ಬೆಂಗಳೂರು: ರಾಜಧಾನಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road) ಬೆಚ್ಚಿಬೀಳಿಸುವಂತಹ ‘ರೋಡ್ ರೇಜ್’ (Road Rage) ಘಟನೆಯೊಂದು ನಡೆದಿದೆ. ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರು ಇದ್ದಾಗಲೇ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಂಪು ಬಣ್ಣದ ಮಾರುತಿ ಸುಜುಕಿ XL6 ಕಾರು, ವ್ಯಕ್ತಿಯೊಬ್ಬರು ಅದರ ಬಾನೆಟ್ ಮೇಲೆ ಇರವಾಗಲೇ ಅತಿ ವೇಗವಾಗಿ ಚಲಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾನೆಟ್ ಮೇಲಿದ್ದ ವ್ಯಕ್ತಿಯು ಕಾರನ್ನು ನಿಲ್ಲಿಸುವಂತೆ ಕಿರುಚುತ್ತಾ, ಚಾಲಕನಲ್ಲಿ ಪದೇ ಪದೇ ವಿನಂತಿಸಿಕೊಂಡರೂ ಸಹ, ಚಾಲಕ ಮಾತ್ರ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ವಾಹನವನ್ನು ವೇಗವಾಗಿ ಚಲಾಯಿಸಿದ್ದಾನೆ.
ಈ ಅಪಾಯಕಾರಿ ದೃಶ್ಯದ ವೇಳೆ ರಸ್ತೆಯಲ್ಲಿ ಆಟೋ ರಿಕ್ಷಾಗಳು ಮತ್ತು ಭಾರಿ ಗಾತ್ರದ ಲಾರಿಗಳು ಸಂಚರಿಸುತ್ತಿದ್ದವು. ಬಾನೆಟ್ ತುದಿಯಲ್ಲಿದ್ದ ವ್ಯಕ್ತಿ ಸ್ವಲ್ಪವೇ ಆಯತಪ್ಪಿದ್ದರೂ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು. ಚಾಲಕನ ಈ ಬೇಜವಾಬ್ದಾರಿತನವು ಬಾನೆಟ್ ಮೇಲಿದ್ದ ವ್ಯಕ್ತಿಯ ಜೀವಕ್ಕೆ ಮಾತ್ರವಲ್ಲದೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರಿಗೂ ಸಂಕಷ್ಟ ತಂದೊಡ್ಡುವಂತಿತ್ತು.
ವಿವಾದದ ಹಿನ್ನೆಲೆ:
ಬೆಂಗಳೂರು ಸಂಚಾರಿ ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆಗೆ ಹಲಸೂರು ಪ್ರದೇಶದಲ್ಲಿ ಸರಕು ಸಾಗಣಿಕಾ ವಾಹನ ಮತ್ತು ಎಸ್‌ಯುವಿ ವಾಹನಗಳು ಟಚ್ ಆಗಿದ್ದು ಕಾರಣ ಎನ್ನಲಾಗಿದೆ. ಆರೋಪಿ ಚಾಲಕನ ಎಸ್‌ಯುವಿ ಕಾರು ಮೊದಲು ಗೂಡ್ಸ್ ರಿಕ್ಷಾಕ್ಕೆ ತಗುಲಿತ್ತು. ಈ ವಿಚಾರವಾಗಿ ಆಟೋ ಚಾಲಕ ಮತ್ತು ಕಾರು ಚಾಲಕನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಎಸ್‌ಯುವಿ ಚಾಲಕ ಕಾರು ಚಲಾಯಿಸಲು ಮುಂದಾಗುತ್ತಿದ್ದಂತೆ ಸರಕು ವಾಹನದ ಚಾಲಕ ಕಾರಿನ ಬಾನೆಟ್ ಮೇಲೆ ಹತ್ತಿ ಕಾರು ಹೋಗುವುದನ್ನು ತಡೆದಿದ್ದಾನೆ. ಈ ವೇಳೆ ಆಕ್ರೋಶಗೊಂಡ ಎಸ್‌ಯುವಿ ಚಾಲಕ ಕಾರು ಚಲಾಯಿಸಿಕೊಂಡು ಆ ವ್ಯಕ್ತಿಯನ್ನು ಎಳೆದೊಯ್ದಿದ್ದಾನೆ ಎನ್ನಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು (DCP East), “ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ,” ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ