ಮೈನ್‌ಪುರಿ (ಉತ್ತರ ಪ್ರದೇಶ): ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಸಂಬಂಧಿಸಿದಂತೆ ತಲೆತಗ್ಗಿಸುವಂತಹ ಘಟನೆಯೊಂದು ಉತ್ತರ ಪ್ರದೇಶದ ಮೈನಪುರಿಯಲ್ಲಿ ನಡೆದಿದೆ. ತನ್ನನ್ನು ನಿರಂತರವಾಗಿ ಪೀಡಿಸುತ್ತಿದ್ದ ವಿದ್ಯಾರ್ಥಿಯ ಕಾಟ ತಾಳಲಾರದೆ ಕೆಲಸ ಬಿಟ್ಟಿದ್ದ ಶಿಕ್ಷಕಿಯನ್ನು ಬೆನ್ನಟ್ಟಿದ ವಿದ್ಯಾರ್ಥಿ, ಜನವರಿ 26ರಂದು ಹಲ್ಲೆ ನಡೆಸಿ ಆಕೆಯ ಎರಡು ತುಟಿಗಳನ್ನು ಕತ್ತರಿಸಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ಆಗ್ರಾ ರಸ್ತೆಯ ಖಾಸಗಿ ಶಾಲೆಯೊಂದರಲ್ಲಿ ಈ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದರು. ಅದೇ ಶಾಲೆಯ 12ನೇ ತರಗತಿಯ ವಿದ್ಯಾರ್ಥಿ ಕಳೆದ ಕೆಲವು ಸಮಯದಿಂದ ಶಿಕ್ಷಕಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ವಿದ್ಯಾರ್ಥಿಯ ತಾಯಿಗೂ ದೂರು ನೀಡಲಾಗಿತ್ತು. ಆ ಸಮಯದಲ್ಲಿ ತಾಯಿ ತನ್ನ ಮಗನ ವರ್ತನೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು.
ಕೆಲಸ ಬಿಟ್ಟರೂ ನಿಲ್ಲದ ಕಿರುಕುಳ:
ಪೋಷಕರಿಗೆ ದೂರು ನೀಡಿದರೂ ವಿದ್ಯಾರ್ಥಿಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಇದರಿಂದ ಮನನೊಂದ ಶಿಕ್ಷಕಿ ಆ ಶಾಲೆಯ ಕೆಲಸಕ್ಕೆ ರಾಜೀನಾಮೆ ನೀಡಿ, ಮತ್ತೊಂದು ಶಾಲೆಗೆ ಸೇರಿಕೊಂಡಿದ್ದರು. ಆದರೆ, ಆರೋಪಿ ವಿದ್ಯಾರ್ಥಿ ಅಲ್ಲಿಗೂ ಬೆನ್ನಟ್ಟಿ ಬಂದು ಪ್ರತಿದಿನ ಆಕೆಯನ್ನು ಹಿಂಬಾಲಿಸುತ್ತಾ (Stalking) ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಶಿಕ್ಷಕಿಯ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.
ಜನವರಿ 26ರಂದು ನಡೆದಿದ್ದೇನು?
ಗಣರಾಜ್ಯೋತ್ಸವದ ದಿನದಂದು ಶಿಕ್ಷಕಿ ತನ್ನ ಹೊಸ ಕೆಲಸಕ್ಕೆ ತೆರಳುತ್ತಿದ್ದಾಗ ದಾರಿಯಲ್ಲಿ ಅಡ್ಡಗಟ್ಟಿದ ವಿದ್ಯಾರ್ಥಿ, ಹರಿತವಾದ ಆಯುಧದಿಂದ ಆಕೆಯ ಮುಖಕ್ಕೆ ಹಲ್ಲೆ ಮಾಡಿದ್ದಾನೆ. ಈ ಭೀಕರ ದಾಳಿಯಲ್ಲಿ ಶಿಕ್ಷಕಿಯ ಮೇಲಿನ ಮತ್ತು ಕೆಳಗಿನ ಎರಡೂ ತುಟಿಗಳು ತುಂಡಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ದಾಳಿಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸ್ ಕ್ರಮ:
ಘಟನೆಗೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಫತೇ ಬಹದ್ದೂರ್ ಸಿಂಗ್ ಪ್ರತಿಕ್ರಿಯಿಸಿದ್ದು, “ಶಿಕ್ಷಕಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿ ವಿದ್ಯಾರ್ಥಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಶೀಘ್ರದಲ್ಲೇ ಆತನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ