ಶಿರಸಿ : ಬೆಣಗಿಯಲ್ಲಿ ಜೇನು ಹಬ್ಬ ; ಪ್ರಾತ್ಯಕ್ಷಿಕೆ-ಸಂಭ್ರಮಪಟ್ಟ ಮಕ್ಕಳು

ಶಿರಸಿ : ತಾಲೂಕಿನ ಬೆಣಗಿಯಲ್ಲಿ ಶನಿವಾರ ಜೇನು ಹಬ್ಬ ಕಾರ್ಯಕ್ರಮ ನಡೆಯಿತು. ಇದರಲ್ಲಿ ಶಾಲಾ ಮಕ್ಕಳು ಪಾಲ್ಗೊಂಡು ಅವರೇ ಜೇನು ಹಬ್ಬ ಉದ್ಘಾಟಿಸಿ ಅದರಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು.
ಪ್ರಕೃತಿ ಸಂಸ್ಥೆ, ಪೇವಾರ್ಡ್‌ ಸಂಸ್ಥೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡೇಬೈಲ್ ಶಾಲೆ, ವನಗಿರಿ ಇಕೋ ಕ್ಲಬ್‌, ರಾಷ್ಟ್ರೀಯ ಹಸಿರು ಪಡೆ ಸಹಯೋಗದಲ್ಲಿ ಬೆಣಗಿಯ ನಾಗರಾಜ ಹೆಗಡೆ ಅವರ ಜಮೀನಿನಲ್ಲಿ ನಡೆದ ಜೇನು ಹಬ್ಬ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಜೇನು, ಜೇನಿನ ಮಹತ್ವ ಹಾಗೂ ಜೇನು ತುಪ್ಪ ಹೇಗೆ ತಯಾರಾಗುತ್ತವೆ ಎಂದು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಯಿತು. ಜೇನು ನೊಣಗಳಿಂದ ಉತ್ಪನ್ನವಾಗುವ ಮೇಣದಿಂದ ಜೇನು ಗೂಡುಗಳು ಹೇಗೆ ತಯಾರಾಗುತ್ತವೆ, ಸಾವಿರಾರು ನೊಣಗಳು ಸೇರಿ ಒಟ್ಟಾಗಿ ಈ ಗೂಡುಗಳಲ್ಲಿ ಸಣ್ಣ ಸಣ್ಣ ಕೋಣೆಗಳನ್ನು ಹೇಗೆ ನಿರ್ಮಿಸುತ್ತವೆ..? ರಾಣಿ ಜೇನು ಇಡುವ ಮೊಟ್ಟೆಗಳಿಂದ ಮರಿಗಳು ಹೇಗೆ ಜನಿಸುತ್ತವೆ, ಕೆಲಸಗಾರ ಜೇನುನೊಣಗಳು ಹೂವುಗಳಿಂದ ಮಕರಂದವನ್ನು ಹೀರಿ ತಂದು ಜೇನುಗಳು ತುಪ್ಪವನ್ನು ಹೇಗೆ ತಯಾರಿಸುತ್ತವೆ ? ಗೂಡುಗಳಲ್ಲಿ ಜೇನುತುಪ್ಪ ಸಂಗ್ರಹವಾದಾಗ ಜೇನು ಹುಳಗಳು ಅದರ ಮೇಲೆ ಮೇಣದ ಲೇಪನವನ್ನು ಮಾಡಿ ಅದನ್ನು ಹೇಗೆ ಭದ್ರಪಡಿಸುತ್ತವೆ. ಪರಾಗ ಸ್ಪರ್ಷ ಕ್ರಿಯೆಯಲ್ಲಿ ಜೇನುಗಳ ಮಹತ್ವದ ಪಾತ್ರ ಇತ್ಯಾದಿ ಸಂಗತಿಗಳ ಬಗ್ಗೆ ಮಕ್ಕಳಿಗೆ ಎಳೆಎಳೆಯಾಗಿ ವಿವರಿಸಲಾಯಿತು.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

ಹಿರಿಯ ಜೇನು ಕೃಷಿಕರಾದ ಸೀತಾರಾಮ ಹೆಗಡೆ ಹುಡೇಲಕೊಪ್ಪ, ನಾಗರಾಜ ಹೆಗಡೆ, ಪ್ರಸನ್ನ ಹೆಗಡೆ ಅವರು ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ವಿವರಿಸಿದರು. ಪುಟ್ಟ ವಿದ್ಯಾರ್ಥಿಗಳು ಜೇನು ಹುಳಗಳಿರುವ ಗೂಡಿನ ಚೌಕಟ್ಟುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅಮೆರಿಕದ ಪ್ರೊ. ಜಾರ್ಜ್‌ ಜೇಮ್ಸ್‌ ಮಾತನಾಡಿ, ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಜೇನು ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ. ಅಮೆರಿಕದಲ್ಲಿ ಈ ತರಹದ ಕಾರ್ಯಕ್ರಮಗಳು ನಡೆಯುವುದು ಅಪರೂಪ ಎಂದರು.
ಫೇವಾರ್ಡ್‌ ಸಂಸ್ಥೆ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿ, ಇಂತಹ ಪ್ರಾತಕ್ಷಿಕೆಗಳು ನಡೆದಿದ್ದರಿಂದಲೋ ಏನೋ ಈಗ ಉತ್ತರ ಕನ್ನಡದಲ್ಲಿ ಜೇನು ಕೃಷಿಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಹುಡೇಲಕೊಪ್ಪ ಶಾಲಾ ಶಿಕ್ಷಕರಾದ ಈಶ್ವರ ನಾಯ್ಕ ಮಾತನಾಡಿ, ನಾವು ಚಿಕ್ಕವರಿರುವಾಗ ಜೇನು ಹುಳುಗಳನ್ನು ನೋಡಿದಾಕ್ಷಣ ಹೆದರಿ ಓಡುತ್ತಿದ್ದೆವು. ಆದರೆ ಇಲ್ಲಿ ಮಕ್ಕಳು ಅವುಗಳನ್ನು ಕೈಯಲ್ಲಿ ಮುಟ್ಟಿದ್ದಾರೆ. ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳಿಗೆ ಜೇನು ಹುಳುಗಳ ಬಗ್ಗೆ ವಿವರಿಸುವುದರಿಂದ ಜೇನಿನ ಬಗ್ಗೆ ಹೆಚ್ಚಿನ ಅರಿವು ಮೂಡುತ್ತದೆ ಎಂದರು.
ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣ ಹೆಗಡೆ ಗೋರ್ನಮನೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮೂಡೇಬೈಲ್ ಶಾಲೆ ಶಿಕ್ಷಕಿ ರಾಜೇಶ್ವರಿ ಭಟ್, ಹುಡೇಲಕೊಪ್ಪ ಹಾಗೂ ಮೂಡೇಬೈಲ್ ಶಾಲೆ ವಿದ್ಯಾರ್ಥಿಗಳು, ಜೇನು ಕೃಷಿಕರು, ಆಸಕ್ತರು ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement