ಕ್ವಿಂಡಲಪ್ : “ಅತಿ ಮಾನವ” ಎಂದು ಹೇಳಬಹುದಾದ ಒಂದು ಘಟನೆಯಲ್ಲಿ, ಪರ್ತ್‌ನ 13 ವರ್ಷದ ಬಾಲಕ ಆಳ ಸಮುದ್ರದಲ್ಲಿ ಸಿಲುಕಿದ್ದ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರನ್ನು ರಕ್ಷಿಸಲು ಪಶ್ಚಿಮ ಆಸ್ಟ್ರೇಲಿಯಾದ ಒರಟಾದ ಸಮುದ್ರದ ಅಲೆಗಳ ಮಧ್ಯೆ ನಾಲ್ಕು ಗಂಟೆಗಳ ಕಾಲ ಈಜಿರುವ ಘಟನೆ ನಡೆದಿದೆ.
ಜನವರಿ 30 ರಂದು ಕ್ವಿಂಡಲಪ್‌ನಲ್ಲಿ ವಿಹಾರಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಗಾರ್ಡಿಯನ್ ಪ್ರಕಾರ, ಬಲವಾದ ಗಾಳಿ ಮತ್ತು ಭೀಕರ ಅಲೆಗಳು ಬಾಲಕ ಆಸ್ಟಿನ್ ಅಪ್ಪೆಲ್ಬೀ, ಆತನ ತಾಯಿ ಜೋನ್ನೆ (47), ಸಹೋದರ ಬ್ಯೂ (12), ಮತ್ತು ಸಹೋದರಿ ಗ್ರೇಸ್ (8) ಸೇರಿದಂತೆ ಇಡೀ ಕುಟುಂಬವನ್ನು ತೀರದಿಂದ ಅತಿ ದೂರಕ್ಕೆ ಕೊಚ್ಚಿಕೊಂಡು ಹೋದವು. ಅವರು ಬಾಡಿಗೆಗೆ ಪಡೆದಿದ್ದ ಪ್ಯಾಡಲ್‌ಬೋರ್ಡ್ ಹಾಗೂ ಕಯಾಕ್ ಸಹಾಯದಿಂದ ಸಮುದ್ರಕ್ಕೆ ಇಳಿದಿದ್ದರು.
ಪ್ರಾಣ ಪಣಕ್ಕಿಟ್ಟು ಈಜಿದ ಆಸ್ಟಿನ್
ಕುಟುಂಬ ಆಳ ಸಮುದರಕ್ಕೆ ಕೊಚ್ಚಿಕೊಂಡು ಹೋದ ನಂತರ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಬಾಲಕ ಆಸ್ಟಿನ್, ಧೈರ್ಯಗುಂದದೆ ತನ್ನ ಕಯಾಕ್ ಅನ್ನು ದಡದತ್ತ ನಡೆಸಲು ಪ್ರಯತ್ನಿಸಿದ್ದಾನೆ. ಆದರೆ ಅಲೆಗಳ ಅಬ್ಬರಕ್ಕೆ ಕಯಾಕ್ ಸಿಲುಕಿದಾಗ, ಇದನ್ನು ನಂಬಿದರೆ ಪ್ರಯೋಜನವಿಲ್ಲವೆಂದು ಆತ ನೀರಿಗೆ ಜಿಗಿದು ಈಜಲು ನಿರ್ಧರಿಸಿದ್ದಾನೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈಜುವ ವೇಗವನ್ನು ಹೆಚ್ಚಿಸಲು ಆತ ತೆಗೆದುಕೊಂಡ ನಿರ್ಧಾರ. ಮೊದಲ ಎರಡು ಗಂಟೆಗಳ ಕಾಲ ಲೈಫ್ ಜಾಕೆಟ್ ಧರಿಸಿಯೇ ಈಜಿದ ಆಸ್ಟಿನ್, ಅದರಿಂದ ವೇಗವಾಗಿ ಈಜಲು ಸಾಧ್ಯವಾಗುವುದಿಲ್ಲ ಎಂದು ಮನಗಂಡು ಅದನ್ನು ತೆಗೆದುಹಾಕಿ ಕೊನೆಯ ಎರಡು ಗಂಟೆಗಳ ಕಾಲ ಲೈಫ್ ಜಾಕೆಟ್ ಇಲ್ಲದೆಯೇ ಅಪಾಯಕಾರಿ ಅಲೆಗಳ ನಡುವೆ ಈಜಿ ದಡ ಸೇರಿದ್ದಾನೆ.
ದಡಕ್ಕೆ ಬಂದಾಗ ಆಸ್ಟಿನ್ ಕುಸಿದುಬಿದ್ದಿದ್ದಾನೆ, ಆತ ಸಂಪೂರ್ಣವಾಗಿ ಸುಸ್ತಾಗಿದ್ದರೂ ನಂತರ ಎದ್ದು ದಡದಿಂದ ಸುಮಾರು 2 ಕಿಲೋಮೀಟರ್‌ಗಳಷ್ಟು ದೂರ ಓಡಿ ಹೋಗಿ ಫೋನ್ ಸಂಪರ್ಕ ಸಾಧಿಸಿ, ಸಂಜೆ 6 ಗಂಟೆಯ ಸುಮಾರಿಗೆ ರಕ್ಷಣಾ ತಂಡಕ್ಕೆ ತನ್ನ ತಾಯಿ ಹಾಗೂ ತಮ್ಮ-ತಂಗಿ ಸಮುದ್ರದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
ಬೃಹತ್ ರಕ್ಷಣಾ ಕಾರ್ಯಾಚರಣೆ
ಆಸ್ಟಿನ್ ನೀಡಿದ ನಿಖರ ಮಾಹಿತಿಯ ಆಧಾರದ ಮೇಲೆ ಹೆಲಿಕಾಪ್ಟರ್‌ಗಳು ಮತ್ತು ಬೋಟ್‌ಗಳನ್ನೊಳಗೊಂಡ ಬಹು-ಏಜೆನ್ಸಿ ರಕ್ಷಣಾ ತಂಡವು ಕಾರ್ಯಾಚರಣೆ ಆರಂಭಿಸಿತು. ರಾತ್ರಿ 8:30ರ ಸುಮಾರಿಗೆ, ತೀರದಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿ ಒಂದೇ ಒಂದು ಪ್ಯಾಡಲ್‌ಬೋರ್ಡ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಬದುಕುಳಿದಿದ್ದ, ಆದರೆ ಪ್ರಾಣಾಪಾಯದಲ್ಲಿದ್ದ ತಾಯಿ ಮತ್ತು ಇಬ್ಬರು ಮಕ್ಕಳನ್ನು ಪತ್ತೆಹಚ್ಚಲಾಯಿತು.
ಸಮುದ್ರ ರಕ್ಷಣಾ ನೌಕೆಯು ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿತು. ಕೇವಲ ಒಂದು ಗಂಟೆಯೊಳಗೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದು ಆಸ್ಟಿನ್ ನೀಡಿದ ನಿಖರ ಮಾಹಿತಿಯಿಂದ. ಇದರಿಂದ ತಮ್ಮ ಉಪಕರಣಗಳಿಗೆ ಪತ್ತೆ ಅವರನ್ನು ತಕ್ಷಣವೇ ಹಚ್ಚಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಶ್ಲಾಘನೆ
“ಆ ಮೂವರೂ ಲೈಫ್ ಜಾಕೆಟ್ ಧರಿಸಿದ್ದರು. ಆದರೆ 13 ವರ್ಷದ ಈ ಬಾಲಕನ ಧೈರ್ಯ ಮತ್ತು ದೃಢಸಂಕಲ್ಪವನ್ನು ಎಷ್ಟು ಕೊಂಡಾಡಿದರೂ ಸಾಲದು. ಆತ ತನ್ನ ತಾಯಿ ಮತ್ತು ಒಡಹುಟ್ಟಿದವರ ಜೀವ ಉಳಿಸಿದ್ದಾನೆ,” ಎಂದು ನೈಋತ್ಯ ಜಿಲ್ಲಾ ಕಚೇರಿಯ ಇನ್ಸ್‌ಪೆಕ್ಟರ್ ಜೇಮ್ಸ್ ಬ್ರಾಡ್ಲಿ ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಕಮಾಂಡರ್ ಪಾಲ್ ಬ್ರೆಸ್‌ಲ್ಯಾಂಡ್ ಬಾಲಕನ ಸಾಹಸವನ್ನು “ಅತಿ ಮಾನವ” ಸಾಹಸ(Superhuman) ಎಂದು ಬಣ್ಣಿಸಿದ್ದಾರೆ. “ಲೈಫ್ ಜಾಕೆಟ್ ಧರಿಸಿದ್ದರೆ ದಡ ಸೇರಲು ಸಾಧ್ಯವಿಲ್ಲ ಎಂದು ಭಾವಿಸಿ ಅದನ್ನು ಕಳಚಿಟ್ಟು ಈಜಿದ ಬಾಲಕನ ಧೈರ್ಯ ಅಸಾಮಾನ್ಯವಾದುದು,” ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಕುಟುಂಬದ ಸದಸ್ಯರೆಲ್ಲರೂ ಸುರಕ್ಷಿತವಾಗಿದ್ದು, ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಈ ಸಾಹಸ ಈಗ ಭಾರೀ ಸುದ್ದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ