸುತ್ತಿರುವುದರಿಂದ ಮುಂದೆ ಇದು ಭಾರತದ ಆರ್ಥಿಕತೆಯನ್ನು ಸುಸ್ಥಿರತೆ ಹಾಗೂ ಬೆಳವಣಿಗೆಗೆ ಸಹಾಯ ಮಾಡಲಿದೆ.
ಈ ಒಪ್ಪಂದವು ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ; ಇದು ಟ್ರಂಪ್ ಯುಗದ ಸುಂಕವೆಂಬ ಬೆದರಿಕೆಯ ಆರ್ಥಿಕ ನೀತಿಗಳ ವಿರುದ್ಧ ಜಾಗತಿಕ ಶಕ್ತಿಗಳು ಒಗ್ಗೂಡಿ ನಡೆಸುತ್ತಿರುವ ‘ಆರ್ಥಿಕ ಯುದ್ಧತಂತ್ರ’ ಎಂದು ಹೇಳಬಹುದಾಗಿದೆ.
‘ಡಾಲರ್’ ಮೇಲಿನ ಅವಲಂಬನೆ ಕಡಿಮೆ
ಯುರೋಪ್ ಮತ್ತು ಭಾರತ ತಮ್ಮ ವ್ಯಾಪಾರವನ್ನು ಯುರೋ (Euro) ಅಥವಾ ರೂಪಾಯಿ (Rupee) ಮೂಲಕ ನಡೆಸಲು ಮುಂದಾದರೆ, ಜಾಗತಿಕವಾಗಿ ಅಮೆರಿಕನ್ ಡಾಲರ್ ಹೊಂದಿರುವ ಏಕಸ್ವಾಮ್ಯಕ್ಕೆ ಧಕ್ಕೆಯಾಗುತ್ತದೆ. ಇದು ಅಮೆರಿಕದ ಆರ್ಥಿಕ ಪ್ರಭಾವವನ್ನು ಜಾಗತಿಕ ಮಟ್ಟದಲ್ಲಿ ಕುಗ್ಗಿಸಬಹುದು.
ಒಟ್ಟಾರೆಯಾಗಿ ಈ ಒಪ್ಪಂದವು ಟ್ರಂಪ್ ಅವರ ಸುಂಕದ ಮೂಲಕ ಬೆರಿಸುವ ನೀತಿಯನ್ನು ಸೋಲಿಸಬಹುದು ಮತ್ತು ಜಗತ್ತು ಅಮೆರಿಕವಿಲ್ಲದೆಯೇ ದೊಡ್ಡ ವ್ಯಾಪಾರಗಳನ್ನು ನಡೆಸಬಲ್ಲದು ಎಂಬ ಸಂದೇಶವನ್ನು ನೀಡಬಹುದು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement