ಆಸ್ಟ್ರೇಲಿಯಾಕ್ಕೆ ತಮ್ಮ ಸಾಕು ನಾಯಿ ಕರೆದೊಯ್ಯಲು 190 ದಿನ ಕಾಯ್ದು, 15 ಲಕ್ಷ ರೂ. ಖರ್ಚು ಮಾಡಿದ ಭಾರತೀಯ ದಂಪತಿ….!

ಹೈದರಾಬಾದ್: ಅನೇಕ ಸಾಕುಪ್ರಾಣಿ ಪ್ರೇಮಿಗಳಿಗೆ ತಮ್ಮ ಪ್ರಾಣಿಗಳು ಕೇವಲ ಪ್ರಾಣಿಗಳಲ್ಲ, ಮನೆಯ ಸದಸ್ಯರು. ಇದಕ್ಕೆ ಸಾಕ್ಷಿಯೆಂಬಂತೆ ಭಾರತೀಯ ದಂಪತಿಯೊಬ್ಬರು ತಮ್ಮ ನೆಚ್ಚಿನ ನಾಯಿಯನ್ನು ವಿದೇಶಕ್ಕೆ ಕರೆದೊಯ್ಯಲು ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
‘ಕಹಾನಿ ಆಫ್ ಟೇಲ್ಸ್’ (Kahaani of Tales) ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಹೈದರಾಬಾದ್ ಮೂಲದ ದಿವ್ಯಾ ಮತ್ತು ಜಾನ್ ದಂಪತಿ ಉದ್ಯೋಗ ನಿಮಿತ್ತ ಭಾರತದಿಂದ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದರು. ಆದರೆ ಅವರ ಮುಂದಿದ್ದ ದೊಡ್ಡ ಸವಾಲು ತಮ್ಮ ಮುದ್ದಿನ ನಾಯಿ ‘ಸ್ಕೈ’. ಯಾಕೆಂದರೆ ಆಸ್ಟ್ರೇಲಿಯಾದ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ಭಾರತದಿಂದ ನೇರವಾಗಿ ನಾಯಿಗಳನ್ನು ಆಮದು ಮಾಡಿಕೊಳ್ಳಲು ಅವಕಾಶವಿಲ್ಲ. ಭಾರತವು ‘ರೇಬಿಸ್ ಮುಕ್ತ’ ರಾಷ್ಟ್ರವಲ್ಲದ ಕಾರಣ, ಸಾಕುಪ್ರಾಣಿಗಳು ಆಸ್ಟ್ರೇಲಿಯಾ ಪ್ರವೇಶಿಸುವ ಮೊದಲು ಯಾವುದಾದರೊಂದು ಅನುಮೋದಿತ ರೇಬಿಸ್ ಮುಕ್ತ ದೇಶದಲ್ಲಿ 6 ತಿಂಗಳು ಕಳೆಯಬೇಕಾಗುತ್ತದೆ.
 ದಂಪತಿಯ ನಿರ್ಧಾರ
“ಒಂದು ನಾಯಿಗಾಗಿ 15 ಲಕ್ಷ ರೂ. ಖರ್ಚು ಮಾಡುವ ಬದಲು, ಅಲ್ಲಿಯೇ ಹೊಸ ನಾಯಿಯನ್ನು ದತ್ತು ತೆಗೆದುಕೊಳ್ಳಿ” ಎಂದು ಅನೇಕರು ಇವರಿಗೆ ಸಲಹೆ ನೀಡಿದ್ದರು. ಆದರೆ ದಿವ್ಯಾ ಮತ್ತು ಜಾನ್ ಈ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. “ನಮಗೆ ಸ್ಕೈ ಕೇವಲ ನಾಯಿಯಲ್ಲ, ನಮ್ಮ ಮಗು” ಎಂದು ದಂಪತಿ ತಮ್ಮ ನಿಲುವಿಗೆ ಬದ್ಧರಾಗಿದ್ದರು.
ದುಬೈನಲ್ಲಿ 6 ತಿಂಗಳ ವಾಸ
ನಿಯಮಗಳ ಪ್ರಕಾರ, ಸ್ಕೈ ಮೊದಲು ರೇಬಿಸ್ ಮುಕ್ತ ದೇಶವಾದ ದುಬೈಗೆ ಪ್ರಯಾಣಿಸಬೇಕಾಯಿತು. ಸ್ಕೈಗೆ ಹೊಸ ವಾತಾವರಣ ಒಗ್ಗಿಕೊಳ್ಳಲಿ ಎಂಬ ಕಾರಣಕ್ಕೆ ದಂಪತಿ ಕೂಡ ಅದರ ಜೊತೆ ಮೊದಲ ಒಂದು ತಿಂಗಳು ದುಬೈನಲ್ಲಿ ತಂಗಿದ್ದರು. ನಂತರ ಸ್ಕೈ ಉಳಿದ ತಿಂಗಳುಗಳನ್ನು ಅಲ್ಲಿನ ಬೋರ್ಡಿಂಗ್ ಸೆಂಟರ್‌ನಲ್ಲಿ ಕಳೆದಿತ್ತು. ಈ 190 ದಿನಗಳ ಪ್ರಕ್ರಿಯೆಯಲ್ಲಿ ಸಂಕೀರ್ಣವಾದ ದಾಖಲೆಗಳು, ವೈದ್ಯಕೀಯ ಪರೀಕ್ಷೆಗಳು, ಲಸಿಕೆಗಳು ಮತ್ತು ಕ್ವಾರಂಟೈನ್ ನಿಯಮಗಳನ್ನು ಪೂರೈಸಲು ದಂಪತಿಗೆ ಸುಮಾರು 14 ರಿಂದ 16 ಲಕ್ಷ ರೂಪಾಯಿ ವೆಚ್ಚವಾಯಿತು.
ಅಂತಿಮವಾಗಿ….
ದಿನನಿತ್ಯದ ವೀಡಿಯೊ ಕಾಲ್‌ಗಳು ಮತ್ತು ಅತೀವ ಕಾತರದ ನಂತರ, ಅಂತಿಮವಾಗಿ ಸ್ಕೈ ಆಸ್ಟ್ರೇಲಿಯಾ ತಲುಪಿದೆ. “ಆ ಆರು ತಿಂಗಳುಗಳು ಯುಗದಂತೆ ಭಾಸವಾದವು. ಆದರೆ ಸ್ಕೈ ನಮ್ಮನ್ನು ಸೇರಿದಾಗ ಪಟ್ಟ ಕಷ್ಟವೆಲ್ಲಾ ಸಾರ್ಥಕ ಎನಿಸಿತು. ಸ್ಕೈಗಾಗಿ ನಾವು ಈ ಸಾಹಸವನ್ನು ಎಷ್ಟು ಬಾರಿಯಾದರೂ ಮಾಡಲು ಸಿದ್ಧ” ಎಂದು ದಂಪತಿ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದಂಪತಿಯ ಪ್ರಾಣಿ ಪ್ರೇಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಾಣಿಗಳು ಕೇವಲ ಆಸ್ತಿಯಲ್ಲ, ಅವು ಕುಟುಂಬದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಈ ಕಥೆ ಸಾರುತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement