ಪಾಟ್ನಾ: ಸುಮಾರು 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಬಿಹಾರದ ಕುಖ್ಯಾತ ಅಪರಾಧಿಗಳಾದ ಮನೋಜ ಸಿಂಗ್ ಮತ್ತು ಆತನ ಪುತ್ರ ಮಾಣಿಕ್ ಸಿಂಗ್‌ನನ್ನು ಬಿಹಾರ ವಿಶೇಷ ಕಾರ್ಯಪಡೆ (STF) ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಂಧಿಸಿದೆ. ಈ ಕಾರ್ಯಾಚರಣೆಗೆ ಬೆಂಗಳೂರಿನ ರಾಜ್ಯ ಗುಪ್ತಚರ ವಿಭಾಗದ ಪೊಲೀಸರು ಸಾಥ್ ನೀಡಿದ್ದಾರೆ.
ಬಂಧಿತರಿಂದ ಎಂಟು ಡಾಂಗಲ್‌ಗಳು, ಒಂಬತ್ತು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಹಾಗೂ ಮೂರು ಕೀಪ್ಯಾಡ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
24 ಕೊಲೆ ಪ್ರಕರಣಗಳಲ್ಲಿ ವಾಂಟೆಡ್
ಪಟ್ನಾ ಮೂಲದ ಈ ತಂದೆ-ಮಗನ ಮೇಲೆ 24 ಕೊಲೆ ಪ್ರಕರಣಗಳು ಸೇರಿದಂತೆ ಸುಲಿಗೆ, ದರೋಡೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಒಟ್ಟು 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವರ ವಿರುದ್ಧ ಬಿಹಾರ ಮಾತ್ರವಲ್ಲದೆ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲೂ ಪ್ರಕರಣಗಳು ದಾಖಲಾಗಿವೆ.
ಬಂಧಿತರ ಪೈಕಿ ಒಬ್ಬನ ಮೇಲೆ 3 ಲಕ್ಷ ರೂ. ಹಾಗೂ ಮತ್ತೊಬ್ಬನ ಮೇಲೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಮಾಣಿಕ್ ಸಿಂಗ್ ಬೆಂಗಳೂರಿನಲ್ಲಿ ನೆಲೆಸಿದ್ದು, ತಂದೆ ಮನೋಜ ಆಗಾಗ್ಗೆ ಮಗನನ್ನು ಭೇಟಿ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ವರ್ಷ ಪಟ್ನಾದಲ್ಲಿ ಮನೀಶಕುಮಾರ ಎಂಬುವವರನ್ನು ಹತ್ಯೆ ಮಾಡಿದ ನಂತರ ಇವರಿಗಾಗಿ ಪೊಲೀಸರು ಬಲೆ ಬೀಸಿದ್ದರು. 2015 ರಲ್ಲಿ ಒಮ್ಮೆ ಬಂಧಿತರಾಗಿದ್ದ ಇವರು, ಜಾಮೀನಿನ ಮೇಲೆ ಹೊರಬಂದ ನಂತರ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿ ಅಲ್ಲಿಯೂ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದರು. ಈ ಹಿಂದೆ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದ ‘ಛೋಟೆ ಸರ್ಕಾರ್’ ಎಂಬ ಕೈದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವಾಗ ಹತ್ಯೆ ಮಾಡಿದ ಗಂಭೀರ ಆರೋಪವೂ ಇವರ ಮೇಲಿದೆ.
“ಎನ್‌ಕೌಂಟರ್ ಭೀತಿ” – ವೀಡಿಯೊ ಬಿಡುಗಡೆ ಮಾಡಿದ್ದ ಆರೋಪಿಗಳು
ಬಂಧನಕ್ಕೀಗಿಂತ ಮೊದಲು ಮಾಣಿಕ್ ಮತ್ತು ಮನೋಜ್ ವೀಡಿಯೊ ಬಿಡುಗಡೆ ಮಾಡಿದ್ದರು. ತಮಗೆ ಎನ್‌ಕೌಂಟರ್ ಭೀತಿ ಇದೆ ಎಂದು ಆರೋಪಿಸಿದ್ದ ಅವರು, ತಮ್ಮನ್ನು ಕೈಕೋಳ ಹಾಕಿ ಬಂಧಿಸಿ ಕರೆದೊಯ್ಯುವಂತೆ ಮನವಿ ಮಾಡಿಕೊಂಡಿದ್ದರು.
ಪ್ರಸ್ತುತ ಈ ಇಬ್ಬರು ಆರೋಪಿಗಳಿಗೆ ಆಶ್ರಯ ನೀಡಿದವರು ಮತ್ತು ಇವರ ಸಹಚರರಿಗಾಗಿ ಬಿಹಾರ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ