ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆಯು (AI) ಮಾನವನ ಕಲ್ಪನೆಗೂ ಮೀರಿದ ವೇಗದಲ್ಲಿ ಜಗತ್ತನ್ನು ಬದಲಿಸುತ್ತಿದೆ. ಇಂದಿನವರೆಗೂ ಇ ಮೇಲ್ ಬರೆಯಲು, ವೇಳಾಪಟ್ಟಿ ನಿರ್ವಹಿಸಲು ಅಥವಾ ವೀಡಿಯೊ ತಯಾರಿಸಲು ನಾವು ಎಐ ಅನ್ನು ಬಳಸುತ್ತಿದ್ದೆವು. ಆದರೆ, ಭೌತಿಕ ಜಗತ್ತಿನಲ್ಲಿ ಒಂದು ಕೆಲಸ ಮಾಡಬೇಕಾದಾಗ ಎಐ ಏನು ಮಾಡುತ್ತದೆ? ಈಗ ಅದಕ್ಕೊಂದು ಅಚ್ಚರಿಯ ಉತ್ತರ ಸಿಕ್ಕಿದೆ. ತನ್ನ ಕೆಲಸಗಳನ್ನು ಪೂರೈಸಿಕೊಳ್ಳಲು ಎಐ ಇನ್ನು ಮುಂದೆ ಮನುಷ್ಯರನ್ನೇ ಬಾಡಿಗೆಗೆ ಪಡೆಯಲಿದೆ…! ಕೇಳಲು ವಿಚಿತ್ರವೆನಿಸಿದರೂ ಇದು ಈಗ ವಾಸ್ತವ. ರೆಂಟ್‌ಎಹ್ಯೂಮನ್.ಎಐ (RentAHuman.ai) ಎಂಬ ಹೊಸ ಪ್ಲಾಟ್‌ಫಾರ್ಮ್ ಈ ವಿಶಿಷ್ಟ ಸೇವೆಗೆ ನಾಂದಿ ಹಾಡಿದೆ.
ಏನಿದು RentAHuman.ai?
ಇದು ಎಐ ಏಜೆಂಟ್‌ಗಳು ಮತ್ತು ಮನುಷ್ಯರ ನಡುವಿನ ಒಂದು ಮಾರುಕಟ್ಟೆ (Marketplace). ಎಐ ವ್ಯವಸ್ಥೆಗಳಿಗೆ ಭೌತಿಕ ಉಪಸ್ಥಿತಿಯ ಅಗತ್ಯವಿರುವ ಕೆಲಸಗಳಿಗಾಗಿ ಇಲ್ಲಿ ಮನುಷ್ಯರನ್ನು ಹುಡುಕಿ ಕೆಲಸಕ್ಕೆ ನೇಮಿಸಿಕೊಳ್ಳಬಹುದು. ಯುಎಂಎ(UMA) ಪ್ರೋಟೋಕಾಲ್’ನ ಕ್ರಿಪ್ಟೋ ಇಂಜಿನಿಯರ್ ಅಲೆಕ್ಸಾಂಡರ್ ಲೈಟ್‌ಪ್ಲೋ ಈ ಪ್ಲಾಟ್‌ಫಾರ್ಮ್ ಅನ್ನು ಆರಂಭಿಸಿದ್ದಾರೆ.
“ರೋಬೋಟ್‌ಗಳಿಗೆ ನಿಮ್ಮ ದೇಹದ ಅಗತ್ಯವಿದೆ, ಏಕೆಂದರೆ ಅವುಗಳಿಗೆ ಹುಲ್ಲನ್ನು ಮುಟ್ಟಲು ಸಾಧ್ಯವಿಲ್ಲ” (Robots need your body because they can’t touch grass) ಎನ್ನುವುದು ಈ ವೆಬ್‌ಸೈಟ್‌ನ ಆಕರ್ಷಕ ಸ್ಲೋಗನ್.
ಎಐ ಮನುಷ್ಯರಿಂದ ಏನೆಲ್ಲಾ ಕೆಲಸ ಮಾಡಿಸಿಕೊಳ್ಳುತ್ತದೆ?
ಈ ಪ್ಲಾಟ್‌ಫಾರ್ಮ್ ಮೂಲಕ ಎಐ ಏಜೆಂಟ್‌ಗಳು ಕೆಲವು ಕೆಲಸಗಳಿಗಾಗಿ ಮನುಷ್ಯರನ್ನು ಬಳಸಿಕೊಳ್ಳಬಹುದು.
ಪಾರ್ಸೆಲ್‌ಗಳ ವಿತರಣೆ
ದಿನಸಿ ಸಾಮಗ್ರಿಗಳನ್ನು ತರುವುದು.
ವಾಹನ ಚಾಲನೆ ಅಥವಾ ಯಾರಿಗಾದರೂ ಲಿಫ್ಟ್ ನೀಡುವುದು.
ಸಾಕು ಪ್ರಾಣಿಗಳಿಗೆ ಆಹಾರ ನೀಡುವುದು, ಇತ್ಯಾದಿ
ಕೇವಲ ಕೆಲಸ ಮಾತ್ರವಲ್ಲದೆ, ಒಂಟಿತನ ಕಳೆಯಲು ಯಾರೊಂದಿಗಾದರೂ ಮಾತನಾಡುವ ಕೆಲಸಗಳಿಗೂ ಇಲ್ಲಿ ಅವಕಾಶವಿದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಡೆವಲಪರ್‌ಗಳು ತಮ್ಮ ಎಐ ಏಜೆಂಟ್‌ಗಳನ್ನು ‘ಮೋಡಲ್ ಕಾಂಟೆಕ್ಸ್ಟ್ ಪ್ರೋಟೋಕಾಲ್’ (MCP) ಮೂಲಕ ಈ ಪ್ಲಾಟ್‌ಫಾರ್ಮ್‌ಗೆ ಜೋಡಿಸಬೇಕು. ಮನುಷ್ಯರು ತಮ್ಮ ಕೌಶಲಗಳು, ಭಾಷೆ, ಲಭ್ಯವಿರುವ ಪ್ರದೇಶ ಮತ್ತು ಪ್ರತಿ ಗಂಟೆಯ ದರವನ್ನು ನಮೂದಿಸಿ ಪ್ರೊಫೈಲ್ ರಚಿಸಬೇಕು. ಎಥೆರಿಯಮ್ ವಾಲೆಟ್ (Ethereum wallet) ಮೂಲಕ ಹಣ ಸಂದಾಯ ಮಾಡಲಾಗುತ್ತದೆ.
ಭಾರಿ ಬೇಡಿಕೆ ಮತ್ತು ಸಂಭಾವನೆ
ವರದಿಗಳ ಪ್ರಕಾರ, ಈ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುವವರಿಗೆ ಪ್ರತಿ ಗಂಟೆಗೆ ಸುಮಾರು $50 ರಿಂದ $69 (ಅಂದಾಜು ₹4,200 ರಿಂದ ₹5,800) ವರೆಗೆ ಸಂಭಾವನೆ ಸಿಗುತ್ತಿದೆ. ಈಗಾಗಲೇ 1.56 ದಶಲಕ್ಷಕ್ಕೂ ಹೆಚ್ಚು ಮಂದಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿದ್ದು, ಸಾವಿರಾರು ಜನರು ನೋಂದಾಯಿಸಿಕೊಂಡಿದ್ದಾರೆ. ಸ್ಟಾರ್ಟ್‌ಅಪ್ ಎಕ್ಸಿಕ್ಯೂಟಿವ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಕೂಡ ಇದರಲ್ಲಿ ಆಸಕ್ತಿ ತೋರಿಸುತ್ತಿರುವುದು ವಿಶೇಷ.
ಈ ಬೆಳವಣಿಗೆಯು ಎಐ ಮತ್ತು ಮಾನವನ ನಡುವಿನ ಸಂಬಂಧವನ್ನು ಸಂಪೂರ್ಣವಾಗಿ ಬದಲಿಸುತ್ತಿದೆ. ಇಲ್ಲಿಯವರೆಗೆ ಮನುಷ್ಯರು ಎಐ ಅನ್ನು ನಿಯಂತ್ರಿಸುತ್ತಿದ್ದರು, ಆದರೆ ಈಗ ಎಐ ತನ್ನ ಭೌತಿಕ ಅಗತ್ಯಗಳಿಗಾಗಿ ಮನುಷ್ಯರನ್ನು ನಿರ್ದೇಶಿಸುವ ಕಾಲ ಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ