
ನವದೆಹಲಿ: ಮಂಗಳವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ವಾಟ್ಸಾಪ್ ಮತ್ತು ಅದರ ಮಾಲೀಕತ್ವದ ಮೆಟಾ (Meta) ಸಂಸ್ಥೆಯ ‘ಒಪ್ಪಿಕೊಳ್ಳಿ ಅಥವಾ ಬಿಟ್ಟುಬಿಡಿ’ (Take it or leave it) ಎಂಬ ವಿವಾದಾತ್ಮಕ ಗೌಪ್ಯತಾ ನೀತಿಯನ್ನು ತೀವ್ರವಾಗಿ ಟೀಕಿಸಿದೆ. ಈ ನೀತಿಯು “ಖಾಸಗಿ ಮಾಹಿತಿಯ ಕಳ್ಳತನಕ್ಕೆ” ದಾರಿ ಮಾಡಿಕೊಡುವಂತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು.
ಸಿಜೆಐ ಸೂರ್ಯ ಕಾಂತ ಅವರು ವಾಟ್ಸಾಪ್ ವಕೀಲರನ್ನು ಪ್ರಶ್ನಿಸುತ್ತಾ, “ಬಳಕೆದಾರರಿಗೆ ಈ ನೀತಿಯಿಂದ ಹೊರಬರಲು (Opt-out) ಆಯ್ಕೆ ಎಲ್ಲಿದೆ? ನಿಮ್ಮ ಮೊಬೈಲ್‌ನಲ್ಲಿ ತೋರಿಸಿ. ಇದು ಖಾಸಗಿ ಮಾಹಿತಿಯನ್ನು ಕದಿಯುವ ಒಂದು ಸುಸಂಸ್ಕೃತ ಮಾರ್ಗ! ಗ್ರಾಹಕರು ಈ ಆಪ್‌ಗೆ ದಾಸರಾಗುವಂತೆ ನೀವು ಮಾಡಿದ್ದೀರಿ. ಪ್ರತಿಯೊಬ್ಬರೂ ಇದನ್ನು ಬಳಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ಸಾಮಾನ್ಯ ಬಳಕೆದಾರನಿಗೆ ತನಗೆ ಈ ನೀತಿಯಿಂದ ಹೊರಬರುವ ಹಕ್ಕಿದೆ ಎಂದು ಹೇಗೆ ತಿಳಿಯುತ್ತದೆ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ವ್ಯಕ್ತಿ ಅಥವಾ ಬೀದಿ ಬದಿ ವ್ಯಾಪಾರಿಗೆ ನಿಮ್ಮ ಜಟಿಲವಾದ ನಿಯಮಗಳು ಹೇಗೆ ಅರ್ಥವಾಗುತ್ತವೆ? ನಿಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ ಇದನ್ನು ಕೇಳಿ ನೋಡಿ, ಅವರಿಗೆ ಅರ್ಥವಾಗುತ್ತದೆಯೇ? ಎಂದು ನ್ಯಾಯಾಲಯ ಪ್ರಶ್ನಿಸಿತು.
“ದತ್ತಾಂಶ ಹಂಚಿಕೆಯ ಹೆಸರಿನಲ್ಲಿ ನೀವು ಈ ದೇಶದ ಜನರ ಖಾಸಗಿತನದ ಹಕ್ಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ. ನೀವು ಈ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಅಪಹಾಸ್ಯ ಮಾಡುತ್ತಿದ್ದೀರಿ. ನೀವು ಏಕಸ್ವಾಮ್ಯವನ್ನು (Monopoly) ಸೃಷ್ಟಿಸಿದ್ದೀರಿ, ಗ್ರಾಹಕರಿಗೆ ಬೇರೆ ಆಯ್ಕೆಯೇ ಇಲ್ಲದಂತಾಗಿದೆ,” ಎಂದು ಸಿಜೆಐ ಎಚ್ಚರಿಸಿದರು.
2021ರಲ್ಲಿ ವಾಟ್ಸಾಪ್ ತನ್ನ ಗೌಪ್ಯತಾ ನೀತಿಯನ್ನು ನವೀಕರಿಸಿತ್ತು. ಈ ಹಿಂದೆ ಫೇಸ್‌ಬುಕ್ ಜೊತೆಗೆ ದತ್ತಾಂಶ ಹಂಚಿಕೊಳ್ಳದಿರಲು ಬಳಕೆದಾರರಿಗೆ ಅವಕಾಶವಿತ್ತು (Opt-out option), ಆದರೆ 2021ರ ನೀತಿಯಲ್ಲಿ ಮೆಟಾ ಸಂಸ್ಥೆಯೊಂದಿಗೆ ದತ್ತಾಂಶ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಯಿತು.
ಇದನ್ನು ಪ್ರಶ್ನಿಸಿದ್ದ ಭಾರತೀಯ ಸ್ಪರ್ಧಾ ಆಯೋಗ (CCI), ವಾಟ್ಸಾಪ್ ತನ್ನ ಮಾರುಕಟ್ಟೆ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ₹213.14 ಕೋಟಿ ದಂಡ ವಿಧಿಸಿತ್ತು. ಈ ದಂಡವನ್ನು ಎನ್‌ಸಿಎಲ್‌ಎಟಿ (NCLAT) ಎತ್ತಿ ಹಿಡಿದಿತ್ತು, ಇದನ್ನು ಪ್ರಶ್ನಿಸಿ ವಾಟ್ಸಾಪ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸಿಸಿಐ ಪರ ವಕೀಲ ಸಮರ ಬನ್ಸಾಲ್ ಅವರು, “ವಾಟ್ಸಾಪ್ ಉಚಿತವಾಗಿರುವುದರಿಂದ ನಾವೇ ಅಲ್ಲಿ ‘ಉತ್ಪನ್ನಗಳು’ (Products). ಜಾಹೀರಾತುಗಳೇ ಅವರ ಆದಾಯದ ಮೂಲ ಎಂದು ವಾದಿಸಿದರು.
“ನೀವು ನಿಮ್ಮ ವೈದ್ಯರಿಗೆ ಮೆಸೇಜ್‌ನಲ್ಲಿ ಔಷಧಿಯ ಹೆಸರು ಕೇಳಿದರೆ, ಮುಂದಿನ 5 ನಿಮಿಷಗಳಲ್ಲಿ ನಿಮಗೆ ಅದೇ ಔಷಧಿಯ ಜಾಹೀರಾತುಗಳು ಬರಲು ಶುರುವಾಗುತ್ತವೆ,” ಎಂದು ಸಿಜೆಐ ಕಳವಳ ವ್ಯಕ್ತಪಡಿಸಿದರು. ಆದರೆ ವಾಟ್ಸಾಪ್ ಪರ ವಕೀಲ ಮುಕುಲ್ ರೋಹಟಗಿ ಅವರು, “ವಾಟ್ಸಾಪ್ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ, ಅವುಗಳನ್ನು ನಾವು ಓದಲು ಸಾಧ್ಯವಿಲ್ಲ,” ಎಂದು ಸಮರ್ಥಿಸಿಕೊಂಡರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿ, “ನಮ್ಮ ವೈಯಕ್ತಿಕ ದತ್ತಾಂಶವನ್ನು ಕೇವಲ ಮಾರಾಟ ಮಾಡಲಾಗುತ್ತಿಲ್ಲ, ಬದಲಾಗಿ ವಾಣಿಜ್ಯಿಕವಾಗಿ ಶೋಷಣೆ ಮಾಡಲಾಗುತ್ತಿದೆ. ನನ್ನ ಖಾಸಗಿ ಜೀವನದ ದತ್ತಾಂಶಕ್ಕೆ ಹಣದ ಮೌಲ್ಯವಿದೆ ಎಂದರು.
ನ್ಯಾಯಾಲಯವು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಒಂದು ಪಕ್ಷವಾಗಿ ಸೇರಿಸಿಕೊಂಡಿದೆ. ವಾಟ್ಸಾಪ್ ತನ್ನ ಗೌಪ್ಯತಾ ನೀತಿ ಮತ್ತು ದತ್ತಾಂಶ ಹಂಚಿಕೆಯ ಬಗ್ಗೆ ವಿವರವಾದ ಪ್ರಮಾಣಪತ್ರವನ್ನು (Affidavit) ಸಲ್ಲಿಸಬೇಕು ಎಂದು ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 9 ಕ್ಕೆ ಮುಂದೂಡಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ