ವೀಡಿಯೊ..| ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನ ಅಪಹರಣ, ಡ್ರಗ್ಸ್‌ ನೀಡಿ ಬಲವಂತದ ಮದುವೆ…!

ಸಮಷ್ಟಿಪುರ: ಬಿಹಾರದ ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನೊಬ್ಬನನ್ನು ಅಪಹರಿಸಿ, ಮಾದಕ ದ್ರವ್ಯ ನೀಡಿ ಆತನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಹರಿಸಲ್ಪಟ್ಟ ನಿತೀಶಕುಮಾರ ಸಂಪೂರ್ಣ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿರುವುದು ಕಂಡುಬಂದಿದೆ. “ವರಮಾಲೆ” ಕಾರ್ಯಕ್ರಮದ ಸಮಯದಲ್ಲಿ ನಿತೀಶಗೆ ಮಾಲೆಯನ್ನು ಹಿಡಿಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಮತ್ತೊಬ್ಬ ವ್ಯಕ್ತಿ ಆತನ ಕೈಯನ್ನು ಬಲವಂತವಾಗಿ ಹಿಡಿದು ವಧುವಿನ ಕೊರಳಿಗೆ ಮಾಲೆ ಹಾಕಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಬಿಹಾರದ ಕುಖ್ಯಾತ ‘ಪಕಡ್ವಾ ವಿವಾಹ’ (ವರನ ಅಪಹರಣ ಮತ್ತು ಬಲವಂತದ ಮದುವೆ) ಸಂಪ್ರದಾಯಕ್ಕೆ ಈ ಘಟನೆ ಹೊಸ ಸೇರ್ಪಡೆಯಾಗಿದೆ. ಇದು ಅವಿವಾಹಿತ ಪುರುಷರನ್ನು ಗನ್ ತೋರಿಸಿ ಬೆದರಿಸಿ ಅಥವಾ ಅಪಹರಿಸಿ ಮದುವೆ ಮಾಡುವ ಪದ್ಧತಿಯಾಗಿದೆ.

ಘಟನೆಯ ವಿವರ:
ಜೋಡಿ ಪೋಖರ್ ಗ್ರಾಮದ ನಿವಾಸಿಯಾದ ನಿತೀಶಕುಮಾರ, ಘಟನೆಯ ನಂತರ ವೀಡಿಯೊ ಬಿಡುಗಡೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಫೆಬ್ರವರಿ 7 ರಂದು ಅವರು ಲೈಬ್ರರಿಗೆ ಹೋಗುತ್ತಿದ್ದಾಗ ಒಂದು ಗುಂಪು ಅವರನ್ನು ಅಪಹರಿಸಿತ್ತು. “ನನ್ನ ಮೇಲೆ ಹಲ್ಲೆ ನಡೆಸಿ, ಮಾದಕ ದ್ರವ್ಯ ನೀಡಿ ಮೋರ್ವಾ ಎಂಬಲ್ಲಿನ ದೇವಸ್ಥಾನಕ್ಕೆ ಕರೆದೊಯ್ದರು. ಅಲ್ಲಿ ಶಂಕರ ರೈ ಎಂಬುವವರ ಮಗಳಾದ ಲಕ್ಷ್ಮಿ ಕುಮಾರಿ ಜೊತೆ ಬಲವಂತವಾಗಿ ಮದುವೆ ಮಾಡಿಸಿದರು” ಎಂದು ನಿತೀಶ ಆರೋಪಿಸಿದ್ದಾರೆ. ಮದುವೆಯ ನಂತರ ಅತ್ತೆ-ಮಾವನ ಮನೆಯಲ್ಲಿ ತನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಪೊಲೀಸ್ ಕ್ರಮ:
ವೀಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಮಷ್ಟಿಪುರ ಪೊಲೀಸರು, ನಿತೀಶ ಅವರನ್ನು ಆ ಮನೆಯಿಂದ ರಕ್ಷಿಸಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಪಟೋರಿ ಪೊಲೀಸ್ ಠಾಣೆಯ ಪ್ರಭಾರಿ ಅನಿಲಕುಮಾರ ಮಾತನಾಡಿ, “ಪ್ರಕರಣದ ತನಿಖೆ ನಡೆಯುತ್ತಿದೆ. ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಈ ಮದುವೆಯನ್ನು ಬಲವಂತವಾಗಿ ಮಾಡಿಸಲಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ನಾನು ಬದುಕಲ್ಲ ಎಂದು ಅನ್ಸಿತ್ತು..ಆದ್ರೆ ಪ್ರಯಾಣಿಕರ ಉಳಿಸಲು ಹೋರಾಡ್ಲೇಬೇಕಿತ್ತು’: ಫ್ಲೈದುಬೈ ದಾಳಿಯ ಭೀಕರ ಕ್ಷಣ ಬಿಚ್ಚಿಟ್ಟ ಪೈಲಟ್‌ ಸ್ಮಿತ್ ಮಚ್ಚಾರ್

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement