ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಪ್ರಮಾಣ ವಚನ

ಮುಂಬೈ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕ ಅಜಿತ್ ಪವಾರ್ ಅವರ ನಿಧನದ ನಂತರ, ಅವರ ಪತ್ನಿ ಸುನೇತ್ರಾ ಪವಾರ್ ಅವರು ಇಂದು, ಶನಿವಾರ (ಜ.೩೧) ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಅವರು ಮಹಾರಾಷ್ಟ್ರದ ಇತಿಹಾಸದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ.
ಕೆಲವೇ ದಿನಗಳ ಹಿಂದೆ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದರು. ಸುನೇತ್ರಾ ಪವಾರ್ ಅವರಿಗೆ ಅಬಕಾರಿ, ಕ್ರೀಡೆ ಮತ್ತು ಯುವ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ. ಅಜಿತ್ ಪವಾರ್ ನಿರ್ವಹಿಸುತ್ತಿದ್ದ ಹಣಕಾಸು ಮತ್ತು ಯೋಜನಾ ಖಾತೆಗಳನ್ನು ಸದ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೇ ಉಳಿಸಿಕೊಂಡಿದ್ದಾರೆ.

ನಾಯಕಿಯಾಗಿ ಸುನೇತ್ರಾ ಆಯ್ಕೆ
ಶನಿವಾರ ನಡೆದ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ 62 ವರ್ಷದ ಸುನೇತ್ರಾ ಪವಾರ್ ಅವರನ್ನು ಸರ್ವಾನುಮತದಿಂದ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಹಿರಿಯ ನಾಯಕ ಛಗನ್ ಭುಜಬಲ್ ಅವರ ಹೆಸರನ್ನು ಪ್ರಸ್ತಾಪಿಸಿದರೆ, ದಿಲೀಪ ಪಾಟೀಲ ಮತ್ತು ಇತರ ಶಾಸಕರು ಅನುಮೋದಿಸಿದರು.
ಭಾವನಾತ್ಮಕ ಪ್ರತಿಕ್ರಿಯೆಗಳು
ಅಜಿತ್ ಪವಾರ್ ಅವರ ಸಂಬಂಧಿ ಹಾಗೂ ಶಾಸಕ ರೋಹಿತ್ ಪವಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಅಜಿತ್ ದಾದಾ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಆದರೆ ಸುನೇತ್ರಾಬಾಯಿ ಅವರ ರೂಪದಲ್ಲಿ ನಾವು ದಾದಾ ಅವರನ್ನು ಕಾಣಬಹುದು. ದುಃಖದ ಬೆಟ್ಟವೇ ನಮ್ಮ ತಲೆಯ ಮೇಲಿರುವಾಗ, ಅಭಿನಂದನೆ ಸಲ್ಲಿಸುವುದು ಹೇಗೆ ಎಂಬುದು ನಮಗೆ ತಿಳಿಯುತ್ತಿಲ್ಲ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲು ಸಿದ್ಧ ಎಂದ ಪತ್ನಿ ; ಆದರೆ ಅದಕ್ಕೆ ಎರಡು ಷರತ್ತುಗಳು...

ಪಕ್ಷದ ವಿಲೀನ ಮತ್ತು ಮುಂದಿನ ಹಾದಿ
ಅಜಿತ್ ಪವಾರ್ ಅವರ ನಿಧನದ ನಂತರ ಎನ್‌ಸಿಪಿ (NCP) ಎರಡೂ ಬಣಗಳ ವಿಲೀನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, “ವಿಲೀನದ ಮಾತುಕತೆಗಳು ನಡೆಯುತ್ತಿರುವುದು ನಿಜ, ಆದರೆ ನಾನು ನೇರವಾಗಿ ಇದರಲ್ಲಿ ಭಾಗಿಯಾಗಿಲ್ಲ. ಇದು ಜಯಂತ ಪಾಟೀಲ ಮತ್ತು ಅಜಿತ್ ಪವಾರ್ ಬಣದ ನಡುವೆ ನಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಹಿನ್ನೆಲೆ
2024ರ ಲೋಕಸಭೆ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಅವರು ಬಾರಾಮತಿ ಕ್ಷೇತ್ರದಲ್ಲಿ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ಲೋಕಸಭೆ ಚುನಾವಣೆ ಸೋಲಿನ ನಂತರ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement