ಟಿ20 ವಿಶ್ವಕಪ್‌ 2026 : ಭಾರತದ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ಬಹಿಷ್ಕಾರ

ನವದೆಹಲಿ: ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿಯುವುದಿಲ್ಲ. ಆದರೆ, ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ತನ್ನ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕಣಕ್ಕಿಳಿಯುವುದಿಲ್ಲ. ಭಾನುವಾರ ಸಂಜೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ನಡುವಿನ ಸಭೆಯ ನಂತರ ಪಾಕಿಸ್ತಾನ ಸರ್ಕಾರ ಈ ನಿರ್ಧಾರವನ್ನು ಖಚಿತಪಡಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 20 ತಂಡಗಳ ಟೂರ್ನಿಯಿಂದ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ಅನ್ನು ಸೇರಿಸಿಕೊಂಡ ನಂತರ, ಬಾಂಗ್ಲಾದೇಶಕ್ಕೆ ಅನ್ಯಾಯವಾಗಿದೆ ಎಂದು ವಾದಿಸುತ್ತಾ ಪಿಸಿಬಿ ಮುಖ್ಯಸ್ಥರು ಐಸಿಸಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.
ಪಾಕಿಸ್ತಾನದ ಈ ನಿರ್ಧಾರದಿಂದಾಗಿ ಫೆಬ್ರವರಿ 15ರ ಪಂದ್ಯ ನಡೆಯುವುದಿಲ್ಲ. ಒಂದು ವೇಳೆ ಈ ಎರಡೂ ತಂಡಗಳು ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾದರೆ ಪಾಕಿಸ್ತಾನದ ನಿಲುವು ಏನಿರಲಿದೆ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪಾಕಿಸ್ತಾನದ ಸರ್ಕಾರದ ಅನುಮೋದನೆ
ಪಾಕಿಸ್ತಾನ ಸರ್ಕಾರವು ತನ್ನ ಕ್ರಿಕೆಟ್ ತಂಡಕ್ಕೆ 2026ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದೆ, ಆದರೆ ಭಾರತದ ವಿರುದ್ಧದ ಪಂದ್ಯವನ್ನು ಆಡಬಾರದು ಎಂದು ಸೂಚಿಸಿದೆ.
ಗುಂಪು ಹಂತ: ಪಾಕಿಸ್ತಾನ ತಂಡವು ಭಾರತ, ನಮೀಬಿಯಾ, ನೆದರ್ಲೆಂಡ್ಸ್ ಮತ್ತು ಯುಎಸ್ಎ ತಂಡಗಳೊಂದಿಗೆ ‘ಗ್ರೂಪ್ ಎ’ ನಲ್ಲಿದೆ. ಸಲ್ಮಾನ್ ಅಲಿ ಆಗಾ ನೇತೃತ್ವದ ತಂಡವು ಫೆಬ್ರವರಿ 7 ರಂದು ನೆದರ್ಲೆಂಡ್ಸ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಭಾರತಕ್ಕೆ ಲಾಭ: ಪಾಕಿಸ್ತಾನವು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ (Forfeiture), ಐಸಿಸಿ ನಿಯಮದಂತೆ ಭಾರತಕ್ಕೆ ಸುಲಭವಾಗಿ 2 ಅಂಕಗಳು ಸಿಗಲಿವೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ವಿವಾದ ಏನು?
ಈ ವಿವಾದವು ಮೂಲತಃ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮತ್ತು ಐಸಿಸಿ ನಡುವೆ ಇತ್ತು. ಬಿಸಿಸಿಐ ಆದೇಶದ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟ ನಂತರ, ಬಾಂಗ್ಲಾದೇಶವು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಭದ್ರತೆಯ ಕಾರಣ ನೀಡಿ ಬಾಂಗ್ಲಾದೇಶ ಹಿಂದೆ ಸರಿದಾಗ ಐಸಿಸಿ ಸ್ಕಾಟ್ಲೆಂಡ್ ತಂಡವನ್ನು ಟೂರ್ನಿಗೆ ಸೇರಿಸಿಕೊಂಡಿತು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಈಗ ಭಾರತದ ವಿರುದ್ಧದ ಪಂದ್ಯವನ್ನೇ ಬಹಿಷ್ಕರಿಸಲು ನಿರ್ಧರಿಸಿದೆ.
ಐಸಿಸಿ ಕ್ರಮ ಕೈಗೊಳ್ಳಲಿದೆಯೇ?
ಭಾರತದ ವಿರುದ್ಧ ಆಡದಿರುವ ನಿರ್ಧಾರವು ಟೂರ್ನಿಯ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ಪಾಕಿಸ್ತಾನದ ಮನವಿಯಂತೆ ತಟಸ್ಥ ವೇದಿಕೆಯಲ್ಲಿ ಪಂದ್ಯ ಆಯೋಜಿಸಲು ಐಸಿಸಿ ಒಪ್ಪಿಕೊಂಡಿತ್ತು. ಹೀಗಿರುವಾಗ ಪಾಕಿಸ್ತಾನದ ಈಗಿನ ಹಠಮಾರಿ ಧೋರಣೆಗೆ ಯಾವುದೇ ತಾರ್ಕಿಕ ಕಾರಣಗಳಿಲ್ಲ ಮತ್ತು ಇದು ರಾಜಕೀಯ ಪ್ರೇರಿತ ಎಂದು ಹೇಳಲಾಗುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement